ADVERTISEMENT

ಚಿಕ್ಕಜಾಜೂರು: ನಿಲ್ಲದ ಮಳೆಗೆ ಹಚ್ಚಹಸಿರಿಂದ ಕಂಗೊಳಿಸುತ್ತಿರುವ ಇಳೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:01 IST
Last Updated 6 ಜುಲೈ 2025, 6:01 IST
ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದ ಜಮೀನೊಂದರಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮೆಕ್ಕೆಜೋಳದ ಪೈರು
ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದ ಜಮೀನೊಂದರಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮೆಕ್ಕೆಜೋಳದ ಪೈರು   

ಚಿಕ್ಕಜಾಜೂರು: ಸೇರಿ ಬಿ. ದುರ್ಗ ಹೋಬಳಿಯಾದ್ಯಂತ ಮೂರು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಮಾಡಿದ್ದ ಪೈರುಗಳು ಹಚ್ಚ ಹಸಿರಿಂದ ಕಂಗೊಳಿಸುತ್ತಿವೆ.

ಮೇ ಹಾಗೂ ಜೂನ್‌ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಹಸಿರಿಂದ ಕಂಗೊಳಿಸುತ್ತಿದೆ. ಕಳೆದ ವಾರ ಮಳೆರಾಯ ಅಲ್ಪವಿರಾಮ ನೀಡಿದ್ದರಿಂದ ಬಹುತೇಕ ರೈತರು ಎಡೆಕುಂಟೆ ಹಾಗೂ ಕಳೆ ನಾಶಕವನ್ನು ಸಿಂಪಡಿಸಿದ್ದರು. ಬಂಡೆಬೊಮ್ಮೇನಹಳ್ಳಿಯಿಂದ ಅಂದನೂರು, ಗ್ಯಾರೆಹಳ್ಳಿ, ಸಾಸಲುಹಳ್ಳ, ಸಾಸಲು, ಬಿ. ದುರ್ಗ, ಗುಂಜಿಗನೂರು, ಚಿಕ್ಕಜಾಜೂರುವರೆಗೆ ಎಡೆಕುಂಟೆ ಹೊಡೆದಿರುವ ಜಮೀನುಗಳಲ್ಲಿ ಮೆಕ್ಕೆಜೋಳ ಹುಲುಸಾಗಿ ಬೆಳೆದಿದೆ. ಅಲ್ಲದೆ, ಕೆಲವು ರೈತರು ಶನಿವಾರ ಮೆಕ್ಕೆಜೋಳಕ್ಕೆ ಯೂರಿಯಾವನ್ನು ಮೇಲುಗೊಬ್ಬರವಾಗಿ ಹಾಕುತ್ತಿರುವುದು ಕಂಡು ಬಂದಿತು.

ಸೈನಿಕ ಹುಳು ನಾಶಕ್ಕೆ ಔಷಧಿ ಸಿಂಪಡಣೆ: ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಬಹುತೇಕ ರೈತರು ಔಷಧಿ ಸಿಂಪಡಿಸಿದ್ದಾರೆ.

ADVERTISEMENT

‘ಈಗಾಗಲೇ ಗೊಬ್ಬರವನ್ನು ಹಾಕಿದ್ದೇವೆ. ಮಳೆ ಹೀಗೆ ಬರುತ್ತಿದ್ದರೆ, ಉತ್ತಮ ಇಳುವರಿ ಸಿಗುವ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ರೈತರಾದ ಜಯಪ್ಪ, ಬಸವರಾಜಪ್ಪ, ಬಿ.ಆರ್‌. ಈಶ್ವರಪ್ಪ, ಮಂಜಣ್ಣ, ಕಲ್ಲೇಶ್‌, ನಾಗರಾಜ್‌ ಮೊದಲಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.