
ಚಿತ್ರದುರ್ಗ: ಬ್ಯಾಂಕಿಂಗ್ ವಹಿವಾಟನ್ನು ವಾರದಲ್ಲಿ ಐದು ದಿನಗಳಿಗೆ ಇಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳ ಒಕ್ಕೂಟ, ಅಪೆಕ್ಸ್ ಬ್ಯಾಂಕ್ ಸೂಚನೆಯಂತೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ನೌಕರರು, ಬ್ಯಾಂಕಿಂಗ್ ವಲಯದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರುವಂತೆ ಬ್ಯಾಂಕ್ ನೌಕರರ ಈ ಹಿಂದಿನ ಬೇಡಿಕೆಯನ್ನು ಕೇಂದ್ರ ಸರ್ಕಾರ ಈವರೆಗೂ ಜಾರಿಗೆ ತಂದಿಲ್ಲ. ದ್ವಿಪಕ್ಷೀಯ ಒಪ್ಪಂದದಂತೆ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರವನ್ನು ರಜೆ ಎಂದು ಘೋಷಿಸಲಾಗಿದೆ. ಉಳಿದ ಶನಿವಾರಗಳನ್ನು ಅರ್ಧ ದಿನದ ಬದಲು ಪೂರ್ಣ ಕೆಲಸದ ದಿನಗಳಾಗಿ ಮಾಡಲಾಗಿದೆ. ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಡುವೆ ಸಹಿ ಮಾಡಲಾದ ಒಪ್ಪಂದ ಪತ್ರ ಹಾಗೂ ಹೊರಡಿಸಲಾದ ಜಂಟಿ ಟಿಪ್ಪಣಿಯಂತೆ ಎಲ್ಲ ಶನಿವಾರಗಳನ್ನು ಬ್ಯಾಂಕ್ ರಜಾ ದಿನಗಳಾಗಿ ಘೋಷಿಸುವಂತೆ ಶಿಫಾರಸು ಮಾಡಲಾಗಿದೆ. ಅದರಂತೆ ಜಾರಿ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಮುಖಂಡರಾದ ಎಂ.ವಿ.ಬಾಲಕೃಷ್ಣ, ಸತ್ಯನಾರಾಯಣ, ಸ್ನೇಹಾ ಚಂದ್ರನ್, ಕೃತಿಕಾ, ಎನ್.ಸಿ.ಪ್ರದೀಪ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.