ADVERTISEMENT

ಭಾಷೆಯಿಂದ ಸಂಸ್ಕೃತಿ, ಅಸ್ಮಿತೆಗೆ ಉಳಿವು

ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 8:16 IST
Last Updated 25 ಅಕ್ಟೋಬರ್ 2021, 8:16 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ವಿಮರ್ಶಕಿ ತಾರಿಣಿ ಶುಭದಾಯಿನಿ ಉದ್ಘಾಟಿಸಿದರು. ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ, ಗಾಯತ್ರಿ ಶಿವರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ವಿಮರ್ಶಕಿ ತಾರಿಣಿ ಶುಭದಾಯಿನಿ ಉದ್ಘಾಟಿಸಿದರು. ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ, ಗಾಯತ್ರಿ ಶಿವರಾಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಇದ್ದಾರೆ.   

ಚಿತ್ರದುರ್ಗ: ಭಾಷೆಯಿಂದ ಸಂಸ್ಕೃತಿ, ಅಸ್ಮಿತೆ ಉಳಿಯಲು ಸಾಧ್ಯ. ಹೀಗಾಗಿ, ಕನ್ನಡವನ್ನು ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಬೇಕು ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮದಕರಿ ಯುವಕ ಸಂಘ ಹಾಗೂ ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ನಾವು’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

‘ಎದೆಯಲ್ಲಿ ಹಾಡು, ಪದ, ಅಕ್ಷರ ಗೂಡು ಕಟ್ಟಿದರೆ ಅದು ಬೆಳೆಯಲು ಸಾಧ್ಯ. ಆಗ ಕನ್ನಡ ನೆಚ್ಚಿನ ಭಾಷೆಯಾಗಿ ಬಳಕೆ ಆಗುತ್ತದೆ. ತಾಂತ್ರಿಕ ಶಿಕ್ಷಣ ಪದವಿಯನ್ನು ಕನ್ನಡದಲ್ಲಿ ನೀಡಲು ಸಿದ್ಧತೆಗಳು ನಡೆಯುತ್ತಿವೆ. ಇಂತಹ ಕಾರ್ಯಗಳಾದಾಗ ಕನ್ನಡಕ್ಕೆ ಮಹತ್ವ ಸಿಗಲಿದೆ. ಹೊಸ ಅಸ್ಮಿತೆಗಳನ್ನು ಭಾಷೆ ಮೂಲಕ ಉಳಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಜಾಗತೀಕರಣದ ಬಳಿಕ ಹಲವು ಪಲ್ಲಟಗಳು ಸಂಭವಿಸಿವೆ. ಈ ಸಂದರ್ಭದಲ್ಲಿ ತಾಯಿ ನುಡಿಯನ್ನು ಕಳೆದುಕೊಳ್ಳಬಾರದು. ಆಫ್ರಿಕಾವನ್ನು ಆಳುತ್ತಿದ್ದ ಯೂರೋಪ್‌ ದೇಶಗಳು ಅವರ ಭಾಷೆಯ ಮೇಲೆ ದಬ್ಬಾಳಿಕೆ ಮಾಡಿದವು. ಹೀಗಾಗಿ, ಆಫ್ರಿಕಾ ದೇಶದ ಮೂಲ ಸಂಸ್ಕೃತಿ ಕಣ್ಮರೆಯಾಯಿತು. ಅವರು ಹೊಸ ಜಗತ್ತಿಗೆ ಬರಲು ತುಂಬಾ ಕಷ್ಟಪಡಬೇಕಾಯಿತು. ಭಾರತದಲ್ಲಿ ಇಂತಹ ಸ್ಥಿತಿ ಇಲ್ಲ’ ಎಂದು ಹೇಳಿದರು.

‘ಕನ್ನಡದ ಶಾಂತಕವಿ ಏಕೀಕರಣದ ಉದ್ದೇಶದಿಂದ ಜೋಳಿಗೆ ಹಾಕಿಕೊಂಡು ಊರೂರು ಸುತ್ತಿದರು. ಕನ್ನಡನಾಡನ್ನು ಒಂದುಗೂಡಿಸಲು ಹಾಗೂ ಕನ್ನಡ ನುಡಿಯನ್ನು ಜನರ ಮಧ್ಯೆ ಹರಡಲು ಶ್ರಮಿಸಿದ ಬಹುದೊಡ್ಡ ಪರಂಪರೆ ನಮ್ಮಲ್ಲಿದೆ. ಹಿರಿಯ ಕವಿಗಳ ಆಶಯದಂತೆ ಕನ್ನಡವನ್ನು ಮಾತನಾಡೋಣ’ ಎಂದು ಸಲಹೆ ನೀಡಿದರು.

ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ನಿರ್ದೇಶಕಿ ಗಾಯತ್ರಿ ಶಿವರಾಂ ಇದ್ದರು. ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ, ಕಲಾವಿದರಾದ ಆಯಿತೋಳು ವೀರೂಪಾಕ್ಷಪ್ಪ, ಚಂದ್ರಪ್ಪ, ಗಂಗಾಧರ್, ಹೇಮಂತ್, ನುಂಕೇಶ್, ಹರೀಶ್ ಅವರು ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಶಿವಣ್ಣ ಮತ್ತು ತಂಡದವರು ಗೊರವರ ಕುಣಿತ ಪ್ರದರ್ಶಿಸಿದರು.

***

ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನ ಅ.24ರಿಂದ ಅ.31 ರವರೆಗೆ ನಡೆಯಲಿದೆ. ಕನ್ನಡದಲ್ಲಿ ಮಾತನಾಡುವ, ಶುದ್ಧ ಕನ್ನಡ ಬರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಬಿ.ಧನಂಜಯ, ಸಹಾಯಕ ನಿರ್ದೇಶಕ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.