ADVERTISEMENT

ರೈತರದ್ದು ಮತ್ತೊಂದು ಸ್ವಾತಂತ್ರ್ಯ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 11:19 IST
Last Updated 20 ಮಾರ್ಚ್ 2021, 11:19 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ಚಿತ್ರದುರ್ಗ: ದೇಶವನ್ನು ಖಾಸಗಿ ಕಂಪನಿಗಳ ಆಡಳಿತಕ್ಕೆ ಒಪ್ಪಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಸ್ವಾತಂತ್ರ್ಯ ಹರಣದ ಪ್ರಯತ್ನ. ಇದರ ವಿರುದ್ಧ ರೈತರು ನಡೆಸುತ್ತಿರುವ ಚಳವಳಿ ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ವಲಯದ ಉದ್ದಿಮೆಗಳನ್ನು ಖಾಸಗಿ ಕಂಪನಿಗಳ ಮಾಲಿಕತ್ವಕ್ಕೆ ಒಪ್ಪಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಬಹುರಾಷ್ಟ್ರೀಯ ಕಂಪನಿಗಳಿಗೂ ಹಾಗೂ ನೂರಾರು ವರ್ಷ ದೇಶವನ್ನು ಆಳಿದ ಈಸ್ಟ್‌ ಇಂಡಿಯಾ ಕಂಪನಿಗೂ ವ್ಯತ್ಯಾಸವಿಲ್ಲ’ ಎಂದು ಹೇಳಿದರು.

‘ಅಪಾಯದ ಹಾದಿಯಲ್ಲಿ ದೇಶ ಸಾಗುತ್ತಿದೆ. ಮಂಗಳೂರಿನ ವಿಮಾನ ನಿಲ್ದಾಣವನ್ನು ಅದಾನಿಗೆ ಅಡ ಇಡಲಾಗಿದೆ. ಅಂಬಾನಿಯ ರೈಲುಗಳು ಸಂಚಾರ ಆರಂಭಿಸಿವೆ. ಎಲ್‌ಐಸಿ, ಬ್ಯಾಂಕ್‌, ಬಸ್‌ ಸೇರಿ ಎಲ್ಲ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ರೈತ ಚಳವಳಿ ದೇಶಕ್ಕೆ ಹೊಸ ದಿಕ್ಕು ತೋರಲಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಪ್ಪು ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ಇಡೀ ದೇಶವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಬಿಜೆಪಿ, ಕೃಷಿ ವಲಯಕ್ಕೆ ಮೊದಲು ಕೈಹಾಕಿದೆ. ಮೂರು ಕೃಷಿ ಕಾಯ್ದೆಗಳನ್ನು ಕಾರ್ಪೊರೇಟ್‌ ಕಂಪನಿಗಳ ಪರವಾಗಿ ತಿದ್ದುಪಡಿ ಮಾಡಲಾಗಿದೆ. ರೈತರೊಂದಿಗೆ ಚರ್ಚಿಸಲು ಸಮಯ ಇಲ್ಲದಂತೆ ವರ್ತಿಸುತ್ತಿರುವ ಸರ್ಕಾರ ಚುನಾವಣೆ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ ನೇತೃತ್ವದ ಸರ್ಕಾರದ ಹಲವು ತೀರ್ಮಾನಗಳಲ್ಲಿ ಕಾಂಗ್ರೆಸ್‌ ಪಾತ್ರವೂ ಇದೆ. ಜಾಗತೀಕರಣ, ಜಿಎಸ್‌ಟಿ ಸೇರಿ ಹಲವು ಕಾಯ್ದೆಗಳು ಕಾಂಗ್ರೆಸ್‌ ಅವಧಿಯಲ್ಲೇ ರೂಪುಗೊಂಡಿವೆ. ರೈತ ಚಳವಳಿ ಬೆಂಬಲಿಸುವ ನಾಟಕವಾಡಿದರೆ ಸಾಲದು. ಕಾಯ್ದೆಗಳ ಬಗ್ಗೆ ಕಾಂಗ್ರೆಸ್‌ ಸ್ಪಷ್ಟ ನಿಲುವು ಹೊರಹಾಕಬೇಕು’ ಎಂದು ಒತ್ತಾಯಿಸಿದರು.

‘ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಮೀಸಲಾತಿ ಹೋರಾಟಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಿದರೆ ಮೀಸಲಾತಿ ಸೌಲಭ್ಯ ಮರೀಚಿಕೆಯಾಗಲಿದೆ. ಕಾರ್ಮಿಕ ಕಾಯ್ದೆಗಳನ್ನು ಕಾರ್ಪೊರೇಟ್‌ ಕಂಪನಿಗಳ ಪರವಾಗಿ ತಿದ್ದುಪಡಿ ಮಾಡಲಾಗಿದೆ. ಉದ್ಯೋಗ ಸೃಷ್ಟಿಸುವ ಬದಲು ಕಡಿತ ಮಾಡಲಾಗುತ್ತಿದೆ’ ಎಂದು ದೂರಿದರು.

ರೈತ ಸಂಘದ ಮುಖಂಡರಾದ ಭೈರೇಗೌಡ, ರವಿಚಂದ್ರ, ಚಿಕ್ಕಬ್ಬಗೆರೆ ನಾಗರಾಜ, ಸುರೇಶ್‌, ಜಯಪ್ಪ ಇದ್ದರು.

***

ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ರೂಪಿಸಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ದೇಶಕ್ಕೆ ವಿಸ್ತರಿಸಲಿದೆ. ಕರ್ನಾಟಕದಲ್ಲಿಯೂ ರೈತರ ಧ್ವನಿ ಮೊಳಗುತ್ತಿದೆ.

–ಕೋಡಿಹಳ್ಳಿ ಚಂದ್ರಶೇಖರ್‌, ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.