ADVERTISEMENT

ಹರತಾಳ ಕೈಬಿಟ್ಟು ಉದ್ಯಮ ಆರಂಭಿಸಿ

ದಲಿತ ಸಮುದಾಯಕ್ಕೆ ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 11:48 IST
Last Updated 19 ಡಿಸೆಂಬರ್ 2019, 11:48 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳ ಗುರುವಾರ ಏರ್ಪಡಿಸಿದ್ದ ಸವಲತ್ತು ಜಾಗೃತಿ ಸಮಾರಂಭವನ್ನು ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಉದ್ಘಾಟಿಸಿದರು. ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳ ಗುರುವಾರ ಏರ್ಪಡಿಸಿದ್ದ ಸವಲತ್ತು ಜಾಗೃತಿ ಸಮಾರಂಭವನ್ನು ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಉದ್ಘಾಟಿಸಿದರು. ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ ಇದ್ದಾರೆ.   

ಚಿತ್ರದುರ್ಗ: ಧರಣಿ ನಡೆಸಿ ಧಿಕ್ಕಾರ ಕೂಗುವುದನ್ನು ಇನ್ನೂ ಎಷ್ಟು ದಿನ ಮಾಡುತ್ತೀರಿ? ಪಾದಯಾತ್ರೆ, ಅರೆಬೆತ್ತಲೆ ಪ್ರತಿಭಟನೆಗಳನ್ನು ಕೈಬಿಟ್ಟು ಸ್ವಾವಲಂಬಿಗಳಾಗಲು ಮುಂದಾಗಿ. ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮ ಆರಂಭಿಸಿ. ಆರ್ಥಿಕ ಸ್ಥಿತಿ ಸುಧಾರಿಸಿದರೆ ಸಾಮಾಜಿಕ ಬದಲಾವಣೆ ಕಾಣಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳ ಸಂಘ ಉತ್ಸಾಹಿ ಉದ್ದಿಮೆದಾರರಿಗೆ ಗುರುವಾರ ಏರ್ಪಡಿಸಿದ್ದ ಸವಲತ್ತು ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ಶೇ 38ರಷ್ಟಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಈ ಜಿಲ್ಲೆಯಲ್ಲಿ ದಲಿತರ ಸ್ಥಿತಿ ಶೋಚನೀಯವಾಗಿದೆ. ಬರದ ನಾಡಿಗೆ ಕೈಗಾರಿಕೆಗಳು ಬಂದರೆ ಶೋಷಿತರಿಗೆ ಅನುಕೂಲವಾಗುತ್ತದೆ. ಚುನಾವಣೆಯಲ್ಲಿ ಮತಚಲಾಯಿಸುವ ಮುನ್ನ ವಿವೇಕ ಬಳಸಿ. ನ್ಯಾಯೋಚಿತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಅಧಿಕಾಯುತವಾಗಿ ಕೇಳೋಣ’ ಎಂದರು.

ADVERTISEMENT

‘ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಸೇರಿ ಯಶಸ್ವಿ ಉದ್ಯಮಿಗಳು ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಉದ್ಯಮ ಕ್ಷೇತ್ರಕ್ಕೆ ಕೈಹಾಕಿ ಕಷ್ಟಪಟ್ಟು ದುಡಿದು ಮೇಲೆ ಬಂದವರು. ಪಾರಂಪರಿಕ ಕೆಲಸ ಬಿಟ್ಟು ವ್ಯಾಪಾರದತ್ತ ಗಮನ ಹರಿಸಿ. ಕರ್ನಾಟಕ ರಾಜ್ಯ ಕೈಗಾರಿಕಾಭಿವೃದ್ಧಿ ಮಂಡಳಿಯ ಸ್ವಾಧೀನದಲ್ಲಿ 40 ಸಾವಿರ ಎಕರೆ ಭೂಮಿ ಇದೆ. ಇದರಲ್ಲಿ ದಲಿತ ಉದ್ದಿಮೆದಾರರಿಗೆ ಕನಿಷ್ಠ 8 ಸಾವಿರ ಎಕರೆ ಹಂಚಿಕೆಯಾಗಬೇಕಿತ್ತು. ಆದರೆ, ಸಿಕ್ಕಿದ್ದು ಕೇವಲ 600 ಎಕರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಲ ಪಡೆದವನೇ ದೇಶಭಕ್ತ:ಸಾರ್ವಜನಿಕ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆಯುವ ಸಾಮರ್ಥ್ಯ ಹೊಂದಿದ ವ್ಯಕ್ತಿಯೇ ನಿಜವಾದ ದೇಶಭಕ್ತ ಎಂದು ಡಾ.ಎಲ್‌.ಹನುಮಂತಯ್ಯ ಹಾಸ್ಯ ಚಟಾಕಿ ಹಾರಿಸಿದರು.

‘ದೊಡ್ಡ ಉದ್ಯಮಿಗಳಿಂದ ವಸೂಲಿ ಆಗದೇ ಇರುವ ಸಾಲದ ಮೊತ್ತ 10 ಲಕ್ಷ ಕೋಟಿ ಇದೆ. ಕೋಟಿಗಟ್ಟಲೆ ಸಾಲ ಪಡೆಯುವ ಸಾಮರ್ಥ್ಯವನ್ನು ದಲಿತರು ಬೆಳೆಸಿಕೊಳ್ಳಬೇಕು. ವ್ಯಾಪಾರದ ಮೂಲಕವೇ ಮುಸ್ಲಿಮರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ, ಅವರು ತಲೆತಗ್ಗಿಸುವ ಪ್ರಸಂಗ ಉದ್ಭವಿಸಿಲ್ಲ. ಅವರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿವೆ. ಮತ್ತೊಬ್ಬರ ಎದುರು ಕೈಚಾಚುವುದನ್ನು ಬಿಟ್ಟು ಸ್ವಾವಲಂಬಿಗಳಾಗಿ’ ಎಂದು ಸಲಹೆ ನೀಡಿದರು.

ಸಮಾಜವಾದಿ ಚಿಂತಕ ಸುಂದರ್ ಮಾತನಾಡಿ, ‘ದಲಿತ ಸಮುದಾಯಕ್ಕೆ ಸಾಮಾಜಿಕ ಸುರಕ್ಷತೆ ತಂದುಕೊಟ್ಟಿದ್ದು ದಲಿತ ಚಳವಳಿ. ದಲಿತ ಸಮುದಾಯದ ಯುವ ಉತ್ಸಾಹಿಗಳಿಗೆ ಉತ್ತೇಜನ ನೀಡುವ ಕೆಲಸವನ್ನು ಚಳವಳಿ ಮಾಡಬೇಕಿತ್ತು. ಆ ಕೆಲಸ ಈಗ ಆರಂಭವಾಗಿದೆ’ ಎಂದು ಹೇಳಿದರು.

‘ಸಾರ್ವಜನಿಕ ಉದ್ಯಮಗಳು ಖಾಸಗೀಕರಣಗೊಳ್ಳುತ್ತಿವೆ. ಹೊಸ ಕೈಗಾರಿಕೆ ತೆರೆಯುವುದನ್ನು ಸರ್ಕಾರ ಕೈಬಿಟ್ಟಿದೆ. ಸಾರ್ವಜನಿಕ ಉದ್ದಿಮೆಯಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಸಿಗುತ್ತಿತ್ತು. ಈಗ ಗುತ್ತಿಗೆ ಆಧಾರಿತ ಕೆಲಸದ ಪದ್ಧತಿ ರೂಢಿಗೆ ಬಂದಿದ್ದು, ದಲಿತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಉದ್ದಿಮೆ ಆರಂಭಿಸುವುದು ಮಾತ್ರವೇ ದಲಿತರ ಮುಂದೆ ಇರುವ ದಾರಿ’ ಎಂದು ಅಭಿಪ್ರಾಯಪಟ್ಟರು.

ಬಲಿತ ದಲಿತರೇ ಅಪಾಯಕಾರಿ:ಸವರ್ಣೀಯರ ಬದಲು ದಲಿತ ಸಮುದಾಯದ ಬಲಿತ ಶಕ್ತಿಗಳೇ ಹೆಚ್ಚು ಅಪಾಯಕಾರಿ. ಇವರ ಬಗ್ಗೆ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಅಭಿಪ್ರಾಯಪಟ್ಟರು.

‘ಸರ್ಕಾರದ ಬಹುತೇಕ ಸವಲತ್ತುಗಳು ದಲಿತ ಸಮುದಾಯದ ಬಲಿತ ಶಕ್ತಿಗಳ ಪಾಲಾಗುತ್ತಿವೆ. ಸೌಲಭ್ಯ ಪಡೆದು ಮೇಲೆ ಬಂದವರು ಸಮುದಾಯದತ್ತ ಗಮನ ಹರಿಸುತ್ತಿಲ್ಲ. ಶ್ರೀಮಂತಿಕೆಯೇ ಒಂದು ಜಾತಿಯಾಗಿ ರೂಪುಗೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕು. ಇಲ್ಲವಾದರೆ ಸರ್ಕಾರಿ ಸವಲತ್ತುಗಳು ಕನ್ನಡಿಯೊಳಗಿನ ಗಂಟಾಗಿ ಉಳಿದುಬಿಡುತ್ತವೆ. ಸಾರ್ವಜನಿಕ ಜೀವನದಲ್ಲಿ ಇರುವವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಮುದಾಯದ ಋಣ ತೀರಿಸಲು ಸೌಲಭ್ಯ ವಂಚಿತರತ್ತ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್, ಕೈಗಾರಿಕೋದ್ಯಮಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಚವೀರಪ್ಪ, ಎಸ್‌ಸಿ, ಎಸ್‌ಟಿ ಉದ್ದಿಮೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್, ಎಸ್.ಟಿ. ಜಗತ್‍ಕುಮಾರ್, ಟಿ.ಎನ್. ಶಿವಲಿಂಗಪ್ಪ, ತಿಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.