ADVERTISEMENT

ಮುಚ್ಚುವ ಹಂತದಲ್ಲಿ ಸರ್ಕಾರಿ ಶಾಲೆಗಳು: ಡಿ. ಧರಣೇಂದ್ರಯ್ಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:53 IST
Last Updated 22 ನವೆಂಬರ್ 2025, 6:53 IST
ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡಪ್ರಜ್ಞೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಿ. ಧರಣೇಂದ್ರಯ್ಯ ಮಾತನಾಡಿದರು
ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡಪ್ರಜ್ಞೆ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಿ. ಧರಣೇಂದ್ರಯ್ಯ ಮಾತನಾಡಿದರು   

ಹಿರಿಯೂರು: ‘ದೇಶದಲ್ಲಿ ಕಂಪನಿ ಸರ್ಕಾರ ಕೊನೆಗೊಳಿಸುವ ಸಲುವಾಗಿ ಜಾನ್ ಬ್ರೈಟ್ ಎಂಬ ಬ್ರಿಟೀಷ್ ಅಧಿಕಾರಿ ಭಾರತದಲ್ಲಿ ಪ್ರಾಂತ್ಯಗಳ ರಚನೆಗೆ ಭಾಷೆಗಳು ಆಧಾರವಾಗಬೇಕೆಂದು ಸೂಚಿಸಿದ್ದ’ ಎಂದು ಪ್ರಾಧ್ಯಾಪಕ ಡಿ. ಧರಣೇಂದ್ರಯ್ಯ ಹೇಳಿದರು. 

ತಾಲ್ಲೂಕಿನ ಯರಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕನ್ನಡಪ್ರಜ್ಞೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘1856 ರಲ್ಲಿಯೇ ಧಾರವಾಡದಲ್ಲಿ ಡೆಪ್ಯುಟಿ ಚನ್ನಬಸಪ್ಪ ಅವರು ಏಕೀಕರಣದ ಚಳವಳಿ ಆರಂಭಿಸಿದ್ದರು. 1903ರಲ್ಲಿ ಬೆನಗಲ್ ರಾಮರಾಯರು ಕರ್ನಾಟಕ ಏಕೀಕರಣ ಪುಸ್ತಕ ಬರೆದಿದ್ದರು. 1915ರಲ್ಲಿ ಕರ್ನಾಟಕ ಏಕೀಕರಣ ಆಗಬೇಕೆಂಬ ಹಿನ್ನೆಲೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು’ ಎಂದರು. 

‘1920ರಲ್ಲಿ ಧಾರವಾಡದಲ್ಲಿ ಮೈಸೂರಿನ ದಿವಾನರಾಗಿದ್ದ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜಕೀಯ ಸಮ್ಮೇಳನದಲ್ಲಿ ಕರ್ನಾಟಕ ಪ್ರಾಂತ್ಯ ನಿರ್ಮಾಣವಾಗಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಯಿತು (ಮೈಸೂರು ರಾಜ್ಯ). 1973 ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಕರ್ನಾಟಕ ಎಂದು ನಾಮಕರಣ ಮಾಡಿದರು’ ಎಂದು ತಿಳಿಸಿದರು. 

‘ರಾಜ್ಯದಲ್ಲಿ 3,174 ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಅತಿವೃಷ್ಟಿ– ಅನಾವೃಷ್ಟಿಯ ಕಾರಣಕ್ಕೆ ಬಡವರು ಗುಳೇ ಹೋಗುತ್ತಿದ್ದಾರೆ. ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿವೆ. 17,000 ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸಾವಿರಾರು ಸಾಹಿತಿಗಳು, ಪ್ರಮುಖರು ಹೋರಾಡಿ ಅಸ್ಥಿತ್ವಕ್ಕೆ ತಂದ ಕರ್ನಾಟಕ, ಜನಪ್ರತಿನಿಧಿಗಳ ಬದ್ಧತೆಯ ಕೊರತೆಯ ಕಾರಣಕ್ಕೆ ಹಿರಿಯರು ಅಂದುಕೊಂಡಿದ್ದ ರೀತಿಯಲ್ಲಿ ಸಾಗದಿರುವುದು ಬೇಸರದ ಸಂಗತಿ’ ಎಂದರು. 

ಅಬಕಾರಿ ಇಲಾಖೆ ಅಧಿಕಾರಿ ಸುರೇಂದ್ರಾಚಾರ್ ಮಾತನಾಡಿದರು. ಮುಖ್ಯ ಶಿಕ್ಷಕ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಅಂಬಿಕಾ, ಶಶಿಕಲಾ, ದಂಡಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.