ADVERTISEMENT

ಚಿತ್ರದುರ್ಗ | ಬಿಡುವಿಲ್ಲದ ಕೆಲಸಗಳ ನಡುವೆಯೂ ಕಾ. ರಾಮೇಶ್ವರಪ್ಪರವರ ಜಾನಪದ ಕಾಯಕ

ಹೊಸದುರ್ಗ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಕಾ. ರಾಮೇಶ್ವರಪ್ಪ

ಶ್ವೇತಾ ಜಿ.
Published 20 ಆಗಸ್ಟ್ 2022, 4:45 IST
Last Updated 20 ಆಗಸ್ಟ್ 2022, 4:45 IST
ಕಾ. ರಾಮೇಶ್ವರಪ್ಪ
ಕಾ. ರಾಮೇಶ್ವರಪ್ಪ   

ಹೊಸದುರ್ಗ: ಕೆ.ಎ.ಎಸ್‌ ಅಧಿಕಾರಿಯಾಗಿದ್ದು, ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಜಾನಪದ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಕಾ. ರಾಮೇಶ್ವರಪ್ಪ ಅವರಿಗೆಪ್ರಸಕ್ತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿದೆ.

ಪ್ರಾಥಮಿಕ ಶಿಕ್ಷಣಕ್ಕಾಗಿ ನಿತ್ಯ 6 ಕಿ.ಮೀ ಹಾಗೂ ಪ್ರೌಢ ಶಿಕ್ಷಣಕ್ಕಾಗಿ ನಿತ್ಯ 20 ಕಿ.ಮೀ ಕಾಲ್ನಡಿಗೆಯಲ್ಲಿ ನಡೆದು, ಅಕ್ಷರ ಕಲಿತವರು ರಾಮೇಶ್ವರಪ್ಪ. ಹುಟ್ಟುತ್ತಲೇ ಜಾನಪದ ಪರಿಸರದೊಂದಿಗೆ ನಂಟು ಬೆಳೆಸಿಕೊಂಡಿದ್ದ ಇವರ ತಂದೆ ಜಾನಪದ ಕೋಲಾಟದ ಶಿಕ್ಷಕ, ತಾಯಿ ಕೆಂಚಮ್ಮ ಸೋಬಾನೆ ಹಾಡುತ್ತ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ತಾಯಿಯೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇಡೀ ಕುಟುಂಬ ಜಾನಪದ ಸೇವೆಗಾಗಿ ಶ್ರಮಿಸುತ್ತಿದೆ.

ಪದವಿಗಳ ಸರದಾರ: ನಿರಂತರ ಅಭ್ಯಾಸದಲ್ಲಿ ತೊಡಗಿರುವ ಇವರು ಇಲ್ಲಿಯವರೆಗೆ 19 ಶೈಕ್ಷಣಿಕ ಪದವಿ ಪಡೆದಿದ್ದಾರೆ. 7 ಎಂ.ಎ ಪದವಿ, 1 ಎಂ.ಕಾಂ, 1 ಪಿಎಚ್‌ಡಿ,
1 ಎಂ.ಫಿಲ್‌ ಪದವಿ ಗಳಿಸಿರುವುದು
ವಿಶೇಷ.

ADVERTISEMENT

ಸತತ 40 ವರ್ಷಗಳಿಂದ ಜಾನಪದವನ್ನು ಮೂಲರೂಪದಲ್ಲೇ ರಕ್ಷಿಸಲು, ಕಲಾವಿದರ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಜಾನಪದ ಸಾಹಿತ್ಯ, ಸಂಗೀತ ಮತ್ತು ಕಲೆಗಳ ಬಗ್ಗೆ ಸಂಶೋಧನೆ ನಡೆಸಿ, ಅಧ್ಯಯನದಲ್ಲಿ
ತೊಡಗಿದ್ದಾರೆ.

ಜಾನಪದ ಗೀತೆ, ಕಾವ್ಯ, ಕಗ್ಗ, ಭಜನೆ, ಕೋಲಾಟ, ಅರೆವಾದ್ಯ, ತಮಟೆ, ಕರಡಿ ಮಜಲು, ಡೊಳ್ಳು ಕುಣಿತ, ವೀರಗಾಸೆ,
ಭಜನೆ, ನೃತ್ಯಗಳಲ್ಲಿ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯ ಇವರ ಸಾಧನೆಗೆ ಕಲಾಭಿಮಾನಿಗಳು ಮೆಚ್ಚಿ ‘ಜಾನಪದ ಜೀವಧ್ವನಿ, ಜಾನಪದ ಗಾರುಡಿ ಮತ್ತು ಜಾನಪದ ಜಗದ್ಗುರು’ ಸೇರಿ ಹಲವು ಬಿರುದುಗಳನ್ನು ನೀಡಿದ್ದಾರೆ.

ಕವನ ಸಂಕಲನಗಳು: ‘ಸಿರಿಗಂಧ’ ಕಾವ್ಯನಾಮದೊಂದಿಗೆ ಹೆಸರಾಗಿರುವ ಇವರು ‘ನಮ್ಮಿಬ್ಬರ ನಡುವೆ’, ‘ನೀ ನಡೆದು ಬಂದ ದಾರಿ’, ‘ಸಯಾ’, ‘ತೊರೆಸಾಲನ ಹಾಡು’ ಸೇರಿದಂತೆ ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ.

ಅಧಿಕಾರಿಯಾಗಿ ಗಮನಾರ್ಹ ಸೇವೆ:
ಕಾ. ರಾಮೇಶ್ವರಪ್ಪ ಅವರು 37 ವರ್ಷಗಳ ಕಾಲ ಕರ್ನಾಟಕ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಖಾದಿಮತ್ತು ಗ್ರಾಮೋದ್ಯೋಗ ಮಂಡಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಕೃಷ್ಣಾ ಮೇಲ್ದಂಡೆ ಯೋಜನೆ, ಪ್ರವಾಸೋದ್ಯಮ, ಪೌರಾಡಳಿತ ಮುಂತಾದ ಇಲಾಖೆಗಳಲ್ಲಿ ಶಿಸ್ತುಬದ್ಧ ಪಾರದರ್ಶಕಆಡಳಿತ ನೀಡಿದ್ದಾರೆ. ಸದ್ಯ ರಾಜ್ಯ ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನಿದನಿ ಬಳಗ: ಕಾ. ರಾಮೇಶ್ವರಪ್ಪ ಅವರ ನೇತೃತ್ವದಲ್ಲಿಯ ‘ಇನಿದನಿ ಕಲಾ ಸಂಸ್ಥೆ’ಯು ಜಾನಪದ ಕಲಾವಿದರ ಸಂಗಮ. ಈ ಬಳಗ 40 ವರ್ಷಗಳಿಂದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯ, ಸಂಗೀತ ಕಲೆಯ ಪ್ರದರ್ಶನದಲ್ಲಿ ತೊಡಗಿದೆ.

ತಂದೆಗೆ ಪ್ರಶಸ್ತಿ ಬರಬೇಕಿತ್ತು

ಹುಟ್ಟಿನಿಂದ ಜನಪದದಲ್ಲಿ ಆಸಕ್ತಿ ಹುಟ್ಟಲು ತಂದೆ ತಾಯಿಯ ಪ್ರೇರಣೆ ಇದೆ. ಇನ್ನೂ ಓದುವ ಹುಮ್ಮಸ್ಸಿದೆ. ಡಾ.ಬಿ.ಆರ್‌ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇನೆ. ವಿದ್ಯಾಭ್ಯಾಸದಲ್ಲಿ ಅವರ ಹಾದಿ ಹಿಡಿಯುವ ಆಸಕ್ತಿಯಿದೆ. ತಂದೆ ಕೋಲಾಟದ ಕಾಡಪ್ಪ ಅವರಿಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಬರುವ ನಿರೀಕ್ಷೆಯಿತ್ತು. ಅವರ ನಿಧನದಿಂದ ಅದು ಸಾಧ್ಯವಾಗಿಲ್ಲ, ಆ ನೋವು ಇಂದಿಗೂ ಇದೆ.‌

– ಕಾ. ರಾಮೇಶ್ವರಪ್ಪ, ಜಾನಪದ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.