ADVERTISEMENT

ಡಿಜಿಟಲ್‌ ವೇದಿಕೆಗಳಲ್ಲಿ ಆಧುನಿಕ ಜೀತ ಪದ್ಧತಿ; ನ್ಯಾಯಾಧೀಶ ಎಂ.ವಿಜಯ್ ಕಳವಳ

ಜೀತ ಪದ್ಧತಿ ನಿರ್ಮೂಲನೆ ಜಾಗೃತಿ ಜಾಥಾ; ನ್ಯಾಯಾಧೀಶ ಎಂ.ವಿಜಯ್ ಕಳವಳ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:26 IST
Last Updated 10 ಫೆಬ್ರುವರಿ 2026, 5:26 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೀತ ಪದ್ಧತಿ ನಿರ್ಮೂಲನಾ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ. ವಿಜಯ್‌ ಚಾಲನೆ ನೀಡಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೀತ ಪದ್ಧತಿ ನಿರ್ಮೂಲನಾ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ. ವಿಜಯ್‌ ಚಾಲನೆ ನೀಡಿದರು   

ಚಿತ್ರದುರ್ಗ: ‘ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಜೀತ ಪದ್ಧತಿ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಇವುಗಳನ್ನು ಗುರುತಿಸಿ ಹತ್ತಿಕ್ಕುವ ಕಾರ್ಯ ನಡೆಯಬೇಕಿದೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌ ಆಗ್ರಹಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರಸ್ತುತ ಸಮಾಜದಲ್ಲಿ ಜೀತ ಪದ್ಧತಿಯು ‘ಆಧುನಿಕ ಗುಲಾಮಗಿರಿ’ಯ ಸ್ವರೂಪ ಪಡೆದುಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಹಿಂದಿನ ಕಾಲದಲ್ಲಿ ಕೃಷಿ ವಲಯ, ಇಟ್ಟಿಗೆ ಗೂಡುಗಳು ಮತ್ತು ಕೋಳಿ ಫಾರಂಗಳಲ್ಲಿ ಕಂಡುಬರುತ್ತಿದ್ದ ಸಾಂಪ್ರದಾಯಿಕ ಜೀತ ಪದ್ಧತಿ ಈಗ ಕಡಿಮೆಯಾಗಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಹಾಗೂ ಗಿಗ್ ಎಕಾನಮಿ ವಲಯಗಳಲ್ಲಿ ಹೊಸ ಮಾದರಿಯ ಶೋಷಣೆ ಶುರುವಾಗಿದೆ’ ಎಂದರು.

‘ಡಿಜಿಟಲ್‌ ಸಂಸ್ಥೆಗಳು ಉದ್ಯೋಗಿಗಳಿಗೆ ಸಾಲದ ರೂಪದಲ್ಲಿ ಹಣ ನೀಡಿ, ಆ ನೆಪದಲ್ಲಿ ಅವರನ್ನು ದೀರ್ಘಕಾಲದವರೆಗೆ ಕೆಲಸಕ್ಕೆ ಕಟ್ಟುಬೀಳುವಂತೆ ಮಾಡುತ್ತಿವೆ. ಸಾಲ ತೀರಿಸುವ ನೆಪದಲ್ಲಿ ಉದ್ಯೋಗಿಗಳನ್ನು ಕಷ್ಟಕ್ಕೆ ದೂಡುವುದು ಆಧುನಿಕ ಜೀತ ಪದ್ಧತಿಯ ಭಾಗ’ ಎಂದು ತಿಳಿಸಿದರು.

‘ಜೀತ ಪದ್ಧತಿಯು ಯಾವುದೇ ಪ್ರತಿಫಲವಿಲ್ಲದೇ ದುಡಿಸಿಕೊಳ್ಳುವ ಒಂದು ಅನಿಷ್ಟ ಪದ್ಧತಿ. ಈ ಹಿಂದೆ ಇದ್ದ ಸ್ವರೂಪ ಈಗ ಬದಲಾಗಿದ್ದು, ಹೊಸ ರೂಪದಲ್ಲಿ ಶೋಷಣೆ ನಡೆಯುತ್ತಿದೆ. ಇದನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

‘ಪ್ರತಿಯೊಬ್ಬ ಶ್ರಮಿಕ, ಕಾರ್ಮಿಕ ಮತ್ತು ರೈತರು ಸುರಿಸುವ ಪ್ರತಿ ಬೆವರಿನ ಹನಿಗೂ ತಕ್ಕ ಪ್ರತಿಫಲ ಸಿಗಬೇಕು. ಅವರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಹಾಗೂ ಜನರ ಕರ್ತವ್ಯವಾಗಿದೆ’ ಎಂದು ಹೇಳಿದರು.

ಜಾಗೃತಿ ಜಾಥಾ ಓನಕೆ ಓಬವ್ವ ವೃತ್ತ, ಮದಕರಿ ನಾಯಕ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಪುನಃ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು. ಮಾನವ ಸರಪಳಿ ನಿರ್ಮಿಸಿ ‘ಜೀತ ಬಿಡಿಸಿ ಶಾಲೆಗೆ ಕಳುಹಿಸಿ, ನಿಲ್ಲಿಸಿ ನಿಲ್ಲಿಸಿ ಜೀತಪದ್ಧತಿ ಕೊನೆಗೊಳಿಸಿ, ಜೀತ ಆಧುನಿಕ ಕಾಲದ ಗುಲಾಮಿ ಪದ್ಧತಿ, ಇದಕ್ಕೆ ಬಡತನ, ಅನಕ್ಷರತೆ, ಅಸ್ಪೃಶ್ಯತೆ ಕಾರಣ. ಜೀತ ಪದ್ಧತಿ ತಡೆಗಟ್ಟಲು ಕೈಜೋಡಿಸಿ.. ಜೀತದಾಳುಗಳಿಗೆ ಮುಕ್ತಿ ನೀಡಿ, ಜೀತ ಪದ್ಧತಿ ಮಾನವ ಕುಲಕ್ಕೆ ಅಂಟಿದ ಶಾಪ.. ಬನ್ನಿ ಅದನ್ನು ಹೋಗಲಾಡಿಸಲು ಶ್ರಮಿಸೋಣ’ ಎಂದು ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್‌ ಬಗಟಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್‌. ಮಂಜುನಾಥ್‌, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ ಕುಮಾರ್‌ ಇದ್ದರು.

ಬದಲಾದ ಸನ್ನಿವೇಶ ಎದುರಿಸಲು ಕಾರ್ಮಿಕ ಇಲಾಖೆಯು ತನ್ನ ಕಾರ್ಯವೈಖರಿ ಬದಲಿಸಿಕೊಳ್ಳಬೇಕಿದೆ. ಕೇವಲ ಹಳೆಯ ಪದ್ಧತಿಯ ಮೇಲೆ ನಿಗಾ ಇಡುವುದರ ಜೊತೆಗೆ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳ ಮೇಲೂ ಕಣ್ಗಾವಲು ಇಡಬೇಕು.
ಎಂ.ವಿಜಯ್‌ ಹಿರಿಯ ಸಿವಿಲ್‌ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.