ADVERTISEMENT

ಚಿತ್ರದುರ್ಗ: ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ಡಿಕೆಶಿ ಯತ್ನ -ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 6:36 IST
Last Updated 13 ಜನವರಿ 2022, 6:36 IST
ಶ್ರೀರಾಮುಲು
ಶ್ರೀರಾಮುಲು   

ಚಿತ್ರದುರ್ಗ: ಮೇಕೆದಾಟು ಪಾದಯಾತ್ರೆ ನಡೆಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಕಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಹಣಿಯಲು ಡಿ.ಕೆ. ಶಿವಕುಮಾರ್‌ ಪಾದಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನೀರಿಗಿಂತ ಕುರ್ಚಿ ಮುಖ್ಯವಾಗಿದೆ’ ಎಂದರು.

‘ಕೋವಿಡ್‌ ಪರಿಸ್ಥಿತಿ ಗಂಭೀರವಾಗುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂಬುದನ್ನು ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಮನವರಿಕೆ ಮಾಡಿಕೊಟ್ಟಿತ್ತು. ಇದನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್‌ ನಾಯಕರು, ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಅಮಾಯಕರ ಆರೋಗ್ಯದ ಜತೆ ಕಾಂಗ್ರೆಸ್ ಆಟವಾಡುತ್ತಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಲಾಗುತ್ತಿದೆ. ಪ್ರತಿಪಕ್ಷ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ಮೇಕೆದಾಟು ಯೋಜನೆಗೆ ಸಂಬಂಧಿಸಿದ ವ್ಯಾಜ್ಯ ಎರಡೂ ರಾಜ್ಯಗಳ ನಡುವೆ ನಡೆಯುತ್ತಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಈ ತಪ್ಪು ಮುಚ್ಚಿಕೊಳ್ಳಲು ಪಾದಯಾತ್ರೆ ನಡೆಸಲಾಗುತ್ತಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ರಾಜ್ಯದ ಬದಲಾಗಿ ತಮಿಳುನಾಡಿಗೆ ಪಾದಯಾತ್ರೆ ನಡೆಸಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.