ಹಿರಿಯೂರು: ಮದರಸಾಗಳಲ್ಲಿ ಕನ್ನಡ ಕಲಿಯುವುದನ್ನು ಕಡ್ಡಾಯ ಮಾಡುವುದಾಗಿ ಘೋಷಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ರಾಜ್ಯ ಕಾರ್ಯಕಾರಿಣಿ ಸದಸ್ಯ ಚಮನ್ ಷರೀಫ್ ಹೇಳಿದ್ದಾರೆ.
ಸರ್ಕಾರದ ತೀರ್ಮಾನ ಮುಸ್ಲಿಂ ಸಮುದಾಯದ ಪಾಲಿಗೆ ಉತ್ತಮ ಬೆಳವಣಿಗೆ. ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಹಳಷ್ಟು ಕಡೆಗಳಲ್ಲಿ ಮುಸ್ಲಿಮರು ಬಳಸುವ ಕನ್ನಡ ಅಷ್ಟೊಂದು ಪಕ್ವವಿಲ್ಲ. ಹೀಗಾಗಿ ಕನ್ನಡ ಕಲಿಕೆ ಕಡ್ಡಾಯ ಮಾಡಿದಲ್ಲಿ ಕನ್ನಡ ಬರೆಯಲು, ಓದಲು ಕಲಿಯುತ್ತಾರೆ. ನಾಡಿನ ಭಾಷೆಯ ಬಗ್ಗೆ ಪ್ರಭುತ್ವ ಸಾಧಿಸುತ್ತಾರೆ. ಭಾಷಾ ಏಕತೆ ಮೂಡಿ ಸಹಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಕನ್ನಡ ಕಡ್ಡಾಯದಿಂದ ಮುಸ್ಲಿಂ ಸಾಹಿತ್ಯದ ಬೆಳವಣಿಗೆಗೂ ಪೂರಕವಾಗುತ್ತದೆ. ಇಸ್ಲಾಮಿಕ್ ಸಾಹಿತ್ಯ ಮತ್ತು ಮುಸ್ಲಿಮರ ಕುರಿತು ಇರುವ ಅಪಪ್ರಚಾರಗಳು ಕೂಡ ಒಂದು ಹಂತದವರೆಗೆ ನಿಲ್ಲಲು ಇದು ಕಾರಣವಾಗಬಹುದು. ಮದರಸಾ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಸಮುದಾಯಕ್ಕೆ ಉತ್ತೇಜನವನ್ನು ಮತ್ತು ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಪ್ರೋತ್ಸಾಹವನ್ನು ನೀಡಿ ಸಹಕರಿಸಬೇಕಿದೆ. ಸಾಮಾಜಿಕ ಸೌಹಾರ್ದಕ್ಕೆ ನಾಡ ಭಾಷೆಯನ್ನು ಕಲಿಯುವ ಮೂಲಕ ನಾಂದಿ ಹಾಡಬೇಕಿದೆ’ ಎಂದು ಚಮನ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.