ADVERTISEMENT

ಬಂದ್‌ಗೆ ಕೋಟೆನಾಡಲ್ಲಿ ವ್ಯಾಪಕ ಬೆಂಬಲ; ತೆರೆಯಲಿವೆ ಸರ್ಕಾರಿ ಕಚೇರಿ

ಬಸ್ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧತೆ, ತೆರೆಯಲಿವೆ ಸರ್ಕಾರಿ ಕಚೇರಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 14:43 IST
Last Updated 27 ಸೆಪ್ಟೆಂಬರ್ 2020, 14:43 IST

ಚಿತ್ರದುರ್ಗ: ಕೃಷಿ ಹಾಗೂ ಕಾರ್ಮಿಕ ಸಂಬಂಧಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್‌’ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸೋಮವಾರ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.

ಕಾಂಗ್ರೆಸ್, ಜೆಡಿಎಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಬೀದಿಗೆ ಇಳಿಯುವುದಾಗಿ ಘೋಷಣೆ ಮಾಡಿವೆ. ಕನ್ನಡ, ದಲಿತ ಹಾಗೂ ರೈತ ಪರ ಸಂಘಟನೆಗಳು, ಕಾರ್ಮಿಕ ಒಕ್ಕೂಟಗಳು ಕೂಡ ಬೆಂಬಲ ಸೂಚಿಸಿವೆ. ಹೀಗಾಗಿ, ಜಿಲ್ಲೆಯಲ್ಲಿ ದೈನಂದಿನ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳಬಹುದು.

‘ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕರೆನೀಡಿರುವ ಬಂದ್‌ಗೆ ಜೆಡಿಎಸ್ ಬೆಂಬಲವಿದೆ. ಸರ್ಕಾರದ ರೈತ, ಕಾರ್ಮಿಕ ಹಾಗೂ ಜನ ವಿರೋಧಿ ಕಾರ್ಯಗಳ ಜಾಗೃತಿಗೆ ಇದೊಂದು ಮಾರ್ಗ. ಪಕ್ಷದ ಕಾರ್ಯಕರ್ತರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಿದೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿರುವ ಹೋರಾಟದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪಕ್ಷದ ವಿವಿಧ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಮನವಿ ಮಾಡಿದ್ದಾರೆ.

ರೈತ ಸಂಘ, ಕಾರ್ಮಿಕ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ. ರೈತ ಮತ್ತು ಕಾರ್ಮಿಕರ ಹೋರಾಟಕ್ಕೆ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಬೆಂಬಲ ಸೂಚಿಸಿದೆ. ಬಂದ್‌ಗೆ ಸಹಕರಿಸುವಂತೆ ಜಿಲ್ಲೆಯ ಹಲವೆಡೆ ಬೈಕ್ ಜಾಥಾಗಳು ನಡೆದಿವೆ.

ತರಕಾರಿ, ಹಾಲು, ಔಷಧ ಸೇರಿ ಅಗತ್ಯ ವಸ್ತುಗಳಿಗೆ ತೊಂದರೆ ಉಂಟಾಗುವುದಿಲ್ಲ. ಇತರೆ ಅಂಗಡಿಗಳು ಬಾಗಿಲು ತೆರೆಯುವುದು ಅನುಮಾನ. ಸರ್ಕಾರಿ ಕಚೇರಿಗಳು ತೆರೆಯಲಿದ್ದು, ಸಿಬ್ಬಂದಿ ಕಚೇರಿಗೆ ಹಾಜರಾಗಲಿದ್ದಾರೆ. ಒತ್ತಾಯ ಪೂರ್ವಕವಾಗಿ ಬಂದ್‌ ಆಚರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಂಚರಿಸಲಿವೆ ಸಾರಿಗೆ ಬಸ್‌:‘ಕರ್ನಾಟಕ ಬಂದ್‌’ಗೆ ಕರೆ ನೀಡಿದರೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಸಂಚರಿಸಲು ಸಿದ್ಧತೆ ಮಾಡಿಕೊಂಡಿದೆ. ಪರಿಸ್ಥಿತಿಯನ್ನು ಅವಲೋಕಿಸಿ ರಸ್ತೆಗೆ ಇಳಿಯಲಿವೆ.

‘ಬೆಳಿಗ್ಗೆ ಎಂದಿನಂತೆ ಬಸ್‌ ಸಂಚಾರ ಆರಂಭಗೊಳ್ಳಲಿದೆ. ಸಹಜ ಸ್ಥಿತಿ ಇದ್ದರೆ ಮಾತ್ರ ಬಸ್‌ ಸಂಚರಿಸಲಿವೆ. ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸಲಾಗುತ್ತದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.

ಪೂರಕ ಪರೀಕ್ಷೆ ಮುಂದೂಡಿಕೆ:ಸೆ.28ರಂದು ನಿಗದಿಯಾಗಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳನ್ನು ಸೆ.29ಕ್ಕೆ ಮುಂದೂಡಲಾಗಿದೆ. ಸೆ.28ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಬೇಕಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೂರಕ ಪರೀಕ್ಷೆ ಮುಂದೂಡಲಾಗಿದೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.