ಚಿತ್ರದುರ್ಗ: ಜುಲೈ ಕಳೆದರೂ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಳೆಯಾಗದ ಕಾರಣ ಶೇಂಗಾ ಬಿತ್ತನೆಗೆ ಹಿನ್ನಡೆಯುಂಟಾಗಿದೆ. ಇಡೀ ವರ್ಷದ ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ರೈತರು ಈ ಮೂರೂ ತಾಲ್ಲೂಕುಗಳಲ್ಲಿ ಬರಗಾಲ ಘೋಷಣೆಗೆ ಒತ್ತಡ ಹೇರಿದ್ದಾರೆ.
ಇಡೀ ರಾಜ್ಯದಲ್ಲೇ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಗುರುತಿಸಿಕೊಂಡಿರುವ ಈ ಮೂರು ತಾಲ್ಲೂಕುಗಳ ರೈತರಿಗೆ ಬರಗಾಲ ಹೊಸದಲ್ಲ. ವರ್ಷದಲ್ಲಿ ಒಂದೇ ಒಂದು ಬೆಳೆ ಬೆಳೆಯುವ ರೈತರು ಬರಗಾಲದ ಜೊತೆಯಲ್ಲೇ ಬದುಕುತ್ತಿದ್ದಾರೆ. ಕಳೆದ ವರ್ಷ ಭಾರಿ ಮಳೆ ಸುರಿದು ಉತ್ತಮ ಬೆಳೆ ಕಂಡಿದ್ದ ರೈತರಿಗೆ ಈಗ ಮತ್ತೊಮ್ಮೆ ಬರ ಎದುರಾಗಿದೆ.
ರಾಜ್ಯದ ವಿವಿಧೆಡೆ, ಬೇರೆ ಜಿಲ್ಲೆ, ಬೇರೆ ತಾಲ್ಲೂಕುಗಳಲ್ಲಿ ಮಳೆ ಸುರಿಯುತ್ತಿದ್ದ ಕಾರಣ ಇಲ್ಲೂ ಮಳೆಯಾಗಬಹುದು ಎಂಬ ನಿರೀಕ್ಷೆ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳ ರೈತರಲ್ಲಿತ್ತು. ಜುಲೈ ಮೊದಲೆರಡು ವಾರಗಳಲ್ಲಿ ಶೇಂಗಾ ಬಿತ್ತನೆ ಮಾಡಿ ಮುಗಿಸುವುದು ವಾಡಿಕೆ. ಆದರೆ, ಈಗ ಜುಲೈ ಮುಗಿದು ಆಗಸ್ಟ್ ಬಂದಿದ್ದರೂ ಮಳೆ ಬಾರದ ಕಾರಣ ಬಿತ್ತನೆಗೆ ಹಿನ್ನಡೆಯುಂಟಾಗಿದೆ.
ಎಲ್ಲೆಡೆ ಮೋಡಮುಚ್ಚಿದ ವಾತಾವರಣ, ಸೋನೆ ಮಳೆ ಇದ್ದ ಕಾರಣ ಜುಲೈ ಕಡೆವರೆಗೂ ಶೇಂಗಾ ಬಿತ್ತುವ ಸಿದ್ಧತೆಯಲ್ಲಿ ರೈತರಿದ್ದರು. ಹವಾಮಾನ ಇಲಾಖೆಯಿಂದಲೂ ಮಳೆಯ ಮುನ್ಸೂಚನೆ ಇತ್ತು. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಭಾಗದಲ್ಲಿ ಹದ ಮಳೆಯೂ ಸುರಿಯಿತು. ಮುನ್ಸೂಚನೆ ನಡುವೆಯೂ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಮಳೆ ಬರಲಿಲ್ಲ. ಹೀಗಾಗಿ ಮತ್ತೊಂದು ಬರಗಾಲ ರೈತರಿಗೆ ಎದುರಾಗಿದೆ.
‘ಆಶ್ಲೇಷ ಮಳೆ ಹೊತ್ತಿಗೆ ಶೇಂಗಾ ಪೈರು ಭೂಮಿಯಿಂದ ಮೇಲೆದ್ದು ಹಸಿರಿನಿಂದ ನಳನಳಿಸಬೇಕಾಗಿತ್ತು. ಈಗ ಬಿತ್ತನೆ ಮಾಡಿದರೆ ಇಳುವರಿ ಬರುವುದಿಲ್ಲ, ಬರೀ ಹುಲ್ಲು ಸಿಗಬಹುದಷ್ಟೇ. ಇನ್ನು ನಾವು ಈ ವರ್ಷ ಶೇಂಗಾ ಮರೆತಂತೇ. ಸಾಲ ನಮ್ಮ ಹೆಗಲೇರುವುದು ನಿಶ್ಚಿತವಾಗಿದೆ’ ಎಂದು ಚಳ್ಳಕೆರೆ ತಾಲ್ಲೂಕು ಬೆಳಗೆರೆ ಗ್ರಾಮದ ರೈತರು ಆತಂಕ ವ್ಯಕ್ತಪಡಿಸಿದರು.
‘ಇಲ್ಲಿಯ ಹವಾಮಾನಕ್ಕೆ ಪರ್ಯಾಯ ಬೆಳೆಗಳೂ ಒಗ್ಗುವುದಿಲ್ಲ. ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿರುವಂತೆ ಮುಂಗಾರು ಪೂರ್ವ ಬೆಳೆ ತೆಗೆದುಕೊಂಡ ನಂತರ ಮುಂಗಾರು ಬಿತ್ತನೆ ಮಾಡುವ ಪರಿಸ್ಥಿತಿ ಇಲ್ಲ. ಮುಂಗಾರು ಉತ್ತಮವಾಗಿ ಬಂದರೆ ನಮ್ಮ ಬದುಕು ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಸಾಲವೇ ಗತಿ’ ಎಂದು ಬೆಳಗೆರೆ ರೈತ ಪರಶುರಾಮಪ್ಪ ಹೇಳಿದರು.
ಬೆಳೆ ವಿಮೆ, ನಷ್ಟ ಪರಿಹಾರ ಕೊಡಿ:
ಮೂರು ತಾಲ್ಲೂಕುಗಳಲ್ಲಿ ಮುಂಗಾರು ಕೈಕೊಟ್ಟಿರುವ ಕಾರಣ ಸರ್ಕಾರ ಬರ ಘೋಷಿಸಬೇಕು. ಸಮರ್ಪಕ ಅಧ್ಯಯನ ನಡೆಸಿ ವೈಜ್ಞಾನಿಕ ರೀತಿಯಲ್ಲಿ ವಿಮೆ ಹಣ ಕೊಡಿಸಬೇಕು. ಜೊತೆಗೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
‘ಮಳೆ ಕೊರತೆ ನಡುವೆಯೂ ಕೆಲ ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಆದರೆ ಬೆಳೆ ಭೂಮಿ ಬಿಟ್ಟು ಮೇಲೆದ್ದಿಲ್ಲ. ಸರ್ಕಾರ ಎಲ್ಲ ರೈತರಿಗೂ ಸಮಗ್ರವಾಗಿ ನಷ್ಟ ಪರಿಹಾರ ನೀಡಬೇಕು’ ಎಂದು ಚಳ್ಳಕೆರೆಯ ರೈತ ಮುಖಂಡ ಕೆ.ಪಿ.ಭೂತಯ್ಯ ಒತ್ತಾಯಿಸಿದರು.
ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಬರ ಘೋಷಣೆಯಾಗಬೇಕು. ಸರ್ಕಾರ ನಿಗದಿ ಮಾಡಿರುವ ಮಾನದಂಡಗಳಡಿ ಅಧ್ಯಯನ ನಡೆಸಿದ ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆಬಿ.ಮಂಜುನಾಥ್ ಕೃಷಿ ಜಂಟಿ ನಿರ್ದೇಶಕ ಚಿತ್ರದುರ್ಗ
ಸಾಲ ವಸೂಲಾತಿ ಸ್ಥಗಿತಗೊಳಿಸಿ
ಮೊಳಕಾಲ್ಮುರು ಚಳ್ಳಕೆರೆ ಹಿರಿಯೂರು ತಾಲ್ಲೂಕಿನಲ್ಲಿ ಶೇಂಗಾ ಬೆಳೆ ವಿಫಲಗೊಂಡಿರುವ ಕಾರಣ ಮುಂದಿನ ವರ್ಷದವರೆಗೆ ಬ್ಯಾಂಕ್‌ಗಳು ಖಾಸಗಿ ಫೈನಾನ್ಸ್‌ಗಳು ರೈತರ ಸಾಲ ವಸೂಲಾತಿಯನ್ನು ಸ್ಥಗಿತಗೊಳಿಸಬೇಕು ಹೆಚ್ಚುವರಿ ಬಡ್ಡಿ ವಿಧಿಸಬಾರದು. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ವಿನಾಯಿತಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ‘ಗ್ಯಾರಂಟಿ ಯೋಜನೆ ಸೇರಿ ವಿವಿಧ ಸರ್ಕಾರಿ ಸೌಲಭ್ಯಗಳ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಕಟಾವು ಮಾಡಿಕೊಳ್ಳುವ ಪರಿಪಾಠ ಬಿಡಬೇಕು. ಬರಗಾಲದ ಸಮಯದಲ್ಲಿ ರೈತರಿಗೆ ಬ್ಯಾಂಕ್‌ಗಳು ಕೂಡ ಬೆಂಬಲವಾಗಿ ನಿಲ್ಲಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.