ADVERTISEMENT

ಹಿರಿಯೂರು: ರೈತರ ಹೊರಗಿಟ್ಟು ಕಾರ್ಯಕ್ರಮ ಆಯೋಜನೆ ಆರೋಪ

ಬಬ್ಬೂರು ಫಾರಂನ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:57 IST
Last Updated 16 ಅಕ್ಟೋಬರ್ 2025, 5:57 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಮುಂದೆ ಬುಧವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು 
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಮುಂದೆ ಬುಧವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು    

ಹಿರಿಯೂರು: ತಾಲ್ಲೂಕಿನ ಬಬ್ಬೂರು ಫಾರಂನ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ರೈತರನ್ನು ಹೊರಗಿಟ್ಟು ರೈತಪರ ಕಾರ್ಯಕ್ರಮಗಳನ್ನು ಆಯೋಜಿಸುತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಬುಧವಾರ ಸಂಶೋಧನಾ ಕೇಂದ್ರದ ಮುಂದೆ ಧರಣಿ ನಡೆಸಲಾಯಿತು.

‘ಶತಮಾನದಷ್ಟು ಪ್ರಾಚೀನವಾದ ಕೃಷಿ ಸಂಶೋಧನಾ ಕೇಂದ್ರವು ನೂರಕ್ಕೂ ಹೆಚ್ಚು ಎಕರೆಯಲ್ಲಿದ್ದು, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ವಿಜ್ಞಾನಿಗಳು ಹೋಬಳಿಗೊಂದು ಗ್ರಾಮ ಆಯ್ಕೆ ಮಾಡಿಕೊಂಡು ರೈತರೊಬ್ಬರ ಜಮೀನಿನಲ್ಲಿ ಬೀಜೋತ್ಪಾದನೆ, ಸಂಸ್ಕರಣೆ ಮಾಡುತ್ತಿಲ್ಲ. ಕೇಂದ್ರದಲ್ಲಿರುವ ಬೀಜ ಘಟಕದಲ್ಲಿ ಯಾವುದೇ ಬೀಜಗಳ ದಾಸ್ತಾನು ಇಲ್ಲ. ಹೊಸ ತಳಿಯ ಜಾನುವಾರು ಮತ್ತು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪೋಷಿಸುತ್ತಿರುವ ಜಾನುವಾರುಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿಲ್ಲ’ ಎಂದು ದೂರಿದರು.

‘ಬೆಳೆಗಳ ಗುಣಮಟ್ಟ ಪರೀಕ್ಷೆಗೆಂದು ಪ್ರಯೋಗಾಲಯ ಆರಂಭಿಸಿ ಆರು ವರ್ಷ ಕಳೆದರೂ ರೈತರು ಬೆಳೆದ ಬೆಳೆಗಳ ಗುಣಮಟ್ಟದ ಪರೀಕ್ಷೆ ನಡೆಸುತ್ತಿಲ್ಲ. ಮಣ್ಣು– ನೀರು ಪರೀಕ್ಷೆಗೆ ₹ 300 ಶುಲ್ಕ ಪಡೆದು, ವರದಿ ಕೊಡಲು 25– 30 ದಿನ ಕಾಯಿಸುವ ಕೇಂದ್ರದವರು ಮಣ್ಣಿನಲ್ಲಿನ ಗುಣಲಕ್ಷಣಗಳು, ಲವಣಗಳ ಬದಲಾವಣೆ ಕುರಿತು ಸೂಕ್ತ ಮಾಹಿತಿ ನೀಡುವುದಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದರು.

ADVERTISEMENT

‘ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿನಿಲಯದಲ್ಲಿ ಸರಿಯಾದ ಊಟ– ಉಪಾಹಾರ ಸಿಗುತ್ತಿಲ್ಲ. ಇದನ್ನು ಬಹಿರಂಗವಾಗಿ ಹೇಳಿಕೊಳ್ಳಲು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ದಿಢೀರ್‌ ಭೇಟಿ ನೀಡಿ ಪರೀಕ್ಷಿಸಬೇಕು’ ಎಂದು ಆಗ್ರಹಿಸಿದರು.

‘ತೋಟಗಾರಿಕೆ ವಿಭಾಗದಲ್ಲಿ ಹೊಸತಳಿಯ ಸಸ್ಯಗಳು ಸಿಗುತ್ತಿಲ್ಲ. ಈ ಭಾಗದಲ್ಲಿ ತೆಂಗು ಮತ್ತು ಅಡಿಕೆ ಸಸಿಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಈ ಕೇಂದ್ರದಲ್ಲಿ ನರ್ಸರಿ ಅಭಿವೃದ್ಧಿ ಪಡಿಸುವಲ್ಲಿ ವಿಜ್ಞಾನಿಗಳು ವಿಫಲರಾಗಿದ್ದಾರೆ. ಇಲಾಖೆ ಆವರಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡಗಳ ಸಂಖ್ಯೆ, ಅವುಗಳನ್ನು ಯಾವ್ಯಾವುದಕ್ಕೆ ಬಳಸಲಾಗುತ್ತಿದೆ ಎಂಬ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ’ ಎಂದು ಒತ್ತಾಯಿಸಿದರು.

‘ಕೃಷಿ ಮತ್ತು ತೋಟಗಾರಿಕೆಯಲ್ಲಿ ಯಾಂತ್ರಿಕತೆ ಅಳವಡಿಸಿಕೊಳ್ಳಲು ಸಂಶೋಧನಾ ಕೇಂದ್ರದವರು ಅಭಿವೃದ್ಧಿ ಪಡಿಸಿರುವ ಯಂತ್ರಗಳ ವಿವರ ಒದಗಿಸಬೇಕು. ತರಬೇತಿ ನೀಡುವುದಕ್ಕೆ ಮಾತ್ರ ಸೀಮಿತವಾಗಿರುವ ಕೇಂದ್ರವನ್ನು ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಬದಲು ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು. ಸಂಬಂಧಿಸಿದವರು ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಒಂದು ವಾರದ ಒಳಗೆ ಕ್ರಮಕ್ಕೆ ಶಿಫಾರಸು ಮಾಡಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ’ ಎಂದು ತಿಪ್ಪೇಸ್ವಾಮಿ ಎಚ್ಚರಿಸಿದರು.

ಧರಣಿಯಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ವೀರಣ್ಣಗೌಡ, ರಂಗಸ್ವಾಮಿ, ಜಯಣ್ಣ, ರಮೇಶ್, ಶಿವಣ್ಣ, ಸಣ್ಣ ತಿಮ್ಮಣ್ಣ, ಮಂಜುನಾಥ್, ವೀರಣ್ಣ, ರಮೇಶ್, ತಿಮ್ಮಾರೆಡ್ಡಿ, ಬಿ.ಆರ್. ರಂಗಸ್ವಾಮಿ, ಮೆಹಬೂಬ್, ಕರಿಯಪ್ಪ, ನಾಗಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.