ADVERTISEMENT

ಚಿತ್ರದುರ್ಗ: ಪ್ರತ್ಯೇಕ ನಿಗಮಕ್ಕೆ ಕಾಡುಗೊಲ್ಲರ ಪಟ್ಟು

ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ವಿರೋಧ, ಶಾಸಕಿ ಕೆ.ಪೂರ್ಣಿಮಾ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 12:12 IST
Last Updated 29 ಸೆಪ್ಟೆಂಬರ್ 2020, 12:12 IST
ಡಾ. ದೊಡ್ಡಮಲ್ಲಯ್ಯ
ಡಾ. ದೊಡ್ಡಮಲ್ಲಯ್ಯ   

ಚಿತ್ರದುರ್ಗ: ರಾಜ್ಯ ಸರ್ಕಾರ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ ಕಾಡುಗೊಲ್ಲರಿಗೆ ವಂಚಿಸಿದೆ. ಪ್ರತ್ಯೇಕ ನಿಗಮ ಸ್ಥಾಪಿಸದಿದ್ದರೆ ಬೀದಿಗೆ ಇಳಿಯಲಾಗುವುದು ಎಂದು ರಾಜ್ಯ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಸರ್ಕಾರದ ತೀರ್ಮಾನ ವಿರೋಧಿಸಿ ಹೋರಾಟ ನಡೆಸಲು ಮುಂದಾಗಿದೆ.

‘ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಸೆ.27ರಂದು ನಿಗಮ ಘೋಷಣೆಯ ಭರವಸೆ ಮೂಡಿಸಿದ್ದರು. ಮರುದಿನವೇ ನಿರ್ಧಾರ ಬದಲಿಸಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ್ದಾರೆ. ಇದು ಕಾಡುಗೊಲ್ಲರಿಗೆ ಮಾಡುವ ಅನ್ಯಾಯವಲ್ಲವೇ’ ಎಂದು ಒಕ್ಕೂಟದ ಮುಖಂಡ ಡಾ.ದೊಡ್ಡಮಲ್ಲಯ್ಯ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಕಾಡುಗೊಲ್ಲರು ತಕರಾರು ಮಾಡುವುದಿಲ್ಲ. ಆದರೆ, ಇದೇ ನಿಗಮದಲ್ಲಿ ಕಾಡುಗೊಲ್ಲರನ್ನು ಸೇರಿಸಲು ಒಪ್ಪಿಗೆ ಇಲ್ಲ. ಅತ್ಯಂತ ಹಿಂದುಳಿದ ಕಾಡುಗೊಲ್ಲರು ಸರ್ಕಾರಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಗೊಲ್ಲರೊಂದಿಗೆ ಸ್ಪರ್ಧಿಸುವ ಶಕ್ತಿ ಕಾಡುಗೊಲ್ಲರಲ್ಲಿ ಇಲ್ಲ. ಆಶ್ವಾಸನೆ ನೀಡಿದಂತೆ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಚಿತ್ರದುರ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯವಿದೆ. ಹಿರಿಯರನ್ನೇ ದೈವಗಳೆಂದು ನಂಬಿದ ವಿಶೇಷ ಸಮುದಾಯವಿದು. ಶಿಷ್ಟ ದೇವರನ್ನು ಪೂಜೆ ಮಾಡದ ಕಾಡುಗೊಲ್ಲರಿಗೆ ಪ್ರತ್ಯೇಕ ಅಸ್ಮಿತೆ ಇದೆ. ಗೊಲ್ಲ ಹಾಗೂ ಯಾದವರೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದರು.

‘ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ದಶಕದಿಂದ ಬೇಡಿಕೆ ಮುಂದಿಡುತ್ತಿದ್ದೇವೆ. ಕೆಲ ಶಕ್ತಿಗಳು ಏಕಾಏಕಿ ಸರ್ಕಾರದ ತೀರ್ಮಾನ ಬದಲಿಸಲು ಪ್ರಭಾವ ಬೀರಿವೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಶಿಫಾರಸು ಕೇಂದ್ರ ಸರ್ಕಾರದ ಮುಂದಿದೆ. ಕೆಲ ದುಷ್ಟಶಕ್ತಿಗಳು ಈ ಸೌಲಭ್ಯ ತಡೆಯುತ್ತಿವೆ’ ಎಂದು ಆರೋಪಿಸಿದರು.

ಶಾಸಕಿ ವಿರುದ್ಧ ಕಿಡಿ

ಕಾಡುಗೊಲ್ಲರ ಅಭಿವೃದ್ಧಿ ನಿಗಮ ಗೊಲ್ಲರಿಗೆ ಸೀಮಿತವಾಗಲು ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಅವರೇ ಕಾರಣ. ಕಾಡುಗೊಲ್ಲ ಸಮುದಾಯಕ್ಕೆ ಅವರು ಕಂಟಕವಾಗಿದ್ದಾರೆ ಎಂದು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಶಿವು ಯಾದವ್ ಆರೋಪಿಸಿದರು.

‘ಕಾಡುಗೊಲ್ಲರ ಮತವನ್ನು ಪಡೆದು ಕಾಡುಗೊಲ್ಲರನ್ನೇ ತುಳಿಯಲು ಪೂರ್ಣಿಮಾ ಪ್ರಯತ್ನಿಸುತ್ತಿದ್ದಾರೆ. ಈ ನಡೆ ನಿಜಕ್ಕೂ ಅಕ್ಷಮ್ಯ, ಇದನ್ನು ಸಮುದಾಯ ಸಹಿಸುವುದಿಲ್ಲ. ಕಾಡುಗೊಲ್ಲರ ಅಭಿವೃದ್ಧಿ ನಿಮಗವನ್ನು 24 ಗಂಟೆಯಲ್ಲಿ ಬದಲಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ಮುಖಂಡರಾದ ಕೂನಿಕೆರೆ ರಾಮಣ್ಣ, ಡಿ.ಶಿವಣ್ಣ, ಗೋಪಿನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.