ADVERTISEMENT

ಕೆಲ್ಲೋಡು; ಕನಕ ಜಯಂತ್ಯುತ್ಸವ ಸಂಭ್ರಮ

ವಿದ್ಯುತ್ ದೀಪಾಲಂಕಾರದೊಂದಿಗೆ ಆಕರ್ಷಕವಾಗಿ ಕಂಗೊಳಿಸುತ್ತಿರುವ ಗ್ರಾಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:02 IST
Last Updated 7 ನವೆಂಬರ್ 2025, 6:02 IST
ಈಶ್ವರಾನಂದಪುರಿ ಸ್ವಾಮೀಜಿ
ಈಶ್ವರಾನಂದಪುರಿ ಸ್ವಾಮೀಜಿ   

ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡು ಗ್ರಾಮದಲ್ಲಿನ ಕನಕಧಾಮ, ಕನಕ ಗುರುಪೀಠದಲ್ಲಿ ನ. 5ರಿಂದ ಕನಕ ಜಯಂತ್ಯುತ್ಸವ ಆಚರಣೆ ಆರಂಭವಾಗಿದ್ದು, ನ. 8ರವರೆಗೆ ನಡೆಯಲಿದೆ.

ಉತ್ಸವದ ಅಂಗವಾಗಿ ಗ್ರಾಮವು ವಿದ್ಯುತ್ ದೀಪಾಲಂಕಾರದೊಂದಿಗೆ ಆಕರ್ಷಕವಾಗಿ ಕಂಗೊಳಿಸುತ್ತಿದ್ದು, ಕನಕ ಜಯಂತಿಯ ಅದ್ದೂರಿ ಆಚರಣೆ ಶ್ರೀಮಠದಲ್ಲಿ ಶುರುವಾಗಿದೆ.

ನ. 7ರಂದು ಟಗರಿನ ಕಾಳಗ, ನ.8ರಂದು ಕೃಷಿಮೇಳ ನಡೆಯಲಿದ್ದು, ಸಂಜೆ ಲಕ್ಷದೀಪೋತ್ಸವ ಹಮ್ಮಿಕೊಳ್ಳಲಾಗಿದೆ.

ADVERTISEMENT

ವಿಸ್ತಾರವಾಗಿರುವ ಮಠದ ಆವರಣದ ಸುತ್ತಲೂ ವಿನೂತನವಾಗಿ ನಿರ್ಮಿಸಿರುವ ಕಾಂಪೌಂಡ್, ಪಕ್ಕದಲ್ಲಿಯೇ ಕಣ್ಮನ ಸೆಳೆಯುವ ವೇದಾವತಿ ನದಿ ಇದೆ. ಮಠದಲ್ಲಿ ಕನಕನ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗಾಗಿ ಪೀಠ ಸಿದ್ಧವಾಗುತ್ತಿದೆ. ಮಠದ ಆವರಣದಲ್ಲಿಯೇ ಅಂದಾಜು 2,000 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಉತ್ತಮ ಕಟ್ಟಡ ನಿರ್ಮಿಸಲಾಗುತ್ತಿದೆ.

ಈಶ್ವರಾನಂದಪುರಿ ಸ್ವಾಮೀಜಿ ಹಿನ್ನೆಲೆ

1975ರ ಜುಲೈ 22ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆಯ ಗುರಯ್ಯ ಒಡೆಯರ್ ಹಾಗೂ ಸತ್ಯಮ್ಮ ಒಡೆಯರ್ ದಂಪತಿಗಳ ಪುತ್ರನಾಗಿ ಜನಿಸಿದ ಈಶ್ವರಾನಂದಪುರಿ ಸ್ವಾಮೀಜಿ, 10ನೇ ತರಗತಿಯವರೆಗೂ ಹುಟ್ಟೂರಲ್ಲಿ ವಿದ್ಯಾಭ್ಯಾಸ ಮಾಡಿದರು. 1991ರಲ್ಲಿ ಕನಕ ಗುರುಪೀಠ ಪ್ರಾರಂಭಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ ಬೆಂಗಳೂರಿನ ಕೈಲಾಸಾಶ್ರಮ ಸೇರಿ, ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ನಡೆಸಿದ ಇವರು, ಬೆಂಗಳೂರು ವಿಭಾಗದ ಹೊಸದುರ್ಗ ಶಾಖಾ ಮಠಕ್ಕೆ 2002 ಮೇ 16ರಂದು ಪೀಠಾಧಿಪತಿಯಾಗಿ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದರು.

ಹೊಸದುರ್ಗ ಪಟ್ಟಣದಲ್ಲಿ ಮೊದಲು ಆರಂಭವಾದ ಕನಕ ಗುರುಪೀಠಕ್ಕೆ ಯಾವುದೇ ಆಸ್ತಿಗಳಿರಲಿಲ್ಲ. ಕಾಗಿನೆಲೆ ಆಡಳಿತಾಧಿಕಾರಿ ಹಾಗೂ ಇಂದಿನ ಶಾಸಕ ಬಿ‌.ಜಿ. ಗೋವಿಂದಪ್ಪ ಅವರು ಅಂದು ಪಟ್ಟಣದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಟ್ಟರು. ನಂತರ ಕೆಲ್ಲೋಡಿನ ಸಮೀಪ ಮಠದ ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗಾಗಿ 30 ಎಕರೆ ಭೂಮಿ ಖರೀದಿಸಿದ್ದು, ಶ್ರೀಗಳು ಮಠದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

30 ಎಕರೆ ಸ್ಥಳಾವಕಾಶದಲ್ಲಿ ಹಲವು ಮಹತ್ತರ ಕಾರ್ಯಗಳಿಗೆ ಶ್ರೀಗಳು ಮುನ್ನುಡಿ ಬರೆದಿದ್ದಾರೆ. ದೇಶದಲ್ಲಿಯೇ ಅತಿ ಎತ್ತರವಾದ (57 ಅಡಿ)  ಏಕಶಿಲೆಯಲ್ಲಿ ಸಿದ್ಧಗೊಳ್ಳಲಿರುವ ಕನಕಮೂರ್ತಿಯನ್ನು ಅದ್ಧೂರಿ ಸಮಾರಂಭದೊಂದಿಗೆ ಪ್ರತಿಪ್ಠಾಪಿಸುವ ಯೋಜನೆ ರೂಪುಗೊಂಡಿದೆ.

ಸಮಾಜದ ಸಂಘಟನೆಗಾಗಿ 20 ವರ್ಷಗಳಿಂದಲೂ ಪ್ರತಿಭಾ ಪುರಸ್ಕಾರ, ಕನಕ ಜಯಂತಿ ಆಚರಣೆ, ಲಕ್ಷ ದಿಪೋತ್ಸವ, ಕನಕ ಕಪ್ ಪಂದ್ಯಾವಳಿ, ಟಗರಿನ ಕಾಳಗ ಆಯೋಜನೆ ಮಾಡಿದ್ದಲ್ಲದೆ, ‘100 ದಿನ 1,000 ಹಳ್ಳಿಗಳು’ ಕಾರ್ಯಕ್ರಮದಡಿ ದಿನಕ್ಕೆ 10 ಹಳ್ಳಿಗಳಿಗೆ ಭೇಟಿ ನೀಡಿ ಜನಜಾಗೃತಿ ಮೂಡಿಸುತ್ತಿರುವ ಶ್ರೀಗಳು, ಪ್ರತಿ ತಿಂಗಳು ಹುಣ್ಣಿಮೆಯಂದು ‘ಕನಕ ಹುಣ್ಣಿಮೆ’ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯ ನಡೆಸುತ್ತಿದ್ದಾರೆ. ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನ ಭಕ್ತರು ಶ್ರೀಮಠಕ್ಕೆ ಆಗಮಿಸುವುದು ವಿಶೇಷ.

ಕವಿಗೋಷ್ಠಿ

ಈ ಬಾರಿ ಕನಕ ಜಯಂತಿ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಉದ್ದೇಶದಿಂದ ಕವಿಗೋಷ್ಠಿ ಆಯೋಜಿಸಲಾಗಿದೆ. ಕನಕದಾಸರ ನೃತ್ಯ ರೂಪಕ ಪ್ರದರ್ಶನವಿದೆ. ಉತ್ಸವದ ಕೊನೆಯ ದಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ದೀಪೋತ್ಸವ ನಡೆಯಲಿದೆ. ಶೀಘ್ರದಲ್ಲೇ ಬೃಹತ್ ಕನಕ ಪ್ರತಿಮೆ ಅನಾವರಣಗೊಳ್ಳಲಿದ್ದು, ಮಧ್ಯ ಕರ್ನಾಟಕದ ಕೆಲ್ಲೋಡು ಗ್ರಾಮವು ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವಾಗಲಿದೆ ಎಂದು ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

ಕುರುಬರು ವಿಶೇಷ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ್ದು, ಕಾಡಿನಲ್ಲಿ ವಾಸಿಸುತ್ತಾ, ಕಾಡು ಕುರುಬರಾಗಿದ್ದರು. ಕುರುಬರ ಚರಿತ್ರೆಯ ಬಗ್ಗೆ ವಿನೂತನ ಕೃತಿಗಳನ್ನು ಹೊರತರುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಶ್ರೀಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಉತ್ಸವದಲ್ಲಿ ಕುರುಬ ಸಮುದಾಯದ ಶ್ರೀಮಂತ ಸಂಸ್ಕೃತಿ ಅನಾವರಣವಾಗಲಿ ಎಂದು ಬಿಜೆಪಿ ಮುಖಂಡ, ಶ್ರೀಮಠದ ಭಕ್ತ ಶಿವರಾಜ್ ಕುಮಾರ್ ಡಿ. ಅರ್ (ಶಿವು ಮಠ) ಆಶಿಸಿದ್ದಾರೆ.

ಈ ಬಾರಿ 18 ವರ್ಷದೊಳಗಿನವರಿಗೂ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಪ್ರತಿ ವರ್ಷ ಇಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ನ.7ರಂದು ಸಂಜೆ 4ರಿಂದ ಟಗರು ಕಾಳಗವಿದೆ. ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು, ಭಕ್ತರು ಆಗಮಿಸಲಿದ್ದಾರೆ. ಈಶ್ವರಾನಂದಪುರಿ ಸ್ವಾಮೀಜಿ ಅವರ ಕಾರ್ಯ ಮೆಚ್ಚುವಂಥದ್ದು. ಕನಕ ಜಯಂತಿ ಉತ್ಸವಲ್ಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕುಎ ಎಂದು ಅವರು ಕೋರಿದ್ದಾರೆ.

ಹೊಸದುರ್ಗದ ಕೆಲ್ಲೋಡಿನ ಕನಕ ಗುರುಪೀಠದಲ್ಲಿ ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರ.
ಸರ್ವರಿಗೂ ಕನಕ ಜಯಂತಿಯ ಶುಭಾಶಯಗಳು. ದಾಸ ಶ್ರೇಷ್ಠರಾದ ಕನಕದಾಸರ ಜಯಂತಿ ಆಚರಿಸುವುದು ನಮ್ಮೆಲ್ಲರ ಹೆಮ್ಮೆ. ಕನಕಧಾಮದಲ್ಲಿ ಈಶ್ವರಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಕನಕ ಜಯಂತ್ಯುತ್ಸವ ಪ್ರತಿ ವರ್ಷ ವಿಭಿನ್ನ ಹಾಗೂ ವಿಶೇಷವಾಗಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.
– ಶಿವರಾಜ್ ಕುಮಾರ್ ಡಿ. ಅರ್ (ಶಿವು ಮಠ), ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.