ADVERTISEMENT

ಚಿತ್ರದುರ್ಗ | ಕಣ್ಣುಬಿಟ್ಟ ಮಳೆರಾಯ: ಬರದ ಛಾಯೆ ಮಾಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:18 IST
Last Updated 7 ಆಗಸ್ಟ್ 2025, 7:18 IST
ಮೊಳಕಾಲ್ಮುರು ತಾಲ್ಲೂಕಿನ ಪಕ್ಕುರ್ತಿ ಕೆರೆ ಬುಧವಾರ ಕೋಡಿ ಹರಿಯುತ್ತಿರುವುದು
ಮೊಳಕಾಲ್ಮುರು ತಾಲ್ಲೂಕಿನ ಪಕ್ಕುರ್ತಿ ಕೆರೆ ಬುಧವಾರ ಕೋಡಿ ಹರಿಯುತ್ತಿರುವುದು   

ಚಿತ್ರದುರ್ಗ: ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ. ಬರದ ಭೀತಿ ಎದುರಿಸುತ್ತಿದ್ದ ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದ್ದು ಶೇಂಗಾ ಬಿತ್ತನೆಯನ್ನು ಚುರುಕುಗೊಳಿಸಿದ್ದಾರೆ.

ಸಾಂಪ್ರದಾಯಿಕವಾಗಿ ಶೇಂಗಾ ಬಿತ್ತನೆ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಮಳೆ ಬಾರದ ಕಾರಣ ಬಿತ್ತನೆಗೆ ಹಿನ್ನಡೆಯಾಗಿತ್ತು. ಹೀಗಾಗಿ ರೈತರು ಈ ಬಾರಿ ಮುಂಗಾರು ಬಿತ್ತನೆ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಮೂರು ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಬೇಕು ಎಂದೂ ಒತ್ತಾಯಿಸಿದ್ದರು.  ಅದೃಷ್ಟವಶಾತ್‌ ಕಳೆದೆರಡು ದಿನಗಳಿಂದ ಹದ ಮಳೆಯಾಗಿರುವ ಕಾರಣ ಈಗಲೂ ಬಿತ್ತನೆ ಮುಂದುವರಿಸಿದ್ದಾರೆ.

ಕೃಷಿ ಇಲಾಖೆ ಮಾಹಿತಿ ಅನ್ವಯ ಆಗಸ್ಟ್‌ 3ನೇ ವಾರದವರೆಗೂ ಶೇಂಗಾ ಬಿತ್ತನೆಗೆ ಸಕಾಲ ಎಂದು ಸಲಹೆ ನೀಡಿದ್ದು ರೈತರು ಹಿನ್ನಡೆಯನ್ನು ಲೆಕ್ಕಿಸದೇ ಶೇಂಗಾ ಬಿತ್ತನೆ ಆರಂಭಿಸಿದ್ದಾರೆ. ಕಳೆದ ವಾರ ಸೋನೆ ಮಳೆಗೆ ಬಿತ್ತನೆ ಮಾಡಿದ್ದ ಕಾರಣ ಪೈರು ನೆಲ ಬಿಟ್ಟು ಮೇಲೆದ್ದಿರಲಿಲ್ಲ. ಕೆಲವಡೆಗೆ ಸಸಿ ಒಣಗುವ ಹಂತ ತಲುಪಿತ್ತು. ಈಗ ಉತ್ತಮ ಮಳೆ ಸುರಿದ ಕಾರಣ ಬಾಡುತ್ತಿದ್ದ ಶೇಂಗಾ ಪೈರು ಜೀವ ಉಳಿಸಿಕೊಂಡಿದೆ.

ADVERTISEMENT

ಮೊಳಕಾಲ್ಮುರಿನಲ್ಲಿ ಭಾರಿ ಮಳೆ: ಮೊಳಕಾಲ್ಮುರು ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಭಾರಿ ಮಳೆಯಾಗಿದ್ದು ಕೆರೆಗಳು ತುಂಬಿದ್ದು ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ.

ರಾತ್ರಿ 10 ಗಂಟೆ ಸುಮಾರಿಗೆ ಭಾರಿ ಗುಡುಗು, ಸಿಡಿಲು ಸಹಿತ ಆರಂಭವಾದ ಮಳೆ ನಾಲ್ಕೈದು ಗಂಟೆಗೂ ಹೆಚ್ಚು ಕಾಲ ಸುರಿಯತು. ದೇವಸಮುದ್ರ ಹೋಬಳಿ ಗ್ರಾಮಗಳಲ್ಲಿ ಬೆಳಿಗ್ಗೆವರೆಗೂ ಮಳೆ ಬಿದ್ದಿದೆ. ಮಳೆಯಿಂದಾಗಿ ತಾಲ್ಲೂಕಿನ ದೊಡ್ಡ ಕೆರೆಯಾದ ಪಕ್ಕುರ್ತಿ ಕೆರೆ ಕೋಡಿ ಹರಿಯುತ್ತಿದೆ. ಭಾರೀ ಪ್ರಮಾಣದ ನೀರು ಹೊರಬರುತ್ತಿದ್ದು ಮುಂದುವರಿದು ನೀರು ದೇವಸಮುದ್ರ ಕೆರೆಗೆ ಹೋಗುತ್ತಿದೆ. ಇಲ್ಲಿಂದ ಕೋಡಿ ಹರಿಯುವ ನೀರು ಆಂಧ್ರಕ್ಕೆ ಹರಿಯಲಿದೆ. ಬಳ್ಳಾರಿ ಗಡಿಗೆ ಹೊಂದಿಕೊಂಡಿರುವ ಕೋನಾಪುರ ಕೆರೆ ಸಹ ಕೋಡಿ ಬಿದ್ದಿದ್ದು ಬುಧವಾರ ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ಮಳೆಯಿಂದಾಗಿ ತಿಮ್ಮಲಾಪುರದಲ್ಲಿ ಕಣಗಳಲ್ಲಿ ಒಣಗಲು ಹಾಕಿದ್ದ ತೊಗರಿ, ಹೆಸರುಕಾಳು ನೀರು ಪಾಲಾಗಿದೆ. ಕಾಳು ಕೊಚ್ಚಿ ಹೋಗದಂತೆ ತಡೆಯಲು ರೈತರು ತೀವ್ರ ಸಂಕಷ್ಟಪಟ್ಟರು. ಇದೇ ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ರಾಂಪುರ ಪಕ್ಕದಲ್ಲಿ ಹರಿಯುವ ಬೃಹತ್‌ ಗುಂಡೇರಿ ಹಳ್ಳವು ತುಂಬಿ ಹರಿಯುತ್ತಿದ್ದು ನೀರು ಜಿನಿಗಿಹಳ್ಳದ ಮೂಲಕ ಆಂಧ್ರಪ್ರದೇಶಕ್ಕೆ ಹರಿಯಲಿದೆ.

ತಾಲ್ಲೂಕಿನಾದ್ಯಂತ ಬರದ ಛಾಯೆ ಕಾಡುತ್ತಿದ್ದು ಮಳೆಯಿಂದಾಗಿ ಬಿತ್ತನೆ ಮಾಡಿದ್ದ ಮುಂಗಾರು ಹಂಗಾಮಿನ ಬೆಳೆಗಳಿಗೆ, ಕುಡಿಯುವ ನೀರಿಗೆ, ಕೊಳವೆಬಾವಿಗಳಲ್ಲಿ ಅಂತರ್‌ಜಲ ಮಟ್ಟ ಹೆಚ್ಚಳಕ್ಕೆ ತುಂಬಾ ಅನುಕೂಲ ಕಲ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೈದುಂಬಿ ಹರಿಯುತ್ತಿರುವ ಬ್ಯಾರೇಜ್: ಹೊಳಲ್ಕೆರೆ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಸಮೀಪ ಗುಂಡಿಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್ ತುಂಬಿ ಹರಿದಿದೆ.

ಮೂರು ತಿಂಗಳ ಹಿಂದೆಯಷ್ಟೇ ಶಾಸಕ ಎಂ.ಚಂದ್ರಪ್ಪ 5 ಕೋಟಿ ವೆಚ್ಚದ ಹೊಸ ಬ್ಯಾರೇಜ್ ಗೆ ಭೂಮಿಪೂಜೆ ಸಲ್ಲಿಸಿದ್ದರು. 15 ದಿನಗಳ ಹಿಂದೆಯಷ್ಟೇ ಕಾಮಗಾರಿ ಮುಗಿದಿದ್ದು, ಒಂದೇ ರಾತ್ರಿಗೆ ಬ್ಯಾರೇಜ್ ತುಂಬಿದೆ. ಬ್ಯಾರೇಜ್ ನಲ್ಲಿ 9 ಅಡಿ ನೀರು ಸಂಗ್ರಹ ಆಗಿದ್ದು, ಹಿಂದೆ 500 ಮೀಟರ್ ದೂರದವರೆಗೆ ನೀರು ನಿಂತಿದೆ. ಈ ಭಾಗದಲ್ಲಿ ಈ ವರ್ಷ ಅತಿ ಕಡಿಮೆ ಮಳೆ ಬಂದಿತ್ತು. ಇದರಿಂದ ಅಡಿಕೆ ಬೆಳೆಗಾರರು ಚಿಂತೆಗೀಡಾಗಿದ್ದರು. ಈಗ ಬ್ಯಾರೇಜ್ ತುಂಬಿರುವುದರಿಂದ ಇದೇ ಹಳ್ಳಕ್ಕೆ ನಿರ್ಮಿಸಿರುವ ಇನ್ನೆರಡು ಚೆಕ್ ಡ್ಯಾಂಗಳೂ ಭರ್ತಿಯಾಗಿವೆ.

‘ಈ ಹಳ್ಳದ ನೀರು ವ್ಯರ್ಥವಾಗಿ ಹರಿದು ವಾಣಿವಿಲಾಸ ಸಾಗರ ಸೇರುತ್ತಿತ್ತು. ಇಲ್ಲಿ ಬ್ಯಾರೇಜ್ ನಿರ್ಮಿಸಿರುವುದರಿಂದ ಉಪ್ಪರಿಗೇನಹಳ್ಳಿ ಗೊಲ್ಲರಹಳ್ಳಿ, ಗೂಳಿ ಹೊಸಹಳ್ಳಿ, ಹಾಲೇನಹಳ್ಳಿ, ನಾಕಿಕೆರೆ ಸುತ್ತಲಿನ ಗ್ರಾಮಗಳ ರೈತರ ತೋಟಗಳಿಗೆ ಅನುಕೂಲ ಆಗಲಿದೆ ಎಂದು ದಿನೇಶ್, ರಂಗಸ್ವಾಮಿ, ಬಸಣ್ಣ ತಿಳಿಸಿದರು.

ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಬಳಿ ಬುಧವಾರ ತುಂಬಿ ಹರಿಯುತ್ತಿರುವ ಗುಂಡೇರಿ ಹಳ್ಳ

ತಾಲ್ಲೂಕಿನ ಎಲ್ಲಾ ಕಡೆ ಹದಮಳೆಯಾಗಿದ್ದು, ಮೆಕ್ಕೆಜೋಳ, ರಾಗಿ, ಶೇಂಗಾ, ಈರುಳ್ಳಿ ಬೆಳೆಗೆ ಅನುಕೂಲ ಆಗಿದೆ. ಕೆಲವು ಕಡೆ ಮೆಕ್ಕೆಜೋಳ ತೆನೆಯಾಗಿದ್ದು, ಈ ಮಳೆಗೆ ಕಾಳು ಬಲಿತು ಉತ್ತಮ ಇಳುವರಿ ಸಿಗಲಿದೆ ಎಂದು ರೈತರು ಸಂತಸಗೊಂಡಿದ್ದಾರೆ.

ಚಳ್ಳಕೆರೆಯಲ್ಲೂ ಹಾನಿ: ಸೋಮವಾರ, ಮಂಗಳವಾರ ರಾತ್ರಿ ಸುರಿದ ಗುಡುಗು ಸಹಿತ ಮಳೆ, ಬಿರುಗಾಳಿ ಪರಿಣಾಮ ಕುರುಡಿಹಳ್ಳಿ ಗ್ರಾಮದ ರಾಜಣ್ಣ ಅವರ 3 ಎಕರೆ ಈರುಳ್ಳಿ, 6 ಎಕರೆ ಮೆಕ್ಳೆಜೋಳ ಬೆಳೆ ಮಳೆನೀರಿನಲ್ಲಿ ಕೊಚ್ಚಿಹೋಗಿದೆ.

ಬೋರನಾಯಕ ಅವರ 4 ಎಕರೆ, ಓಬಯ್ಯ 1 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಮತ್ತು ಹನುಮಂತಪ್ಪ 5 ಎಕರೆಯಲ್ಲಿ ಬೆಳೆದ ತೊಗರಿ ಬೆಳೆ, ರಾಜಣ್ಣ ಅವರ 6 ಎಕರೆ ಮೆಕ್ಕೆಜೋಳ, 3 ಎಕರೆ ಈರುಳ್ಳಿ ಸೇರಿ ಒಟ್ಟು 16 ಎಕರೆಗೂ ಹೆಚ್ಚು ಪ್ರದೇಶದ ಬೆಳೆ ಜಲಾವೃತಗೊಂಡಿದೆ. ಇದರಿಂದ ಬೆಳೆಗಾರರಿಗೆ ಬೆಳೆ ನಷ್ಟದ ಆತಂಕ ಎದುರಾಗಿದೆ.

ರಭಸವಾಗಿ ಹರಿದ ಮಳೆನೀರು ನಗರಪ್ರದೇಶದ ಸಮೀಪ ಸೋಮಗುದ್ದು ಮಾರ್ಗ ಮತ್ತು ನಗರಂಗೆರೆ ಮಾರ್ಗದ ರೈಲ್ವೆ ಕೆಳಸೇತುವೆ ತುಂಬಿಕೊಂಡಿದ್ದರಿಂದ ವಾಹನ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಯಿತು. 

ಹಿರಿಯೂರು ತಾಲ್ಲೂಕಿನ ತಾಳವಟ್ಟಿ ಗ್ರಾಮದ ಹೊಲವೊಂದರಲ್ಲಿ  ಮಳೆಯ ನೀರಿನಲ್ಲಿ ಈರುಳ್ಳಿ ಬೆಳೆ ಮುಳುಗಿರುವುದು

ತುಂಬಿದ ಹಳ್ಳಗಳು: ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಹೋಬಳಿಯ ಎರಡು ಕೆರೆಗಳು ಭರ್ತಿಯಾಗಿ ಕೆರೆ ಕೋಡಿ ಬಿದ್ದಿವೆ. ದಂಡಿಗೇನಹಳ್ಳಿ ಗ್ರಾಮದ ಇಟ್ಟಿಗೆರ ರಂಗಪ್ಪ, ಅಗಸರ ನಿಂಗಪ್ಪ, ಅಗಸರ ಕುಮಾರಪ್ಪ, ನರಸಿಂಹಪ್ಪ ಎಂಬುವರ ಮನೆ ಹಾಗೂ ಕೊಟ್ಟಿಗೆ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಮನೆಯವರು ನೀರನ್ನು ಮೊಗೆದು ಹಾಕುವುದರಲ್ಲಿ ಕಾಲ ಕಳೆಯುವಂತಾಯಿತು.

ಕರ್ಲಳ್ಳ, ಕಡೂರು ಗ್ರಾಮದ ಬಳಿಯ ಕರಡಿಹಳ್ಳ, ಉದ್ಧೇಶಿಗಹಳ್ಳ, ಬಿ. ದುರ್ಗದ ಬೆಳ್ಳಿಸರ ಮೊದಲಾದವು ತುಂಬಿ ಹರಿದಿವೆ. ಸಮೀಪದ ದಂಡಿಗೇನಹಳ್ಳಿ ಹಾಗೂ ಹಿರಿಯೂರು ಗ್ರಾಮಗಳ ಕೆರೆಗಳ ಕೋಡಿ ಬಿದ್ದಿದೆ. ಕೆರೆ ತುಂಬಿ ಕೋಡಿ ಬಿದ್ದಿದೆ. ಬೆಳಿಗ್ಗೆ ಗ್ರಾಮಸ್ಥರು ಕೆರೆ ಕೋಡಿಗೆ ಹೋಗಿ, ಕೆರೆಯಲ್ಲಿನ ಮೀನುಗಳು ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗದಂತೆ ತಡೆಯಲು ಕೋಡಿಯಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದರು.

ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಸಮೀಪ ನಿರ್ಮಿಸಿರುವ ಬ್ಯಾರೇಜ್ ತುಂಬಿ ಹರಿಯುತ್ತಿರುವ ದೃಶ್ಯ
 ಚಿಕ್ಕಜಾಜೂರು ಸಮೀಪದ ಕಡೂರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿನ ಕರಡಿಹಳ್ಳ ತುಂಬಿ ಹರಿಯುತ್ತಿರುವುದು

ನೆಲ ಕಚ್ಚಿದ ಈರುಳ್ಳಿ ಬೆಳೆ

ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಎಕರೆ ಈರುಳ್ಳಿ ಬೆಳೆ ಹಾಳಾಗಿದೆ. ಬಿ.ಜೆ. ಪ್ರಮೀಳಾ ಅವರ 5 ಎಕರೆ ಜಿ.ಎಸ್. ಆನಂದ್ ಅವರ 2.22 ಎಕರೆ ಪಿ.ಡಿ. ಚಂದ್ರು ಅವರ 2.20 ಎಕರೆ ಜನಾರ್ಧನರೆಡ್ಡಿಯವರ 3 ಎಕರೆ ಮಸ್ಕಲ್ ಗ್ರಾಮದ ಬೀರಣ್ಣ ಅವರ ಹೊಲದಲ್ಲಿನ ಈರುಳ್ಳಿ ಬೆಳೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ ಇನ್ನೊಂದಿಷ್ಟು ಹೊಲಗಳಲ್ಲಿ ಬೆಳೆ ನೀರಿನಲ್ಲಿ ಮುಳುಗಿದೆ. 15–20 ದಿನದಲ್ಲಿ ಕೊಯ್ಲು ಮಾಡಬೇಕಿದ್ದ ಈರುಳ್ಳಿ ಗೆಡ್ಡೆ ಸಮೇತ ಕೊಚ್ಚಿ ಹೋಗಿದೆ. ಅಳಿದುಳಿದ ಜಾಗದಲ್ಲಿ ಮಳೆಯ ನೀರು ನಿಂತಿದೆ. ನೀರು ನಿಂತಿರುವ ಕಡೆ ಗೆಡ್ಡೆ ಕೊಳೆಯುವ ಸಾಧ್ಯತೆ ಇದೆ. ಹಿಂದಿನ ವರ್ಷ ದರ ಕುಸಿತದಿಂದ ನಷ್ಟ ಅನುಭವಿಸಿದ್ದೆವು. ಈ ಬಾರಿ ಮಳೆ ನಮ್ಮ ಬದುಕನ್ನು ಕಿತ್ತುಕೊಂಡಿದೆ ಎಂದು ರೈತ ಜನಾರ್ಧನರೆಡ್ಡಿ ನೋವು ಹೇಳಿಕೊಂಡರು.

ಬಿತ್ತನೆಗೆ ಹಿನ್ನಡೆ ಆಗಿಲ್ಲ; ಜೆಡಿ

‘ಜಿಲ್ಲೆಯಲ್ಲಿ ಸೆಪ್ಟೆಂಬರ್‌ ಆಕ್ಟೋಬರ್‌ ಅವಧಿಯಲ್ಲಿ ಉತ್ತಮ ಮಳೆ ಸುರಿಯುತ್ತದೆ. ಆಗಸ್ಟ್‌ ತಿಂಗಳಿಡೀ ಶೇಂಗಾ ಬಿತ್ತನೆ ಮಾಡಿದರೂ ಹಿನ್ನೆಡೆ ಆಗುವುದಿಲ್ಲ. ಈಗ ಬಿತ್ತನೆ ಮಾಡಿದರೆ ಮುಂದೆ ಒಳ್ಳೆಯ ಮಳೆಗೆ ಸಿಕ್ಕು ಇಳುವರಿಯೂ ಚೆನ್ನಾಗಿ ಬರುತ್ತದೆ. ರೈತರು ಶೇಂಗಾ ಬಿತ್ತನೆಗೆ ಹಿನ್ನಡೆ ಆಗಿದೆ ಎಂದು ಬಿತ್ತನೆ ನಿಲ್ಲಿಸಬಾರದು. ಎಂದಿನಂತೆ ಶೇಂಗಾ ಬಿತ್ತನೆ ಮುಂದುವರಿಸಬೇಕು’ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.