ADVERTISEMENT

ಚಿತ್ರದುರ್ಗ: ಕೆಸರುಗದ್ದೆಯಾದ ಕಾಲೇಜು ಮೈದಾನ

ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸ್ಥಿತಿ

ಕೆ.ಪಿ.ಓಂಕಾರಮೂರ್ತಿ
Published 22 ಜುಲೈ 2022, 4:43 IST
Last Updated 22 ಜುಲೈ 2022, 4:43 IST
ಮಳೆಯಿಂದ ಕೆಸರು ಗದ್ದೆಯಾಗಿರುವ ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ.
ಮಳೆಯಿಂದ ಕೆಸರು ಗದ್ದೆಯಾಗಿರುವ ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ.   

ಚಿತ್ರದುರ್ಗ: ಸಾಹಿತ್ಯ, ಕಲೆ, ಸಾಂಸ್ಕೃತಿಕ, ರಾಜಕೀಯ, ಕ್ರೀಡೆ ಸೇರಿ ನಾನಾ ಕ್ಷೇತ್ರಗಳಿಗೆ ಸಾಧಕರನ್ನು ಕೊಡುಗೆಯಾಗಿ ನೀಡಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅಂಗಳಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ.

ನಗರದಲ್ಲಿರುವ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಎಕರೆಗಟ್ಟಲೆ ವಿಶಾಲವಾದ ಮೈದಾನವಿದ್ದರೂ ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದಂತಾಗಿವೆ. ಇದರಿಂದ ಕ್ರೀಡಾ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.

ಸರ್ಕಾರಿ ವಿಜ್ಞಾನ ಕಾಲೇಜಿಗೆ ಹೊಂದಿಕೊಂಡಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕವಾಗಿ ಎರಡೂವರೆ ಎಕರೆ ಮೈದಾನ ಪ್ರದೇಶವಿದೆ. ಕೆಲ ವರ್ಷಗಳ ಹಿಂದೆ ವಾಲಿಬಾಲ್‌, ಬಾಸ್ಕೆಟ್‌ಬಾಲ್‌, ಕ್ರಿಕೆಟ್‌ ಅಂಕಣಗಳಿದ್ದವು. ಪ್ರಾರಂಭದಲ್ಲಿ ಪಂದ್ಯಾವಳಿಗಳೂ ನಡೆಯುತ್ತಿದ್ದವು. ಆದರೆ, ಕಾಲೇಜು ಹಿಂಭಾಗದಲ್ಲಿರುವ ಡಯಟ್‌ ಹಾಗೂ ಕೆಲ ಕಟ್ಟಡಗಳಿಂದ ಹಾಗೂ ಸ್ಟೇಡಿಯಂ ರಸ್ತೆಯಿಂದ ಹರಿದು ಬರುವ ಮಳೆ ನೀರು ಮೈದಾನಕ್ಕೆ ಹರಿಯುವುದರಿಂದ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದೆ. ಹಂದಿ, ಎಮ್ಮೆಗಳಿಗೆ ವಾಸ ಸ್ಥನವಾಗಿದ್ದು, ಸೊಳ್ಳೆಗಳು ಹೆಚ್ಚಿವೆ.

ADVERTISEMENT

ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಒಟ್ಟು 1,623 ಹಾಗೂ ಪ್ರೌಢಶಾಲೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕರು ಗ್ರಾಮೀಣ ಭಾಗದಿಂದ ಬರುತ್ತಿದ್ದು, ಕ್ರೀಡೆಯಲ್ಲಿ ಆಸಕ್ತಿಯಿದ್ದರೂ ಸೌಲಭ್ಯವಿಲ್ಲದೆ ವಂಚಿತರಾಗುವಂತಾಗಿದೆ.

ಎರಡು ಸಾವಿರ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ಥಿತಿಯೂ ಭಿನ್ನವಾಗಿಲ್ಲ. ಮಳೆಗಾಲದಲ್ಲಿ ವಿಶಾಲವಾದ ಮೈದಾನದ ತುಂಬ ಒಳಚರಂಡಿ ಹಾಗೂ ಮಳೆ ನೀರು ಹರಿಯುವುದು ಸಾಮಾನ್ಯವಾಗಿದೆ. ಕಾಲೇಜು ಆವರಣದಲ್ಲಿದ್ದ ಬಾಸ್ಕೆಟ್‌ಬಾಲ್‌ ಅಂಕಣವೂ ಅಸ್ತಿತ್ವ ಕಳೆದುಕೊಂಡಿದೆ. ಇದರಿಂದ ಕ್ರೀಡಾ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಕ್ರೀಡಾ ಆಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

*
ಕೆಲ ವರ್ಷಗಳಿಂದ ಕಾಲೇಜಿನ ಮೈದಾನ ಕೆರೆಯಂತಾಗಿದ್ದು, ಮಳೆ ಬಂದರೆ ಪರಿಸ್ಥಿತಿ ಹೇಳತೀರದಾಗುತ್ತದೆ. ಸೊಳ್ಳೆಗಳ ಹಾವಳಿಯಿಂದ ತರಗತಿಯಲ್ಲಿ ಕೂರಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.
-ಬಿ. ಸ್ವಾಮಿ, ವಿದ್ಯಾರ್ಥಿ

*
ಕಾಲೇಜಿಗೆ ವಿಶಾಲವಾದ ಮೈದಾನವಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಕ್ರೀಡೆಯಲ್ಲಿ ಆಸಕ್ತಿಯಿದ್ದರೂ ಅಭ್ಯಾಸ ನಡೆಸಲು ಆಗುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಮೈದಾನವನ್ನು ಸರಿಪಡಿಸಬೇಕು.
ಎಂ. ನವೀನ್‌ ಕುಮಾರ್‌, ವಿದ್ಯಾರ್ಥಿ

*
ಕಳೆದ ಕೆಲ ದಿನಗಳಿಂದ ಮಳೆ ಸುರಿದ ಕಾರಣ ಇಡೀ ಮೈದಾನ ಕೆಸರು ಗದ್ದೆಯಾಗಿದ್ದು, ದಟ್ಟವಾಗಿ ಹುಲ್ಲು ಬೆಳೆದಿದೆ. ಕಾಲೇಜು ಶಿಥಿಲಾವಸ್ಥೆ ತಲುಪಿದ್ದು, ದುರಸ್ತಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
-ಡಾ.ಬಿ. ಕೃಷ್ಣಪ್ಪ, ಪ್ರಭಾರ ಪ್ರಾಂಶುಪಾಲ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.