ADVERTISEMENT

ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೆ.ಆರ್‌.ಸಂಧ್ಯಾರೆಡ್ಡಿ ಅಧ್ಯಕ್ಷೆ

ಫೆ.17ರಿಂದ 2 ದಿನ ಕೋಟೆನಗರಿಯಲ್ಲಿ ನುಡಿ ಹಬ್ಬ; ಮೊದಲ ಬಾರಿಗೆ ಮಹಿಳಾ ಲೇಖಕಿಗೆ ಒಲಿದ ಗೌರವ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 5:48 IST
Last Updated 28 ಜನವರಿ 2026, 5:48 IST
ಕೆ.ಆರ್‌.ಸಂಧ್ಯಾರೆಡ್ಡಿ (ಕಟೌಟ್‌ ಮಾಡಬಹುದು)
ಕೆ.ಆರ್‌.ಸಂಧ್ಯಾರೆಡ್ಡಿ (ಕಟೌಟ್‌ ಮಾಡಬಹುದು)   

ಚಿತ್ರದುರ್ಗ: ‘ನಗರದ ಜಿ.ಜಿ.ಸಮುದಾಯ ಭವನದಲ್ಲಿ ಫೆ.17 ಹಾಗೂ ಫೆ.18ರಂದು ನಡೆಯಲಿರುವ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ ಕೆ.ಆರ್‌.ಸಂಧ್ಯಾರೆಡ್ಡಿ ಆಯ್ಕೆಯಾಗಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

‘ಸಾಹಿತ್ಯ ರಚನೆ, ಸಾಮಾಜಿಕ, ಸಾಂಸ್ಕೃತಿಕ ಹೋರಾಟದಲ್ಲಿ ಗುರುತಿಸಿಕೊಂಡಿರುವ ಸಂಧ್ಯಾರೆಡ್ಡಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ನಡೆದಿರುವ ಸಾಹಿತ್ಯ ಸಮ್ಮೇಳನಗಳಲ್ಲಿ ಇಲ್ಲಿಯವರೆಗೂ ಮಹಿಳಾ ಸಾಹಿತಿಗೆ ಸರ್ವಾಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಮಹಿಳಾ ಸಾಹಿತಿ, ಸಾಧಕಿಯೊಬ್ಬರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಲಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂಧ್ಯಾರೆಡ್ಡಿ ಅವರು ಶಿಕ್ಷಣ ತಜ್ಞರಾಗಿ ಅಪಾರ ಕೆಲಸ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.  ಕಾವ್ಯ, ಕಥಾ ಸಂಕಲನ, ಅಂಕಣ ಬರಹ,  ಜೀವನ ಚರಿತ್ರೆ, ಜನಾಂಗೀಯ ಅಧ್ಯಯನ,  ಜಾನಪದ ಅಧ್ಯಯನ,  ಸಂಪಾದಿತ ಜಾನಪದ ಕೃತಿಗಳು, ಅನುವಾದಿತ ಜಾನಪದ ಕೃತಿಗಳು,  ಮಹಿಳಾ ಸಾಹಿತ್ಯ , ಮಹಿಳಾ ಅಧ್ಯಯನ ಸಂಪಾದಿತ ಕೃತಿಗಳು,  ಭಾಷಾಂತರ ಕೃತಿಗಳನ್ನು ಅವರು ರಚಿಸಿದ್ದಾರೆ’ ಎಂದರು.

ADVERTISEMENT

‘ಚಿತ್ರದುರ್ಗದ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದವರು ಸಂಧ್ಯಾರೆಡ್ಡಿ. ತಾಲ್ಲೂಕಿನ ಹಾಯ್ಕಲ್‌ ಮೂಲದ ಅವರು ನಗರದಲ್ಲೇ ಪ್ರಾಥಮಿಕ, ಮಾಧ್ಯಮಿ ಹಾಗೂ ಪ್ರೌಢ ಶಿಕ್ಷಣ, ಪದವಿ ಶಿಕ್ಷಣ ಪೂರೈಸಿದ್ದಾರೆ. ಅವರ ಇಬ್ಬರು ತಾತಂದಿರೂ (ಎಂ.ರಾಮರೆಡ್ಡಿ ಹಾಗೂ ಎಂ.ಗೋವಿಂದರೆಡ್ಡಿ) ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲುಶಿಕ್ಷೆ ಅನುಭವಿಸಿದ್ದರು. ಇಂದಿಗೂ ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಕ್ರಿಯಶೀಲರಾಗಿದ್ದಾರೆ. ಜಾತಿ ಅಂತಸ್ತುಗಳ ಭೇದಭಾವ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಜಾಗೃತಿ ಮೂಡಿಸಿದ್ದಾರೆ’ ಎಂದರು.

‘ಲೇಖಕಿಯರ ಸಂಘ, ಕರ್ನಾಟಕ ಲೇಖಕಿಯರ ಸಂಘಗಳ ಅಧ್ಯಕ್ಷೆಯಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಮಹಿಳೆಯರಿಗಾಗಿ ಹವ್ಯಾಸಿ ಪತ್ರಿಕೋದ್ಯಮ ಶಿಬಿರ, ನಾಟಕ ಹಾಗೂ ರೂಪಕ ರಚನಾ ಶಿಬಿರ, ಪ್ರವಾಸ ಸಾಹಿತ್ಯ ಶಿಬಿರ, ರಾಜ್ಯ ಮಟ್ಟದ ರಂಗೋಲಿ ಕಮ್ಮಟ, ವಿವಿಧ ಭಾಷಾ ಲೇಖಕಿಯರ ಸಮಾವೇಶ, ಗ್ರಾಮಾಂತರ ಪ್ರದೇಶದ ಮಹಿಳೆಯರು ಹಾಗೂ ಲೇಖಕಿಯರಿಗಾಗಿ ಕಥಾಕಮ್ಮಟ, ಕಾವ್ಯಕಮ್ಮಟ, ಆರೋಗ್ಯ ಸಾಹಿತ್ಯ ಶಿಬಿರ, ಲೇಖಕಿಯರ ಸಮ್ಮೇಳ ಆಯೋಜನೆ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ’ ಎಂದರು.

‘ಕಾವೇರಿ ನ್ಯಾಯ ಮಂಡಳಿಯ ತೀರ್ಪು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸಂಧ್ಯಾರೆಡ್ಡಿ ಅವರು ನೇತೃತ್ವ ವಹಿಸಿದ್ದರು. ಮಹಿಳಾ ಮೀಸಲಾತಿ ಕುರಿತು ಸಂವಾದ ಕಾರ್ಯಕ್ರಮಗಳು, ಮಹಿಳಾ ದಿನಾಚರಣೆ ಹಾಗೂ ರಾಜ್ಯೋತ್ಸವ ಸಂದರ್ಭಗಳಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ, ಗ್ರಾಮೀಣ ಮಹಿಳೆಯರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಸಾಹಿತ್ಯ, ಸಂಸ್ಕೃತಿ, ಭಾಷೆಗಳ ಬಗ್ಗೆ ಅರಿವು ಮೂಡಿಸುವ ವಿವಿಧ ಚಟುವಟಿಕೆ ಹಮ್ಮಿಕೊಂಡಿದ್ದಾರೆ’ ಎಂದರು.

ಕಸಾಪ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ್‌ ಇದ್ದರು.

ತರಾತುರಿಯಲ್ಲಿ ಘೋಷಣೆ; ಆಕ್ಷೇಪ

‘ಹಲವು ವರ್ಷಗಳಿಂದ ಮಹಿಳಾ ಸಾಹಿತಿಯೊಬ್ಬರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬ ಕೂಗು ಮೊದಲಿನಿಂದಲೂ ಇತ್ತು. ಹಿರಿಯ ಸಾಹಿತಿ ಸಾಮಾಜಿಕ ಹೋರಾಟಗಾರ್ತಿ ಕೆ.ಆರ್‌.ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಿರುವುದು ಸರಿಯಾದ ನಿರ್ಧಾರ. ಆದರೆ ಅವರ ಹೆಸರು ಘೋಷಣೆಗೂ ಮುನ್ನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಸಾಪ ಪದಾಧಿಕಾರಿಗಳಿಗೆ ವಿಷಯ ತಿಳಿಸಬೇಕಾಗಿತ್ತು. ತರಾತುರಿಯಲ್ಲಿ ಏಕೆ ಹೆಸರು ಘೋಷಣೆ ಮಾಡಿದರು ಎಂಬುದು ತಿಳಿಯದಾಗಿದೆ’ ಎಂದು ತಾಲ್ಲೂಕು ಕಸಾಪ ಪದಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಪತ್ರಿಕಾಗೋಷ್ಠಿ ನಡೆಸಿ ಹೆಸರು ಘೋಷಣೆ ಮಾಡುವವರೆಗೂ ನಮಗೆ ವಿಷಯವೇ ಗೊತ್ತಿರಲಿಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನ ಆಚರಣೆ ಮಾಡುವಾಗ ಎಲ್ಲಾ ತಾಲ್ಲೂಕುಗಳ ಸಮಿತಿ ಸದಸ್ಯರ ಸಹಕಾರವೂ ಮುಖ್ಯವಾಗುತ್ತದೆ. ಜಿಲ್ಲಾ ಘಟಕದ ಪದಾಧಿಕಾರಿಗಳು ಗೊಂದಲದ ನಡುವೆ ಅಧ್ಯಕ್ಷರ ಹೆಸರು ಘೋಷಣೆ ಮಾಡಿರುವುದಕ್ಕೆ ಸ್ಪಷ್ಟನೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.