
ಚಿತ್ರದುರ್ಗ: ಹಿಂದುಳಿದ ವರ್ಗದಲ್ಲಿರುವ 4 ಅಲೆಮಾರಿ ಸಮುದಾಯ ಹಾಗೂ ಅವುಗಳ ಉಪ ಪಂಗಡಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ.
ದುರಗ ಮುರಗಿ (ಬುರ್‌ಬುರ್‌ಚ), ಧೋಲಿ, ನಾಥ ಪಂಥಿ (ಡೌರಿ ಗೋಸಾವಿ) ಹಾಗೂ ತಿರುಮಲಿ ಹೆಸರಿನ ಅಲೆಮಾರಿ ಸಮುದಾಯಗಳ ಅಧ್ಯಯನಕ್ಕೆ ಸರ್ಕಾರ ₹ 36.68 ಲಕ್ಷ ಬಿಡುಗಡೆ ಮಾಡಿದೆ. ಜೊತೆಯಲ್ಲೇ ನೇಕಾರ ಹಾಗೂ ಉಪ ಪಂಗಡಗಳ ಕುಲಶಾಸ್ತ್ರೀಯ ಅಧ್ಯಯನಕ್ಕೂ ₹ 53.90 ಲಕ್ಷ ಬಿಡುಗಡೆ ಮಾಡಿದೆ.
ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಲ್.ಶ್ರೀನಿವಾಸ್ ಅವರಿಗೆ ಧೋಲಿ, ನಾಥ ಪಂಥಿ, ತಿರುಮಲಿ ಸಮುದಾಯಗಳ ಅಧ್ಯಯನ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಟಿ.ಬಸವನಗೌಡ ಅವರಿಗೆ ದುರಗ ಮುರಗಿ ಹಾಗೂ ನೇಕಾರ ಸಮುದಾಯಗಳ ಅಧ್ಯಯನದ ಜವಾಬ್ದಾರಿ ವಹಿಸಲಾಗಿದೆ.
ದುರಗ ಮುರಗಿ ಸಮುದಾಯಕ್ಕೆ ಭಿಕ್ಷಾಟನೆಯೇ ಆಧಾರ. ಮಹಿಳೆಯರು ತಲೆ ಮೇಲೆ ಮರಗಮ್ಮ (ಮಾರಮ್ಮ) ದೇವರನ್ನು ಹೊತ್ತು ಉರುಮೆ (ಬುರ್ ಬುರ್ ವಾದ್ಯ) ನುಡಿಸುತ್ತಾ ಊರೂರು ಸುತ್ತುತ್ತಾರೆ. ಪುರುಷರು ಮೈಗೆ ಚಾವಟಿಯಿಂದ ಹೊಡೆದುಕೊಂಡು ಸಂಪ್ರದಾಯ ಪ್ರದರ್ಶಿಸುತ್ತಾರೆ. ಇದೇ ವೃತ್ತಿಯ ‘ಸಿಂದೋಳ್’ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಒಬಿಸಿ ಪಟ್ಟಿಯಲ್ಲಿರುವ ದುರುಗ ಮುರಗಿಗಳು ರಾಜ್ಯದಲ್ಲಿ ಕನಿಷ್ಠ ಸಂಖ್ಯೆಯಲ್ಲಿದ್ದಾರೆ.
ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟ ಸೇರಿದಂತೆ ಬೆಟ್ಟ, ಗುಡ್ಡಗಳಿಗೆ ಪ್ರವಾಸಿಗರನ್ನು ಹೊತ್ತೊಯ್ಯುವ ಧೋಲಿ (ಡೋಲಿ) ಸಮುದಾಯ ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ. ಸಂತೆಗಳಲ್ಲಿ ಚಕ್ಕೆ, ಲವಂಗ, ಏಲಕ್ಕಿ ಇನ್ನಿತರ ಮಸಾಲೆ ಪದಾರ್ಥ ಮಾರುವ ನಾಥ ಪಂಥಿ (ಡೌರಿ ಗೋಸಾವಿ) ಸಮುದಾಯ, ವಿವಿಧ ದೇಗುಲಗಳಲ್ಲಿ ಅರ್ಚಕರಾಗಿರುವ ತಿರುಮಲಿ ಸಮುದಾಯವೂ ಸೌಲಭ್ಯಗಳಿಂದ ವಂಚಿತವಾಗಿವೆ.
ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಹಾಗೂ ಸಂಸ್ಕೃತಿ ಆಚರಣೆಯ ಬಗ್ಗೆ ಅಧ್ಯಯನ ನಡೆಯಲಿದೆ. ಮಾರ್ಚ್ ಮೊದಲ ವಾರದಿಂದ ಅಧ್ಯಯನ ಆರಂಭಗೊಳ್ಳಲಿದ್ದು, 12 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
‘ಒಳ ಮೀಸಲಾತಿ ಕುರಿತು ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ. ಕಡಿಮೆ ಸಂಖ್ಯೆಯಲ್ಲಿರುವ ದುರಗ ಮುರಗಿ ಸಮುದಾಯದ ಸದಸ್ಯರನ್ನು ಒಬಿಸಿಯಿಂದ ತೆಗೆದು ಎಸ್‌ಸಿ ಪಟ್ಟಿಗೆ ಸೇರಿಸಬೇಕು’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಮುಖಂಡ ಎಸ್.ಆರ್. ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ರಾಜ್ಯದ ಗಡಿ ಪ್ರದೇಶಗಳಲ್ಲಿ ವಾಸಿಸುವ ದುರಗ ಮುರಗಿ ಅಲೆಮಾರಿ ಸಮುದಾಯದ ಸದಸ್ಯರನ್ನು ಹುಡುಕಿ ಅವರ ಸ್ಥಿತಿಗತಿ ಅಧ್ಯಯನ ಮಾಡಲಾಗುವುದುಟಿ.ಟಿ.ಬಸವನಗೌಡ ಕವಿವಿ ಪ್ರಾಧ್ಯಾಪಕ
ಧೋಲಿ ನಾಥ ಪಂಥಿ ತಿರುಮಲಿ ಅಲೆಮಾರಿಗಳು ಅಪರೂಪದ ಸಮುದಾಯ. ವೃತ್ತಿ ಸಂಪ್ರದಾಯದ ಆಧಾರದ ಮೇಲೆ ಅಧ್ಯಯನ ನಡೆಸಲಾಗುವುದುಎಲ್.ಶ್ರೀನಿವಾಸ್ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ
ಕಡೆಗೂ ಈಡೇರಿದ ಬೇಡಿಕೆ
ಇತರ ಹಿಂದುಳಿದ ವರ್ಗಗಳಲ್ಲಿ ನೇಕಾರರಲ್ಲಿ 11 ಉಪ ಪಂಗಡಗಳಿವೆ. ನೇಕಾರ ತೋಗಟವೀರ ಕ್ಷತ್ರಿಯ ಕುರುಹಿನಶೆಟ್ಟಿ ಪದ್ಮಶಾಲಿ ಪಟ್ಟಸಾಲಿ ಸ್ವಕುಳಸಾಳಿ ಹಟಗಾರ್ ಸೆಗುಂದರ್ ಕೋಷ್ಟಿ ಶೆಟ್ಟಿಗಾರ ಜೇಡರ್ ಪಂಗಡಗಳವರು ವಿವಿಧ ವೃತ್ತಿ ಮಾಡುತ್ತಿದ್ದಾರೆ. ‘ನೇಕಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಬೇಡಿಕೆ ದಶಕಗಳಿಂದಲೂ ಇತ್ತು. ಸದ್ಯ ಕಾಲ ಕೂಡಿ ಬಂದಿದೆ. ತಂಡ ಅಧ್ಯಯನಕ್ಕೆ ಬಂದಾಗ ಸಮಗ್ರ ಮಾಹಿತಿ ನೀಡುವಂತೆ ಸಮುದಾಯದವರಿಗೆ ಸೂಚನೆ ನೀಡಿದ್ದೇವೆ’ ಎಂದು ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಗೋವಿಂದಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.