ADVERTISEMENT

ಕಾಟಮಲಿಂಗೇಶ್ವರಸ್ವಾಮಿ ಜಾತ್ರೋತ್ಸವ ಸಂಭ್ರಮ

ಶಿವಗಂಗಾ ಚಿತ್ತಯ್ಯ
Published 8 ಮಾರ್ಚ್ 2021, 5:22 IST
Last Updated 8 ಮಾರ್ಚ್ 2021, 5:22 IST
ಚಳ್ಳಕೆರೆ ಕಾಟಪ್ಪನಹಟ್ಟಿ ಮ್ಯಾಸಬೇಡರ ಆರಾಧ್ಯ ದೈವ ಕಾಟಮಲಿಂಗೇಶ್ವರಸ್ವಾಮಿ ಪೆಟ್ಟಿಗೆ ದೇವರನ್ನು ಗಂಗಾಪೂಜೆಗೆ ಕರೆದೊಯ್ಯುತ್ತಿರುವುದು (ಎಡಚಿತ್ರ). ಜಾತ್ರೆಯಲ್ಲಿ ಜೋಡೆತ್ತಿನ ಗಾಡಿಯ ಜನಾಕರ್ಷಕ ಮೆರವಣಿಗೆ
ಚಳ್ಳಕೆರೆ ಕಾಟಪ್ಪನಹಟ್ಟಿ ಮ್ಯಾಸಬೇಡರ ಆರಾಧ್ಯ ದೈವ ಕಾಟಮಲಿಂಗೇಶ್ವರಸ್ವಾಮಿ ಪೆಟ್ಟಿಗೆ ದೇವರನ್ನು ಗಂಗಾಪೂಜೆಗೆ ಕರೆದೊಯ್ಯುತ್ತಿರುವುದು (ಎಡಚಿತ್ರ). ಜಾತ್ರೆಯಲ್ಲಿ ಜೋಡೆತ್ತಿನ ಗಾಡಿಯ ಜನಾಕರ್ಷಕ ಮೆರವಣಿಗೆ   

ಕಾಟಪ್ಪನಹಟ್ಟಿ (ಚಳ್ಳಕೆರೆ): ಕಾಟಪ್ಪನಹಟ್ಟಿಯಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಮ್ಯಾಸಬೇಡ ಬುಡಕಟ್ಟು ಸಮುದಾಯದ ಕಾಟಮಲಿಂಗೇಶ್ವರಸ್ವಾಮಿ ದೇವರ ಜಾತ್ರೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.

ಗುಡಿಕಟ್ಟಿನ ಮುಖಂಡರು ಜಾತ್ರೆಗೆ ಚಾಲನೆ ನೀಡಿದರು.ಬೆಳಿಗ್ಗೆ ಕಾಟಪ್ಪನಹಟ್ಟಿಯಿಂದ ಹೊರಟ ದೇವರ ಗೂಡಿನ ದನ, ನಂದಿಧ್ವಜ, ಛತ್ರಿ, ಚಾಮರ, ಜಾಂಡೇವು ಮತ್ತು ಪೆಟ್ಟಿಗೆ ದೇವರನ್ನು ಹೊತ್ತು ಮೆರವಣಿಗೆ ಮಾಡಲಾಯಿತು. ಗೋಸಿಕೆರೆ ಗ್ರಾಮದ ಬಳಿ ವೇದಾವತಿ ನದಿ ತೀರದಲ್ಲಿ ಕಹಳೆ, ಉರುಮೆ, ತಮಟೆ ವಾದ್ಯದ ಮೆರಣಿಗೆಯೊಂದಿಗೆ ಜೋಡೆತ್ತಿನ ಗಾಡಿ ಮೂಲಕ ಗಂಗಾಪೂಜೆ ನಡೆಸಲಾಯಿತು.

ಎತ್ತುಗಳ ಬೆನ್ನಿಗೆ ಹಾಕಿದ ಚಿತ್ತಾರದ ಜೂಲು, ಕೋಡುಗಳಿಗೆ ಕಟ್ಟಿದ್ದ ಬಣ್ಣ ಬಣ್ಣದ ಟೇಪು, ಕುಚ್ಚುಗಳು, ಎತ್ತುಗಳು ಹೆಚ್ಚೆ ಹಾಕಿ ನಡೆದಂತೆ ಕೋಡಿನ ಗಗ್ಗರಿ, ಕೊರಳಿಗೆ ಕಟ್ಟಿದ್ದ ಘಂಟೆ, ಗೆಜ್ಜೆಸರದ ಸಪ್ಪಳ ಮತ್ತು ಸಾಲಾಗಿ ಹೊರಟ ಜೋಡೆತ್ತಿನ ಗಾಡಿಗಳ ದೃಶ್ಯ ನೋಡಲು ಅತ್ಯಾಕರ್ಷಕವಾಗಿತ್ತು.

ADVERTISEMENT

ದೇವರ ಬೆಡಗಿನವರು ರಾತ್ರಿ ಊಟಕ್ಕೆ ತೆಗೆದುಕೊಂಡು ಹೋಗಿದ್ದ ಸಿಹಿ ಪಾದಾರ್ಥವಾದ ಗಾರಿಗೆ, ಕರ್ಜಿಕಾಯಿ, ರೊಟ್ಟಿ, ಚಪಾತಿ, ಶೇಂಗಾ ಚಟ್ನಿ, ಅನ್ನ, ಮೊಸರು ಬುತ್ತಿಯನ್ನು ನದಿ ತೀರದಲ್ಲಿ ಸವಿದರು.

ಸೋಮವಾರ ಬೆಳಿಗ್ಗೆ ನದಿ ತೀರದಲ್ಲಿ ಗಂಗಾ ಪೂಜೆ ನೆರವೇರಿಸಿದ ನಂತರ ಪೆಟ್ಟಿಗೆ ದೇವರುಗಳನ್ನು ಹೊತ್ತ ಭಕ್ತರು ದೇವರಮರಿಕುಂಟೆ, ದೊಡ್ಡೇರಿ ಗ್ರಾಮದ ಮೂಲಕ ರಾತ್ರಿ ಮೂಲ ಸ್ಥಳಕ್ಕೆ ಮರಳುವರು.

ಮಂಗಳವಾರ ಮಧ್ಯಾಹ್ನ ದೇವಸ್ಥಾನದಲ್ಲಿ ಜರುಗುವ ಕಾಮಗೇತಲು, ದಾನರು, ಮದ್ಲಲೇರು, ಬಿದ್ನರು, ಯರಮಂಚನನಾಯಕನ ಕುಲದವರು ಸೇರಿದಂತೆ ಒಂಬತ್ತು ಅಜ್ಜರು ಮಣೇವು ಆಚರಣೆಯಲ್ಲಿ ಭಾಗವಹಿಸುತ್ತಾರೆ.

ಛಲವಾದಿ, ಮಣೆಗಾರರು, ಹೆಳವರು, ಅಗಸರು ಮುಂತಾದವರು ತಮ್ಮ ತಮ್ಮ ಸೇವೆಯನ್ನು ದೇವರಿಗೆ ಸಲ್ಲಿಸಿದರು. ತುಮಕೂರು, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಆಂಧ್ರಪ್ರದೇಶದ ಮಡಕಶಿರಾ, ಅನಂತಪುರ ಮುಂತಾದ ಭಾಗಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಬುಧವಾರ ಭಕ್ತರು ಹರಕೆ ಅರ್ಪಿಸಿದ ನಂತರ ದೇವರಿಗೆ ಮಹಾ ಮಂಗಳಾರತಿ ಹಾಗೂ ಸಾಮೂಹಿಕ ಅನ್ನ ದಾಸೋಹದೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.