ADVERTISEMENT

ಶಿವನಾಮ ಸಪ್ತಾಹಕ್ಕೆ ಕಬೀರಾನಂದಾಶ್ರಮ ಸಜ್ಜು

ಫೆ.11 ರಿಂದ 16ರವರೆಗೆ ಮಹೋತ್ಸವ ; ಅಂತಿಮ ಹಂತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:22 IST
Last Updated 10 ಫೆಬ್ರುವರಿ 2026, 5:22 IST
ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಕಾತ್ರಾಳ್‌ ಕೆರೆ ಗೋಶಾಲೆಯಲ್ಲಿ ಸೋಮವಾರ ಶಿವಲಿಂಗಾನಂದ ಸ್ವಾಮೀಜಿ ಗೋಪೂಜೆ ನೆರವೇರಿಸಿದರು
ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಚಿತ್ರದುರ್ಗದ ಕಾತ್ರಾಳ್‌ ಕೆರೆ ಗೋಶಾಲೆಯಲ್ಲಿ ಸೋಮವಾರ ಶಿವಲಿಂಗಾನಂದ ಸ್ವಾಮೀಜಿ ಗೋಪೂಜೆ ನೆರವೇರಿಸಿದರು   

ಚಿತ್ರದುರ್ಗ: ನಗರದ ಕಬೀರಾನಂದಾಶ್ರಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಶಿವನಾಮ ಸಪ್ತಾಹ ಭಕ್ತಿ, ಭಾವಪೂರ್ಣವಾಗಿ ನಡೆಯಲಿದೆ. 96ನೇ ಮಹೋತ್ಸವದ ಪ್ರಯುಕ್ತ ಶ್ರೀಮಠವನ್ನು ಸಿಂಗಾರಗೊಳಿಸಲಾಗುತ್ತಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.

ಫೆ. 11 ರಿಂದ 16ರವರೆಗೆ ಸಿದ್ಧಾರೂಡರ ಆಶಯದಂತೆ ಶಿವನಾಮ ಸ್ಮರಣೆ ಮೊಳಗಲಿದೆ. ಕೋಟೆನಾಡಲ್ಲಿ ಮಾನವ ಕಲ್ಯಾಣಕ್ಕಾಗಿ ಸ್ಥಾಪಿತವಾದ ಅದ್ವೈತ ಜಾತ್ಯಾತೀತ ಸಂಪ್ರದಾಯದ ಮಠವೇ ಸದ್ಗುರು ಕಬೀರಾನಂದಾಶ್ರಮ. ಜಾತಿ, ಮತದ ಚೌಕಟ್ಟು ಮೀರಿ, ಭಾವೈಕ್ಯತೆಯ ಮಂತ್ರ ಮೊಳಗುತ್ತಿದೆ.

ಮಹೋತ್ಸವದ ಅಂಗವಾಗಿ ಸೋಮವಾರ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾತ್ರಾಳ್ ಬಳಿಯ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಲಾಯಿತು. ಬ್ರಾಹ್ಮೀ ಮಹೂರ್ತದಲ್ಲಿ ಕಳಶ ಸ್ಥಾಪನೆ ಮಾಡಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಸಲಾಯಿತು. ಶಿವಮಾಹಿಮ್ನಾ ಸ್ತೋತ್ರ ಪಠಣೆಗೆ ಚಾಲನೆ ನೀಡಲಾಯಿತು. ನಿತ್ಯ ಶಿವಪಂಚಾಕ್ಷರಿ ಜಪ, ಶ್ರೀಮದ್ ಭಗವತ್ ಪಾರಾಯಣ ನಡೆಯಲಿದೆ.

ADVERTISEMENT

ಮಠದ ಆವರಣದಲ್ಲಿ ಮಹೋತ್ಸವದ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದ ಶಿವಲಿಂಗಾನಂದ ಸ್ವಾಮೀಜಿ, ‘ಆರು ದಿನ ನಡೆಯುವ ಮಹೋತ್ಸವದಲ್ಲಿ ವಿವಿಧ ಮಠಾಧೀಶರು,  ಸಾಹಿತಿಗಳು,  ವಾಗ್ಮಿಗಳು,  ವಿಚಾರವಾದಿಗಳು, ಚಿಂತಕರು ಆಗಮಿಸುತ್ತಿದ್ದಾರೆ. ಭಕ್ತರಿಗೆ ನಿತ್ಯ ಜ್ಞಾನ ಹಾಗೂ ಅನ್ನದಾಸೋಹ ನಡೆಯಲಿದೆ’ ಎಂದರು.

‘ಮಠದ ಆವರಣದಲ್ಲಿ ನಿತ್ಯ ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, 11 ರಂದು ಕನ್ನೇರಿ ಸಿದ್ಧಗಿರಿ ಮಠದ ಆದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಭಾ ಮಂಟಪ ಉದ್ಘಾಟಿಸಲಿದ್ದಾರೆ. ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ, ಶಿರೋಳದ ರಾಮಾರೂಢಮಠದ ಶಂಕರಾರೂಢ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.

‘ಅತಿಥಿಗಳಾಗಿ ಶಾಸಕ ಕೆ.ಸಿ. ವೀರೇಂದ್ರ, ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘12ರಂದು ಹಳಿಯಾಳದ ನಿತ್ಯಾನಂದಾಶ್ರಮದ ಸುಬ್ರಹ್ಮಣ್ಯ ಸ್ವಾಮೀಜಿ, ಯಲವಟ್ಟಿಯ ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ, ಬೀದರ್‌ ಗುರುದೇವಾಶ್ರಮದ ಗಣಪತಿ ಮಹಾರಾಜ್‌, ಹೋತನಹಳ್ಳಿ ಸಿದ್ದಾರೂಢಮಠದ ಶಂಕರಾನಂದಸ್ವಾಮೀಜಿ, ಕೂಸನೂರು ತಿಪ್ಪಯ್ಯ ಸ್ವಾಮಿ ಮಠದ ಜ್ಯೋತಿರ್ಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಎಚ್‌.ಆಂಜನೇಯ, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಉಪಸ್ಥಿತಿ ವಹಿಸಲಿದ್ದಾರೆ’ ಎಂದರು.

‘13 ರಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಚಳ್ಳಕೆರೆ ಸದ್ಗುರು ನರಹರಿ ಆಶ್ರಮದ ಯಾದಟಿ ನರಹರಿ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಶಾಸಕ ಎಂ.ಚಂದ್ರಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಪೌರಾಯುಕ್ತೆ ಲಕ್ಷ್ಮಿ ಭಾಗವಹಿಸಲಿದ್ದಾರೆ. ಸಾಹಿತಿ ಎಚ್‌. ಲಿಂಗಪ್ಪ ಸಂಪಾದಕತ್ವದ ‘ಮಹಾ ಬೆಳಗು’ ಗ್ರಂಥ ಬಿಡುಗಡೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘14 ರಂದು ಹೊಸದುರ್ಗದ ಉಪ್ಪಾರ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಗವಿಪುರ ಭವಾನಿ ಪೀಠದ ಮಂಜುನಾಥ ಭಾರತಿ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಸಂಸದ ಗೋವಿಂದ ಎಂ.ಕಾರಜೋಳ, ಶಾಸಕ ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್‌. ನವೀನ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಭಾಗವಹಿಸಲಿದ್ದಾರೆ’ ಎಂದು ವಿವರಿಸಿದರು.

‘15 ರಂದು ಬಾಗಲಕೋಟೆಯ ಕೌದೀಶ್ವರ ಮಠದ ಮಾಧವಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್‌, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಉಪಸ್ಥಿತರಿರುವರು’ ಎಂದರು.

‘26ರ ಬೆಳಿಗ್ಗೆ ವಿಭೂತಿ ಸ್ನಾನ, ಸಂಜೆ 5.30ರಿಂದ ಕೌದಿ ಪೂಜೆ ಮೂಲಕ ಸಪ್ತಾಹ ಸಮಾಪ್ತಿಯಾಗಲಿದೆ. ಬಿಜಿಎಸ್‌ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ್‌ ಸ್ವಾಮೀಜಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಮಹೋತ್ಸವದ ಅಧ್ಯಕ್ಷ ಎಸ್‌. ಭಾಸ್ಕರ, ಉಪಾಧ್ಯಕ್ಷ ಸಿದ್ದವ್ವನಹಳ್ಳಿ ಪರಮೇಶ್‌, ಸದಸ್ಯರಾದ ಎನ್‌. ಓಂಕಾರ್‌, ರುದ್ರೇಶ್‌ ಇದ್ದರು.

ಶ್ರೀಗಳ ಪಲ್ಲಕ್ಕಿ ಉತ್ಸವ ಮಹೋತ್ಸವದ ಅಂಗವಾಗಿ 15ರ ಮಧ್ಯಾಹ್ನ 3.30ರಿಂದ ಶಿವಲಿಂಗಾನಂದ ಸ್ವಾಮೀಜಿಯ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಹೋತ್ಸವದ ಅಧ್ಯಕ್ಷ ಎಸ್‌. ಭಾಸ್ಕರ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೀಲುಕುದುರೆ ತಮಟೆ ಜಾಂಜ್‌ ನೃತ್ಯ ಕಿನ್ನರಿ ಜೋಗಿ ಚಂಡೆ ಖಾಸಾ ಬೇಡರ ಪಡೆ ಡೊಳ್ಳು ಕುಣಿತ ಕೋಲಾಟ ಭಜನೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.