ಚಿತ್ರದುರ್ಗ: ರಟ್ಟೆಯಲ್ಲಿರುವ ಬಲವನ್ನೇ ನಂಬಿ ಬದುಕುತ್ತಿರುವ ಇಲ್ಲಿಯ ಕಲ್ಲುಕುಟಿಕರಿಗೆ ಫ್ಲೋರೈಡ್‌ಯುಕ್ತ ಕುಡಿಯುವ ನೀರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದಿಟ್ಟಿದೆ. ಜೊತೆಗೆ ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಈ ಜನರು ನಾಗರಿಕ ಸಮಾಜದಿಂದ ದೂರ ಉಳಿದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಹೊಳಲ್ಕೆರೆ ತಾಲ್ಲೂಕು, ಬಿ.ದುರ್ಗ ಹೋಬಳಿ, ಚಿಕ್ಕಜಾಜೂರಿನಿಂದ 9 ಕಿ.ಮೀ. ದೂರದಲ್ಲಿರುವ ದಾಸರಹಳ್ಳಿ ಗ್ರಾಮದ ಜನರು ಇಲ್ಲಗಳ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಕುಡಿಯಲು ಶುದ್ಧ ನೀರಿಲ್ಲ, ಗುಡಿಸಲುಗಳಿಗೆ ಹಕ್ಕುಪತ್ರ ಇಲ್ಲ, ಬೆಳಕಿಗೆ ವಿದ್ಯುಚ್ಛಕ್ತಿ ಸೌಲಭ್ಯವಿಲ್ಲ, ಓಡಾಡಲು ಬಸ್ ಇಲ್ಲ, ಎಸ್‌ಎಸ್‌ಎಲ್‌ಸಿಯಿಂದ ಹೆಚ್ಚು ಓದಿದವರು ಇಡೀ ಗ್ರಾಮದಲ್ಲಿ ಯಾರೂ ಸಿಗುವುದಿಲ್ಲ.
ಚಿಕ್ಕಜಾಜೂರು, ಕಡೂರು, ನಂದಿಹಳ್ಳಿ ನಂತರ ಬರುವ ದಾಸರಹಳ್ಳಿ ಗುಡ್ಡಗಳ ಸಾಲು. ಅರಣ್ಯ ಪ್ರದೇಶದ ನಡುವೆ ಬರುತ್ತದೆ. ಅತ್ತ ದಾವಣಗೆರೆಯೂ ಅಲ್ಲದ ಇತ್ತ ಚಿತ್ರದುರ್ಗ ಜಿಲ್ಲೆಯೂ ಅಲ್ಲದ ಗಡಿಗ್ರಾಮವಿದು. ಶುದ್ಧ ಕುಡಿಯುವ ನೀರಿಗೆ 2–3 ಕಿ.ಮೀ ತೆರಳಬೇಕಾದ ಪರಿಸ್ಥಿತಿ ಇದ್ದು, ಜನರು ಫ್ಲೋರೈಡ್ ನೀರನ್ನೇ ಕುಡಿಯುತ್ತಿದ್ದಾರೆ. ಹಿರೇಹೊಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಕ್ಕೆ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಆದರೆ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು ಗ್ರಾಮಸ್ಥರು ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ನಾಲ್ಕೈದು ವರ್ಷಗಳ ಹಿಂದೆಯೇ ಇಲ್ಲಿಯ ನೀರಿನ ಗುಣಮಟ್ಟ ಪರಿಶೀಲಿಸಲಾಗಿದ್ದು, ಫ್ಲೋರೈಡ್ ಅಂಶ ಹೆಚ್ಚಾಗಿದೆ ಎಂಬುದು ಪತ್ತೆಯಾಗಿದೆ. ಜೊತೆಗೆ ಕ್ಯಾನ್ಸರ್‌ಕಾರಕ ಯುರೇನಿಯಂ ಅಂಶವೂ ಇದ್ದು, ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ಮಾಹಿತಿ ಇದೆ. ಆದರೂ ಜನರು ಇದೇ ನೀರು ಸೇವನೆ ಮಾಡುತ್ತಿದ್ದಾರೆ. ಗ್ರಾಮದ ಬಹುತೇಕ ಜನರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಫ್ಲೋರೈಡ್ ನೀರಿನ ಪರಿಣಾಮ ಎದುರಿಸುತ್ತಿದ್ದಾರೆ.
ಕಲ್ಲು ಒಡೆದು ಹೊಟ್ಟೆ ತುಂಬಿಸಿಕೊಳ್ಳುವ ಈ ಜನರಿಗೆ ರಟ್ಟೆಯ ಬಲವೇ ಆಧಾರ. ಆದರೆ ಅನಾರೋಗ್ಯ ಇವರ ಬಲವನ್ನು ಕಸಿದುಕೊಳ್ಳುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೀಲುಗಳ ನೋವು ಇಲ್ಲಿಯ ಯುವಕರು ಹಾಗೂ ಮಹಿಳೆಯರನ್ನು ಕಾಡುತ್ತಿದೆ. ಮೊಣಕಾಲು ನೋವು, ಮೈಕೈನೋವು, ಜ್ವರ ಆಗಾಗ ಕಾಣಿಸಿಕೊಳ್ಳುತ್ತಿದೆ. ಕೆಲವರ ಕೈಕಾಲುಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
ಜನರ ಆರೋಗ್ಯ ದೃಷ್ಟಿಯಿಂದ ಕಡೇಪಕ್ಷ ಒಂದು ಶುದ್ಧ ನೀರಿನ ಘಟಕವನ್ನಾದರೂ ಸ್ಥಾಪನೆ ಮಾಡಬೇಕು ಎಂದು ಇಲ್ಲಿಯ ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಗ್ರಾಮಕ್ಕೆ ಆರ್.ಒ ಘಟಕ ಬಂದಿಲ್ಲ. ದಾಸರಹಳ್ಳಿ ಮಾತ್ರವಲ್ಲದೇ ಸಮೀಪದ ಕಡೂರು, ನಂದಿಹಳ್ಳಿ, ಕಸ್ತೂರಬಾ ನಗರ ಬಡಾವಣೆಗಳಲ್ಲಿಯೂ ಫ್ಲೋರೈಡ್ ನೀರಿನ ಸಮಸ್ಯೆ ಇದೆ.
ಆದರೆ, ಬೇರೆ ಹಳ್ಳಿಗಳಲ್ಲಿ ಆರ್.ಒ ಘಟಕ ಇರುವ ಕಾರಣ ಅಲ್ಲಿಯ ಜನರಿಗೆ ಶುದ್ಧ ನೀರು ದೊರೆಯುತ್ತಿದೆ. ಆದರೆ ದಾಸರಹಳ್ಳಿಯಲ್ಲಿ ಆರ್‌ಒ ಘಟಕ ಇಲ್ಲದ ಕಾರಣ ಫ್ಲೋರೈಡ್‌ಯುಕ್ತ ಕೊಳವೆಬಾವಿ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಇಲ್ಲಿಯ ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆರ್.ಒ ಘಟಕ ಮಂಜೂರು ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಇಲ್ಲಿವರೆಗೂ ಅದು ಸಾಕಾರಗೊಂಡಿಲ್ಲ.
ಸಮೀಪದ ಕಾಡಿನಲ್ಲಿ ದೊರೆಯುವ ಕಲ್ಲುಗಳನ್ನು ತರುವ ಇಲ್ಲಿಯ ಜನರು ಸೈಜುಗಲ್ಲು, ಜಲ್ಲಿಗಳನ್ನು ಒಡೆಯುತ್ತಾರೆ. ಸೈಜು, ಜಲ್ಲಿಯ ಅವಶ್ಯಕತೆ ಇರುವವರು ಗ್ರಾಮಕ್ಕೆ ಬಂದು ಖರೀದಿ ಮಾಡಿಕೊಂಡು ತೆರಳುತ್ತಾರೆ. ಇಲ್ಲಿಯ ಜನರಿಗೆ ಕಲ್ಲು ಒಡೆಯುವುದೇ ಪ್ರಮುಖ ಆಧಾರ. ಸಮೀಪದಲ್ಲೇ ಜಲ್ಲಿ ಕ್ರಷರ್‌ಗಳು ಇದ್ದರೂ ದಾಸರಹಳ್ಳಿ ಜನರು ಕುಲಕಸುಬಿಗೆ ಮಾರುಹೋಗಿ ಇನ್ನೂ ಕೈಕುಳಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.
ಗ್ರಾಮದಲ್ಲಿ 85 ಮನೆಗಳಿದ್ದು, 30ಕ್ಕೂ ಹೆಚ್ಚು ಮನೆಗಳು ತೆಂಗಿನಗರಿಯ ಗುಡಿಸಲುಗಳಾಗಿವೆ. ಕೆಲವು ಮನೆಗಳು ಗ್ರಾಮಠಾಣ ವ್ಯಾಪ್ತಿಯಲ್ಲೂ ಇಲ್ಲ. ಹೀಗಾಗಿ ವಸತಿ ಯೋಜನೆ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಜೊತೆಗೆ ಕೆಲವು ಮನೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅವರು ಮನೆ ಕಟ್ಟಿಕೊಳ್ಳಲು ಅನುಮತಿ ದೊರೆಯುತ್ತಿಲ್ಲ. ಮನೆ ಕಟ್ಟಿಕೊಂಡರೆ ಯಾವಾಗ ಅಧಿಕಾರಿಗಳು ಬಂದು ತೆರವುಗೊಳಿಸುತ್ತಾರೋ ಎಂಬ ಭಯ ಕಾಡುತ್ತಿರುವ ಕಾರಣ ಇಲ್ಲಿಯ ಜನರು ಗುಡಿಸಲುಗಳಲ್ಲೇ ವಾಸಿಸುವ ಪರಿಸ್ಥಿತಿ ಇದೆ.
ಮನೆಗಳಿಗೆ ಹಕ್ಕುಪತ್ರಗಳ ಸಮಸ್ಯೆಯಿಂದಾಗಿ ಬಹುತೇಕ ಜನರಿಗೆ ಪಡಿತರ ಚೀಟಿಯನ್ನೂ ವಿತರಿಸಿಲ್ಲ. ಹೀಗಾಗಿ ಅನ್ನಭಾಗ್ಯ ಸೇರಿದಂತೆ ಸರ್ಕಾರದಿಂದ ದೊರೆಯವ ಸೌಲಭ್ಯಗಳೂ ದೊರೆಯದಾಗಿದೆ.
‘ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಊರು ತೀರಾ ಹಿಂದುಳಿದಿದೆ. ನಮಗೆ ವಸತಿ ಯೋಜನೆಗಳಲ್ಲಿ ಹೆಚ್ಚು ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿಕೊಂಡರೂ ಗ್ರಾಮ ಪಂಚಾಯಿತಿ ಅಧಿಕಾರಿಗಳೂ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಾರೆ.
ನೀರು ಪರೀಕ್ಷೆಯಲ್ಲಿ ಫ್ಲೋರೈಡ್ ಅಂಶ ಪತ್ತೆ ಶುದ್ಧ ನೀರು ಘಟಕ ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯ ದಾಸರಹಳ್ಳಿಯಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಶುದ್ಧ ನೀರು ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ಗ್ರಾ.ಪಂ ಸಭೆ ನಡೆಸಿ ದಾಸರಹಳ್ಳಿಗೆ ಮೂಲ ಸೌಲಭ್ಯ ಒದಗಿಸಲಾಗುವುದು.ಫಾತಿಮಾ ಬೀಬಿ ತಹಶೀಲ್ದಾರ್ ಹೊಳಲ್ಕೆರೆ
ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಗ್ರಾಮದಲ್ಲಿ ದಿನೇ ದಿನೇ ಅನಾರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಕಲ್ಲು ಒಡೆದು ಬದುಕುವವರ ಬಲಕ್ಕೆ ಪೆಟ್ಟು ಬಿದ್ದರೆ ಏನು ಗತಿ ಎಂಬ ಪ್ರಶ್ನೆ ಕಾಡುತ್ತಿದೆ.ಆರ್.ವಿಜಯ್ ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.