ಹೊಸದುರ್ಗ: ‘ಜಮೀನು, ಮನೆಗಳ ಸುತ್ತ ಮುತ್ತ ಎಲ್ಲಿಯೂ ಹಾವು, ಚೇಳಿನಂತಹ ವಿಷಜಂತು ಕಾಣದಂತೆ, ಕಂಡರೂ ಅವುಗಳಿಂದ ಪ್ರಾಣಾಪಾಯ ಆಗದದಂತೆ ಕಾಪಾಡುವ ದೈವ’ ಎಂದೇ ಪ್ರಸಿದ್ಧಿ ಪಡೆದಿದ್ದಾನೆ ತಾಲ್ಲೂಕಿನ ವಿ.ವಿ. ಸಾಗರದ ಹಿನ್ನೀರಿನ ಬಳಿ ನೆಲೆಸಿರುವ ಹಾರನಕಣಿವೆ ರಂಗನಾಥ ಸ್ವಾಮಿ. ‘ಕಣಿವೆ ರಂಗಪ್ಪ’ ಎಂದೇ ಈತ ಜನಜನಿತ.
ಹಾರನಕಣಿವೆ ರಂಗಯ್ಯ ಪವಾಡ ಪುರುಷನೆಂದೇ ಪ್ರಸಿದ್ಧಿ. ಪ್ರತಿ ವರ್ಷ ಆಶ್ವೀಜ ಶುದ್ಧ ಏಕಾದಶಿಯ ವಿಜಯದಶಮಿಯಂದು ಅಂಬಿನೋತ್ಸವ ನಡೆಯುತ್ತದೆ. ಈ ಬಾರಿ ಸೆ. 3ರಂದು ಉತ್ಸವ ನಿಗದಿಯಾಗಿದೆ.
ವಿಷ ಜಂತುಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ ಸಾವು– ಬದುಕಿನ ನಡುವೆ ಹೋರಾಟ ನಡೆಸಿ, ರಂಗಪ್ಪನ ಸನ್ನಿಧಿಗೆ ಬಂದವರು, ಸ್ವಾಮಿಯ ಪವಾಡದಿಂದ ಗುಣಮುಖವಾಗಿರುವ ನಿದರ್ಶನಗಳು ಅಪಾರ. ರಂಗನಾಥ ಸ್ವಾಮಿಯನ್ನು ‘ವಿಷಜಂತುಗಳ ಪರಿಹಾರಕ’ ಎಂತಲೂ ಕರೆಯುವರು. ಈ ಭಾಗದ ಜನರು ಹೊಲ, ಮನೆ, ತೋಟಗಳಲ್ಲಿ ವಿಷ ಜಂತುಗಳು ಕಾಣಿಸಿಕೊಂಡಾಗ ಅಥವಾ ಕಚ್ಚಿದಾಗ ಮೊದಲು ನೆನಪಾಗುವುದು ಹಾರನಕಣಿವೆ ರಂಗಪ್ಪ.
ಹಲವಾರು ವರ್ಷಗಳ ಹಿಂದೆ ಇಲ್ಲಿ ಕುರಿಗಾಹಿಗಳು ಮೇವಿಗಾಗಿ ಅರಿಸಿ ಬರುತ್ತಿದ್ದರು. ವೇದಾವತಿ ನದಿ ಹರಿಯುತ್ತಿದ್ದ ಮಾರಿಕಣಿವೆಯ ಆಸುಪಾಸಿನ ಬೆಟ್ಟ– ಗುಡ್ಡಗಳು ಪಶುಪಾಲನೆಗೆ ಯೋಗ್ಯವಾದ ಸ್ಥಳವಾಗಿತ್ತು. ಇಲ್ಲಿ ಹಾವು, ಚೇಳು ಕಾಣಸಿಗುತ್ತಿದ್ದವು. ‘ರಕ್ಷಿಸು ಸ್ವಾಮಿ’ ಎಂದು ಭಕ್ತರು ದೇವರ ಬಳಿ ಬೇಡುತ್ತಿದ್ದರು. ಅವು ಕಚ್ಚಿದಾಗ ನೋವನ್ನು ಬೇಗ ನಿವಾರಣೆ ಮಾಡುತ್ತಿದ್ದ ಸ್ವಾಮಿಯ ಸನ್ನಿಧಾನವನ್ನು ಹಾವಿನ ಕಣಿವೆ ಎಂತಲೂ ಕರೆಯುತ್ತಿದ್ದರು. 16ನೇ ಶತಮಾನದ ಉತ್ತರಾರ್ಧ, 17ನೇ ಶತಮಾನದ ಪೂರ್ವಾರ್ಧದಲ್ಲಿ ರಂಗನಾಥ ಸ್ವಾಮಿ ಇಲ್ಲಿಗೆ ಬಂದು ನೆಲೆಸಿರಬಹುದು ಎಂಬ ನಂಬಿಕೆ ಭಕ್ತರಲ್ಲಿದೆ.
'ಇಲ್ಲಿನ ಜನರು ರಂಗನಾಥ ಸ್ವಾಮಿಯ ಒಡವೆ ಹಾಗೂ ಪೂಜಾ ಸಾಮಾಗ್ರಿಗಳೊಂದಿಗೆ ತಾಲ್ಲೂಕಿನ ಅಂಚಿಬಾರಿಹಟ್ಟಿಗೆ ಸ್ಥಳಾಂತರಗೊಂಡು ನೆಲೆಸಿದ್ದಾರೆ. ಅಂಚಿಬಾರಿಹಟ್ಟಿಯ ರಂಗಪ್ಪನ ಗುಡಿಯ ಹತ್ತಿರ ನಿಂತುಕೊಂಡು ನೋಡಿದರೆ ಹಾರನಕಣಿವೆ ರಂಗನಾಥ ಸ್ವಾಮಿ ದೇವಾಲಯ ಕಾಣುತ್ತದೆ. ವಿಷಜಂತುಗಳಿಂದ ಕಚ್ಚಿಸಿಕೊಂಡವರು ಸ್ವಾಮಿಯ ಸನ್ನಿಧಿಯಲ್ಲಿ ಸಿಗುವ ದೂಳತ (ಹೋಮದ ಭಸ್ಮ) ಹಚ್ಚಿಕೊಂಡರೆ ಸಾಕು, ಕ್ಷಣಾರ್ಧದಲ್ಲಿಯೇ ನೋವು ಶಮನವಾಗುತ್ತದೆ’ ಎಂದು ಸಿಂಗೇಹಟ್ಟಿ ಗ್ರಾಮದ ಭಕ್ತ ಜಿ.ಟಿ. ಚಿತ್ತಣ್ಣ ಹೇಳಿದರು.
‘ಸ್ವಾಮಿಯ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹರಕೆ ಅರ್ಪಿಸುತ್ತೇವೆ’ ಎಂದು ಹರಕೆ ಕಟ್ಟಿಕೊಂಡ ಭಕ್ತರು ಅಂಬಿನೋತ್ಸವದ ದಿನದಂದು ಚಿನ್ನ, ಬೆಳ್ಳಿ, ತಾಮ್ರದ ಹಾವು, ಚೇಳು, ಜರಿಗಳನ್ನು ಅರ್ಪಿಸುವರು. ಅಂಬಿನೋತ್ಸವದ ದಿನದಂದು ಭಕ್ತರು ಸರದಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹರಕೆ ತೀರಿಸುವರು.
ತಾಲ್ಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆಯ ನಂತರ ವಿ.ವಿ. ಸಾಗರದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜಾ ಕಾರ್ಯಗಳು ನಡೆಯಲಿವೆ. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯೊಂದಿಗೆ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು, ಶಿವ ಹಾಗೂ ವಿಷ್ಣು ಪೂಜೆ ಸಲ್ಲಿಸಲಾಗುವುದು. ನಂತರ ಅಂಬಿನೋತ್ಸವ ನಡೆಯಲಿದೆ.
ಇಷ್ಟಾರ್ಥ ಪೂರೈಸುವ ರಂಗನಾಥಸ್ವಾಮಿಯು ಕಂಕಣ ಭಾಗ್ಯ ಸಂತಾನ ಭಾಗ್ಯ ರೋಗ ನಿವಾರಣೆ ವಿಷಜಂತುಗಳಿಂದ ರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಮೂಲಕ ಅಪಾರ ಭಕ್ತಿಬಳಗವನ್ನು ಹೊಂದಿದ್ದಾನೆ. ಅಂಬಿನೋತ್ಸವದಂದು ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆರಂಗನಾಥ ಹಾರನಕಣಿವೆ ರಂಗನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.