ADVERTISEMENT

ಚಿತ್ರದುರ್ಗ: ಕಂಚಿ ವರದರಾಜ ಸ್ವಾಮಿ ನಾಮಧಾರಣೆ ವೈಭವ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:14 IST
Last Updated 24 ಸೆಪ್ಟೆಂಬರ್ 2025, 2:14 IST
ಹೊಸದುರ್ಗದ ದಶರಥ ರಾಮೇಶ್ವರದಲ್ಲಿ ನಾಮಧಾರಣೆ ನಂತರ ಕಂಗೊಳಿಸುತ್ತಿರುವ ಕಂಚಿ ವರದರಾಜ ಸ್ವಾಮಿ
ಹೊಸದುರ್ಗದ ದಶರಥ ರಾಮೇಶ್ವರದಲ್ಲಿ ನಾಮಧಾರಣೆ ನಂತರ ಕಂಗೊಳಿಸುತ್ತಿರುವ ಕಂಚಿ ವರದರಾಜ ಸ್ವಾಮಿ   

ಹೊಸದುರ್ಗ: ತಾಲ್ಲೂಕಿನ ಕಂಚೀಪುರದಲ್ಲಿ ನೆಲೆಸಿರುವ ಕಂಚಿ ವರದರಾಜ ಸ್ವಾಮಿಯ ನಾಮಧಾರಣೆ ದಶರಥ ರಾಮೇಶ್ವರದಲ್ಲಿ ಮಂಗಳವಾರ ವೈಭವಯುತವಾಗಿ ನಡೆಯಿತು.

ಉತ್ತರೆ ಮಳೆ ಅಂಬು ಮುಗಿದ ನಂತರ ನಡೆಯುವ ನಾಮಧಾರಣೆ ಕಾರ್ಯದ ಅಂಗವಾಗಿ, ಹೊಂಡದಲ್ಲಿ ಗಂಗಾಪೂಜೆ ನೇರವೇರಿತು. ಸ್ವಾಮಿ ಉತ್ತರೆ ಮಳೆಯ ನೀರಿನಲ್ಲಿ ತಿರುನಾಮ ತೇದು ಹಚ್ಚಿಕೊಳ್ಳುತ್ತದೆ. ನಂತರ ಸ್ವಾಮಿ ದಶರಥರಾಮೇಶ್ವರ ದೇವರ ಬಳಿ ತೆರಳಿತು. ಅಲ್ಲಿ ದೇವರಿಗೆ ನಾಮಧಾರಣೆ ನಡೆಯಿತು. 

ಕಂಚಿದೇವರ ಪಟ್ಟದ ಪೂಜಾರಿಯು ತಲೆಗೆ ಪಾಗು ಸುತ್ತಿಕೊಂಡು ದೇವರನ್ನು ಹೊರುತ್ತಾರೆ. ಇಲ್ಲಿ ಕಂಚಿ ದೇವರ ಕುಣಿತ ಅತ್ಯಂತ ಆಕರ್ಷಕವಾಗಿದ್ದು, ಈ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಕಂಚಿ ವರದರಾಜ ಸ್ವಾಮಿ ದಶರಥರಾಮೇಶ್ವರನ ಪರಮಶಿಷ್ಯನೆಂಬ ನಂಬಿಕೆ ಮತ್ತು ಆಚರಣೆಗಳು ಇಂದಿಗೂ ಇಲ್ಲಿವೆ.

ADVERTISEMENT

ಹಣ ಸುರಿದು ಭಕ್ತಿ ಸಮರ್ಪಿಸಿದ ಭಕ್ತರು: ನಾಮಧಾರಣೆ ಮುಗಿದ ನಂತರ ಸ್ವಾಮಿ ಬಂದಕೂಡಲೇ ಹಣ ತೂರಿ ಭಕ್ತಿ ಸಮರ್ಪಿಸಿದರು. ತಮ್ಮ ಇಷ್ಟಾರ್ಥ ಪೂರೈಸುವ ದೇವರಿಗೆ ಹರಕೆ ರೂಪದಲ್ಲಿ ಹಣ ತೂರಲಾಗುತ್ತದೆ. ಇದು ವಿಶೇಷ ಆಚರಣೆಯಾಗಿದ್ದು, ನಾಡಿನಲ್ಲೇ ಪ್ರಖ್ಯಾತಿ ಪಡೆದಿದೆ.

ಬುತ್ತಿಬಾನ ಹೊತ್ತ ಭಕ್ತರು ಮಂಗಳವಾರ ಸಿದ್ದಪ್ಪನ ಬೆಟ್ಟದಿಂದ ನೇರವಾಗಿ ದಶರಥರಾಮೇಶ್ವರಕ್ಕೆ ಆಗಮಿಸಿದರು. ಬುತ್ತಿ ಎಡೆಯಲ್ಲಿನ ಆಹಾರವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆಲ್ಲಾ ನೀಡಿದರು.

ಸಾಮೂಹಿಕ ಅನ್ನ ದಾಸೋಹ: ಕಂಚಿ ವರದರಾಜ ಸ್ವಾಮಿ ದಶರಥರಾಮೇಶ್ವರಕ್ಕೆ ಬಂದಾಗ, ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿ‌ಸಲಾಗಿತ್ತು. ಸಾವಿರಾರು ಜನರಿಗೆ ಅನ್ನ ದಾಸೋಹ ನಡೆಯಿತು. 

ಕಾನುಬೇನಹಳ್ಳಿಯಲ್ಲಿ ಆಚರಣೆ: ದಶರಥರಾಮೇಶ್ವರದಲ್ಲಿ ನಾಮಧಾರಣೆ ಮುಗಿಸಿಕೊಂಡು ಕಾನುಬೇನಹಳ್ಳಿಗೆ ಸ್ವಾಮಿಯು ಸಾಗಿತು. ಅಲ್ಲಿ ರಾತ್ರಿ 101 ಎಡೆ ಸೇವೆ ನಡೆಯಿತು.

ಹೊಸದುರ್ಗದ ದಶರಥರಾಮೇಶ್ವರದಲ್ಲಿ ಸೇರಿರುವ ಅಪಾರ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.