ADVERTISEMENT

ರೈತರು ಮಣ್ಣಿನ ಫಲವತ್ತತೆ ಕಾಪಾಡಲಿ: ಭಗವಂತ ಖೂಬಾ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 11:50 IST
Last Updated 13 ಅಕ್ಟೋಬರ್ 2021, 11:50 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕೃಷಿ ಮೇಳವನ್ನು ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ಶಿವಮೂರ್ತಿ ಮುರುಘಾ ಶರಣರು ಇದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕೃಷಿ ಮೇಳವನ್ನು ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ಶಿವಮೂರ್ತಿ ಮುರುಘಾ ಶರಣರು ಇದ್ದಾರೆ.   

ಚಿತ್ರದುರ್ಗ: ಕೀಟನಾಶಕ ಮತ್ತು ರಸಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸಲು ರೈತರು ಮಣ್ಣಿನ ಫಲವತ್ತತೆ ಕಾಪಾಡುವ ಅಗತ್ಯವಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಲಹೆ ನೀಡಿದರು.

ಇಲ್ಲಿನ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ನಡೆದ ಕೃಷಿ ಮೇಳದಲ್ಲಿ ಅವರು ಮಾತನಾಡಿದರು.

‘ಮಾನವನ ದೇಹದ ಆರೋಗ್ಯದಷ್ಟೇ ಮಣ್ಣಿನ ಆರೋಗ್ಯವೂ ಮುಖ್ಯ. ಮಣ್ಣಿನ ಆರೋಗ್ಯವನ್ನು ಪರೀಕ್ಷಿಸುವ ರೂಢಿ ರೈತರಲ್ಲಿ ಬೆಳೆಯಬೇಕಿದೆ. ರಸಗೊಬ್ಬರ ಮತ್ತು ಕೀಟನಾಶಕವನ್ನು ಮಿತವಾಗಿ ಬಳಕೆ ಮಾಡಿದರೆ ಮಾತ್ರ ಮಣ್ಣು ಸುರಕ್ಷಿತವಾಗಿ ಇರುತ್ತದೆ. ಇಲ್ಲವಾದರೆ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡಿಕೊಳ್ಳುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 2022ಕ್ಕೆ ರೈತರ ಆದಾಯವನ್ನು ದ್ವಿಗುಣ ಮಾಡುವ ಕನಸು ಹೊಂದಿದ್ದಾರೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕಾಯ್ದೆಗಳನ್ನು ರೂಪಿಸಿವೆ. ಬೆಂಬಲ ಬೆಲೆಯನ್ನು ಶೇ 60ರಷ್ಟು ಹೆಚ್ಚಸಲಾಗಿದೆ. ಫಸಲ್‌ ಬಿಮಾ ವಿಮೆ ಮಾಡಿಸಿದ ಬೀದರ್‌ ರೈತರು ದೇಶದಲ್ಲಿ ಅತಿ ಹೆಚ್ಚು ಪರಿಹಾರ ಪಡೆದಿದ್ದಾರೆ’ ಎಂದು ಹೇಳಿದರು.

‘ಅಧಿಕಾರಕ್ಕೆ ಬರುವ ಉದ್ದೇಶದಿಂದ ಹಲವು ರಾಜಕೀಯ ಪಕ್ಷಗಳು ಸಾಲ ಮನ್ನಾ ಮಾಡುವುದಾಗಿ ಹೇಳಿ ರೈತರನ್ನು ಅವಮಾನಿಸಿದವು. ಪ್ರಧಾನಿ ಮೋದಿ ಇದಕ್ಕಿಂತ ಭಿನ್ನ ಹೆಜ್ಜೆಯನ್ನು ಇಟ್ಟಿದ್ದಾರೆ. ಪ್ರತಿ ರೈತರಿಗೆ ವರ್ಷಕ್ಕೆ ₹ 6 ಸಾವಿರ ಕೃಷಿ ಸಮ್ಮಾನ್‌ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ದೇಶದ 12 ಕೋಟಿ ರೈತ ಕುಟುಂಬಕ್ಕೆ ಈವರೆಗೆ ₹ 1.25 ಲಕ್ಷ ಕೋಟಿ ಜಮೆ ಆಗಿದೆ’ ಎಂದು ಮಾಹಿತಿ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಟಾಟಾ, ಬಿರ್ಲಾ, ಅಂಬಾನಿಗಳು ಈ ದೇಶಕ್ಕೆ ಅನ್ನ ನೀಡುವುದಿಲ್ಲ. ಅನ್ನ ಕೊಡುವ ಶಕ್ತಿ ಇರುವುದು ರೈತರಲ್ಲಿ ಮಾತ್ರ. ಎಷ್ಟೇ ಕಷ್ಟಗಳು ಎದುರಾದರೂ ರೈತರು ಕೃಷಿ ಕಾಯಕವನ್ನು ಮರೆಯಲು ಸಾಧ್ಯವಿಲ್ಲ. ಆಕಾಶವನ್ನು ನೋಡಿ ಭೂಮಿಗೆ ಬೀಜ ಬಿತ್ತನೆ ಮಾಡುತ್ತಾರೆ. ಇಂತಹ ರೈತರ ಬದುಕು ಹಸನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅಭಿಪ್ರಾಯಪಟ್ಟರು.

‘ರೈತರು ಬೆಳೆಯುವ ಆಹಾರ ವಿಷಪೂರಿತ ಆಗಬಾರದು. ರಸಗೊಬ್ಬರ, ಕೀಟನಾಶಕದ ಹೆಚ್ಚು ಬಳಕೆಯಿಂದ ಆಹಾರ ವಿಷವಾಗುತ್ತಿದೆ. ಇದರಿಂದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಗೆ ಜನರು ಬೆಂಬಲ ನೀಡಬೇಕು. ಆಹಾರ ಸಂಸ್ಕರಣೆ ಮಾಡುವ ಮೂಲಕ ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿಪಡಿಸಬೇಕು’ ಎಂದು ಸಲಹೆ ನೀಡಿದರು.

‘2014–15ರಲ್ಲಿ ಮಂಡ್ಯ ಜಿಲ್ಲೆಯಲ್ಲಿ 95 ರೈತರು ಆತ್ಮಹತ್ಯೆ ಮಾಡಿಕೊಂಡರು. ನೀರಿನ ಕೊರತೆ ಎದುರಿಸುವ ಕೋಲಾರ ಜಿಲ್ಲೆಯಲ್ಲಿ 15 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಭತ್ತ, ಕಬ್ಬು ಮಾತ್ರ ಬೆಳೆಯುವ ಮಂಡ್ಯ ಜಿಲ್ಲೆಯ ರೈತರು ಬೇಗ ಸಂಕಷ್ಟಕ್ಕೆ ಸಿಲುಕಿದರು. ಸಮಗ್ರ ಕೃಷಿ ಬದ್ಧತಿ ಅಳವಡಿಸಿಕೊಂಡಿರುವ ಕೋಲಾರದ ರೈತರು ಮಾದರಿಯಾಗಿ ರೂಪುಗೊಂಡರು. ಕೋಲಾರ ಮಾದರಿಯ ಕೃಷಿಯನ್ನು ರಾಜ್ಯದ ಎಲ್ಲ ರೈತರು ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘6 ತಿಂಗಳಿಗೆ 50 ಪೈಸೆ’

‘ನಾನು ಕೃಷಿ ಮಾಡುತ್ತಿದ್ದೇನೆ. ಏಳು ವರ್ಷಗಳಿಂದ ನಿಂಬೆಹಣ್ಣು ಬೆಳೆಯುತ್ತಿದ್ದೇನೆ. ಒಂದು ನಿಂಬೆಹಣ್ಣು ಮೂಸಂಬಿ ಗಾತ್ರದಷ್ಟಿದೆ. ಆರು ತಿಂಗಳು ಕಷ್ಟಪಟ್ಟು ಬೆಳೆದ ನಿಂಬೆಯನ್ನು ಮಾರಾಟಗಾರರು 50ಪೈಸೆಗೆ ಖರೀದಿಸುತ್ತಾರೆ. ಆರು ಗಂಟೆ ಇಟ್ಟುಕೊಂಡು ₹ 5ಕ್ಕೆ ಮಾರಾಟ ಮಾಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ರೈತ ಉದ್ದಾರ ಆಗುವುದು ಹೇಗೆ’ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಪ್ರಶ್ನಿಸಿದರು.

‘ಕಾರ್ಖಾನೆಯಲ್ಲಿ ಉತ್ಪಾದನೆ ಆಗುವ ಪ್ರತಿ ವಸ್ತುವಿಗೂ ಬೆಲೆ ನಿಗದಿಯಾಗುತ್ತದೆ. ಆದರೆ, ರೈತನ ಬೆಳೆಗೆ ಬೆಲೆ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸರ್ಕಾರ ಹೀಗೆ ಬೆಲೆ ನಿಗದಿ ಮಾಡಿದರೂ ಅದು ಶಾಪವಾಗಿ ಪರಿಣಮಿಸುತ್ತಿದೆಯೇ ಹೊರತು ವರವಾಗುತ್ತಿಲ್ಲ. ಸಾವಯವ ಕೃಷಿಗೆ ಮಾರುಕಟ್ಟೆಯ ಕೊರತೆ ಇದೆ. ದೇಶದಲ್ಲಿ ರೈತರು ಮಾತ್ರ ಹೀನಾಯ ಸ್ಥಿತಿಯಲ್ಲಿ ಇದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೂರ್ತಿ ಮುರುಘಾ ಶರಣರು, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಪ್ರೊ.ಎನ್‌.ಲಿಂಗಣ್ಣ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಎಸ್‌.ನವೀನ್, ವಿಧಾನಪರಿಷತ್‌ ಮಾಜಿ ಸದಸ್ಯ ಕೃಷ್ಣಪ್ಪ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಇದ್ದರು.

***
ರೈತರ ಪ್ರಮುಖ ಬೇಡಿಕೆ

* ರೈತರ ಫಸಲು ಖರೀದಿಸಲು ₹ 5 ಸಾವಿರ ಕೋಟಿ ಆವರ್ತನಿಧಿ ಮೀಸಲಿರಿಸಬೇಕು.

*ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಸ್ಥಾಪಿಸಬೇಕು.

* ಕೃಷಿ ಇಲಾಖೆ, ತೋಟಗಾರಿಕೆ ಮತ್ತು ಸಹಕಾರ ಇಲಾಖೆ ಜಂಟಿಯಾಗಿ ಹಾಪ್‍ಕಾಮ್ಸ್‌ ವ್ಯವಸ್ಥೆ ಬಲಪಡಿಸಬೇಕು. ಶೀತಲ ಗೃಹಗಳನ್ನು ನಿರ್ಮಾಣ ಮಾಡಬೇಕು.

* ಶೇಂಗಾ ಫಸಲು ಸಂಪೂರ್ಣ ನಾಶವಾಗಿರುವುದರಿಂದ ಪ್ರತಿ ಎಕರೆಗೆ ಕನಿಷ್ಠ ₹ 15 ಸಾವಿರ ಪರಿಹಾರ ಘೋಷಣೆ ಮಾಡಬೇಕು.

* ಈರುಳ್ಳಿ ಬೆಳೆ ನಾಶವಾಗಿದ್ದು, ಪ್ರತಿ ಎಕರೆಗೆ ₹ 20 ಸಾವಿರ ಪರಿಹಾರವನ್ನು ಘೋಷಿಸಬೇಕು.

* ಕುರಿ, ಮೇಕೆ ಆಕಸ್ಮಿಕ ಮರಣ ಹೊಂದಿದಾಗ ‘ಅನುಗ್ರಹ’ ಯೋಜನೆಯಲ್ಲಿ ತಲಾ ₹ 5 ಪರಿಹಾರ ನೀಡಬೇಕು.

* ಹನಿ ಮತ್ತು ತುಂತುರು ನೀರಾವರಿಗೆ ಶೇ 90ರಷ್ಟು ಸಬ್ಸಿಡಿ ನೀಡಬೇಕು.

***

ನೂತನ ಕೃಷಿ ಕಾಯ್ದೆಗಳಿಂದ ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ರೈತರ ಬೆಳೆಗೆ ಹೆಚ್ಚು ಲಾಭ ಸಿಗಲಿದೆ. ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದು ಬರಲಿದೆ. ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ.

ಪ್ರೊ.ಟಿ.ಎಂ.ವೆಂಕಟರೆಡ್ಡಿ

ಕೃಷಿ–ಆರ್ಥಿಕ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.