ADVERTISEMENT

ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಕೈಜೋಡಿಸದ ಬುದ್ಧಿ ಜೀವಿಗಳು; ಕಸವನಹಳ್ಳಿ ರಮೇಶ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:34 IST
Last Updated 14 ಜನವರಿ 2026, 7:34 IST
ಹಿರಿಯೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂಚಿಟಿಗ ಜನಾಂಗದ ಮುಖಂಡರ ಸಭೆಯಲ್ಲಿ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿದರು 
ಹಿರಿಯೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂಚಿಟಿಗ ಜನಾಂಗದ ಮುಖಂಡರ ಸಭೆಯಲ್ಲಿ ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತನಾಡಿದರು    

ಹಿರಿಯೂರು: ‘ಕುಂಚಿಟಿಗ ಜನಾಂಗದಲ್ಲಿರುವ ಉಳ್ಳವರು, ಬುದ್ಧಿಜೀವಿಗಳು ಸಮಾಜದ ಅಭಿವೃದ್ಧಿಗೆ ಕೈಜೋಡಿಸದಿರುವುದು ಬೇಸರದ ಸಂಗತಿ’ ಎಂದು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.

ನಗರದ ಪ್ರವಾಸಿಮಂದಿರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುಂಚಿಟಿಗ ಜನಾಂಗದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಬುದ್ಧಿಜೀವಿಗಳು, ಉಳ್ಳವರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಬದಲು, ತಂತಮ್ಮ ರಾಜಕಾರಣ, ವ್ಯವಹಾರ, ಕೃಷಿ, ವೃತ್ತಿ, ಕುಟುಂಬದ ಅಭಿವೃದ್ಧಿಗೆ ಮಾತ್ರ ಸಮಾಜವನ್ನು ಬಳಸಿಕೊಳ್ಳುತ್ತಾರೆ. ಸಮಾಜದಲ್ಲಿನ ಹಿಂದುಳಿದವರು, ಬಡವರ ಬಗ್ಗೆ ಅವರು ತಿರಸ್ಕಾರ ಭಾವದಿಂದ ನೋಡುತ್ತಾರೆ. ಸಂಘಟನೆಯವರು ಮಾತನಾಡಿಸಿದರೆ ಎಲ್ಲಿ ಸಹಾಯ ಕೇಳುತ್ತಾರೋ ಎಂದು ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ದೂರ ಇಡುತ್ತಾರೆ. ಚುನಾವಣೆಗಳು ಬಂದಾಗ ಮಾತ್ರ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಭಾವಾನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಕುಂಚಿಟಿಗ ಜನಾಂಗದಲ್ಲಿ ಉಳ್ಳವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರು ಸಮಾಜಕ್ಕೆ ಬೇರೆ ಏನೂ ಮಾಡುವುದು ಬೇಡ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಓದಿಗೆ ನೆರವು ನೀಡಿದರೆ ಸಾಕು. ನಗರ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳ ವಸತಿಗೆ ಹಾಸ್ಟೆಲ್ ಆರಂಭಿಸಲು ಕೈಲಾದ ಆರ್ಥಿಕ ನೆರವು ನೀಡಿದರೆ ಅಕ್ಷರ ದಾಸೋಹದ ಪುಣ್ಯ ಲಭಿಸುತ್ತದೆ’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ ಮಾತನಾಡಿ, ‘ಸಮಾಜದಲ್ಲಿನ ಬಡಮಕ್ಕಳ ಶಿಕ್ಷಣಕ್ಕಾಗಿ, ಸಂಸ್ಕಾರ, ಮೌಲ್ಯಗಳನ್ನು ಕಲಿಸಲಿಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶದಲ್ಲಿರುವ ಕುಂಚಿಟಿಗ ಬಾಂಧವರ ಜೊತೆ ಒಡನಾಟ ಹೊಂದಬೇಕು. ಮುಂದಿನ ತಿಂಗಳು ಕುಂಚಿಟಿಗ ಕುಲದೇವರ ಆಶೀರ್ವಾದ ಮತ್ತು ಸಮಾಜದವರ ಜೊತೆ ಸಮ್ಮಿಲನಕ್ಕಾಗಿ ತಮಿಳುನಾಡು, ಆಂಧ್ರಪ್ರದೇಶಕ್ಕೆ ಪ್ರವಾಸ ಏರ್ಪಡಿಸಿದ್ದೇವೆ’ ಎಂದರು.

ಸಭೆಯಲ್ಲಿ ಮುಖಂಡರಾದ ಕೆ.ಜಿ. ಹನುಮಂತರಾಯ, ದಿಂಡಾವರ ಚಂದ್ರಗಿರಿ, ಕಾತ್ರಿಕೇನಹಳ್ಳಿ ಮಂಜುನಾಥ್, ಭಾರತಿ, ಶಶಿಕಲಾ, ಗುಡಿಗೌಡ, ಚಿಲ್ಲಹಳ್ಳಿ ನಿಜಲಿಂಗಪ್ಪ, ಯಳನಾಡು ಚೇತನ್, ಗಡಾರಿ ಕೃಷ್ಣಪ್ಪ, ದೇವರಾಜ ಮೇಷ್ಟ್ರು ಹಾಜರಿದ್ದರು.