ಚಿತ್ರದುರ್ಗ: 'ಕೆಎಂಇಆರ್‌ಸಿ ನಿಧಿಯನ್ನು ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ದುರ್ಬಲ ವರ್ಗದವರ ಏಳಿಗೆಗೆ ಬಳಸಿಕೊಳ್ಳಬೇಕು. ಅಧಿಕಾರಿಗಳು ಈ ಮಾನದಂಡಗಳನ್ನು ಆಧರಿಸಿ ವಿಸ್ತ್ರುತ ಯೋಜನಾ ವರದಿಗಳನ್ನು ಸಿದ್ಧಪಡಿಸಬೇಕು’ ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಎಸ್ ಬಿಜ್ಜೂರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಗಣಿಭಾದಿತ ವಲಯಗಳ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್) ಅಡಿಯಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಎಂಇಆರ್‌ಸಿ ಮುಖ್ಯ ಉದ್ದೇಶ ಗಣಿಬಾಧಿತ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಯೋಜನೆಗಳ ವರದಿಯನ್ನು ಕಾಲ ಕಾಲಕ್ಕೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುದಾನದಲ್ಲಿ ಯೋಜನೆ ರೂಪಿಸುವಂತೆ ಕೆಎಂಇಆರ್‌ಸಿ ಅಡಿ ಯೋಜನೆ ರೂಪಿಸಲು ಸಾಧ್ಯವಿಲ್ಲ. ಯೋಜನೆ ರೂಪಿಸಬೇಕಾದ ಗಣಿಬಾಧಿತ ಪ್ರದೇಶ ವ್ಯಾಪ್ತಿ, ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು, ಆದ್ಯತಾ ವಲಯಗಳನ್ನು ಸ್ಪಷ್ಟವಾಗಿ ನಮೂದಿಸಿ, ಮಾನದಂಡಗಳನ್ನು ರೂಪಿಸಲಾಗಿದೆ’ ಎಂದರು.
‘ಸರ್ಕಾರ ಘೋಷಿಸಿದ ಯೋಜನೆಗಳಿಗೆ ಆರಂಭದಲ್ಲಿ 1/3 ಅಂಶದ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಆದರೆ ಕೆಎಂಇಆರ್‌ಸಿ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಆರಂಭದಲ್ಲಿಯೇ ಕಾಮಗಾರಿಗೆ ತಗುಲುವ ಪೂರ್ಣ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಕಾಮಗಾರಿಯ ಪ್ರಗತಿಯಲ್ಲಿ ಯಾವುದೇ ಆರ್ಥಿಕ ತೊಂದರೆ ಎದುರಾಗುವುದಿಲ್ಲ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು’ ಎಂದರು.
‘ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲ್ಲೂಕಿನ ಗಣಿಬಾಧಿತ ಪ್ರದೇಶಗಳಲ್ಲಿ ₹ 3,792 ಕೋಟಿ ವೆಚ್ಚದ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಪರಿಸರ ಪುನಶ್ಚೇತನ ಅಡಿಯಲ್ಲಿ ಅರಣ್ಯ ಇಲಾಖೆ ₹ 541 ಕೋಟಿ, ಮಾಲಿನ್ಯ ನಿಯಂತ್ರಣ ಮಂಡಳಿ ₹ 15 ಕೋಟಿ, ಕೃಷಿ ಸಂಬಂಧಿಸಿ ಚಟುವಟಿಕೆಗಳಡಿಯಲ್ಲಿ ಕೃಷಿ ಇಲಾಖೆ ₹ 325 ಕೋಟಿ, ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ₹ 38 ಕೋಟಿ, ರೇಷ್ಮೆ ಇಲಾಖೆ ₹ 3.5 ಕೋಟಿ, ತೋಟಗಾರಿಕೆ ಇಲಾಖೆ ₹ 17.06 ಕೋಟಿ, ಮೀನುಗಾರಿಕೆ ₹7.62 ಕೋಟಿ ಯೋಜನೆಗಳನ್ನು ರೂಪಿಸಿವೆ’ ಎಂದರು.
‘ಆರೋಗ್ಯ ಇಲಾಖೆ ಸಮುದಾಯ, ಪ್ರಾಥಮಿಕ ಹಾಗೂ ಉಪ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ₹ 114 ಕೋಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ₹ 114 ಕೋಟಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ₹ 256 ಕೋಟಿ, ಪಿಯು ಕಾಲೇಜುಗಳ ಮೂಲ ಸೌಕರ್ಯ ಹಾಗೂ ಕಲಿಕಾ ಸುಧಾರಣೆಗಳ ಬಲವರ್ಧನೆಗಾಗಿ ₹ 50 ಕೋಟಿ ನೀಡಲಾಗಿದೆ’ ಎಂದರು.
‘ಚಳ್ಳಕೆರೆ ತಾಲ್ಲೂಕಿನ ಕುದಾಪುರದ ಬಳಿಯ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‍ಸಿ) ಆವರಣದಲ್ಲಿಯೇ ವಿಜ್ಞಾನ ಪಾರ್ಕ್ ನಿರ್ಮಾಣ ಮಾಡುವುದರಿಂದ ನಿರ್ವಹಣೆಗೆ ಉತ್ತಮವಾಗುತ್ತದೆ. ಗಣಿ ಬಾಧಿತ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಕೆಎಂಇಆರ್‌ಸಿ ವತಿಯಿಂದ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗುತ್ತಿದೆ. ಕೂಡಲೇ ಅನುಮೋದಿತ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿಕೊಡಬೇಕು’ ಎಂದರು.
‘ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳ ನಿರ್ಮಾಣದ ಯೋಜನೆ ರೂಪಿಸುವ ಮುನ್ನ ಸಾಧಕ ಬಾಧಕಗಳ ಕುರಿತು ವಿಸ್ತ್ರುತವಾಗಿ ಪರಿಶೀಲನೆ ನಡೆಸಬೇಕು. ತಾಲ್ಲೂಕು ಹಂತದಲ್ಲಿ ಪೌಷ್ಟಿಕ ಆಹಾರ ಸಿದ್ಧಪಡಿಸಿ ಶಾಲಾ ಮಕ್ಕಳಿಗೆ ಒದಗಿಸುವ ಕುರಿತು ಇಸ್ಕಾನ್ ಸೇರಿದಂತೆ ಖಾಸಗಿ ಭಾಗಿದಾರರ ಜೊತೆ ಚರ್ಚೆ ನಡೆಸಬೇಕು’ ಎಂದರು.
‘ಗಣಿಬಾಧಿತ ಪ್ರದೇಶಗಳಲ್ಲಿ ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಬಿಟ್ಟು ಹೋದ ಕಾಮಗಾರಿಗಳ ವಿವರವನ್ನು ಪಡೆದು ಯೋಜನಾ ವರದಿ ಸಿದ್ದಪಡಿಸಿ ಕೆಎಂಇಆರ್‌ಸಿಗೆ ಸಲ್ಲಿಸಲಾಗುವುದು’ ಎಂದರು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
‘ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಇರುವ ಹೊಸ ಯೋಜನೆಗಳನ್ನು ರೂಪಿಸಲಾಗುವುದು’ ಜಿ.ಪಂ ಸಿಇಒ ಆಕಾಶ್ ಹೇಳಿದರು.
ಜಿ.ಪಂ.ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.