ಚಿಕ್ಕಜಾಜೂರು: ಚಿಕ್ಕಜಾಜೂರು– ದಾವಣಗೆರೆ ಮಾರ್ಗದಲ್ಲಿ ಚಿಕ್ಕಜಾಜೂರು ಬಳಿ ರೈಲ್ವೆ ಗೇಟ್ ಬದಲು ಮೇಲು ಸೇತುವೆ ನಿರ್ಮಿಸದೆ ಇರುವುದರಿಂದ ಪ್ರಯಾಣಿಕರು, ವಾಹನಗಳ ಚಾಲಕರು ಪರದಾಡುವ ಸ್ಥಿತಿ ಉಂಟಾಗಿದೆ.
ಹೊಸದುರ್ಗ, ಹೊಳಲ್ಕೆರೆ, ಚಿಕ್ಕಜಾಜೂರು ಮಾರ್ಗವಾಗಿ ದಾವಣಗೆರೆಗೆ ತೆರಳುವಾಗ ಚಿಕ್ಕಜಾಜೂರು ಗ್ರಾಮದ ಹೊರವಲಯದಲ್ಲಿ ಚಿತ್ರದುರ್ಗದ ಕಡೆ ಹೋಗುವ ರೈಲು ಮಾರ್ಗದಲ್ಲಿ ರೈಲ್ವೆ ಗೇಟ್ ಇದೆ. ಅರ್ಧ ಗಂಟೆಗೊಮ್ಮೆ ಈ ಮಾರ್ಗದಲ್ಲಿ ನಿತ್ಯ ಹತ್ತಾರು ಗೂಡ್ಸ್ ರೈಲು, ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ. ಆಗ ಗೇಟ್ ಹಾಕಲಾಗುತ್ತದೆ.
ಹೊಸದುರ್ಗ, ಹೊಳಲ್ಕೆರೆ ಕಡೆಯಿಂದ ದಾವಣಗೆರೆ, ಬಿ.ದುರ್ಗ, ಸಾಸಲು, ಸಿರಿಗೆರೆ, ಸಂತೇಬೆನ್ನೂರು ಕಡೆಗೆ ಹೋಗುವ 100ಕ್ಕೂ ಹೆಚ್ಚು ಖಾಸಗಿ ಹಾಗೂ 50ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು, ಶಾಲಾ ಬಸ್‌ಗಳು, ನೂರಾರು ಲಾರಿ, ಆಟೊಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಅಲ್ಲದೆ, ಹೊಳಲ್ಕೆರೆ, ಹೊಸದುರ್ಗ, ಚಿಕ್ಕಜಾಜೂರು ಆಸ್ಪತ್ರೆಗಳಿಂದ ಹತ್ತಾರು ಆಂಬುಲೆನ್ಸ್‌ಗಳು ರೋಗಿಗಳನ್ನು ಕರೆದುಕೊಂಡು ದಾವಣಗೆರೆ ಆಸ್ಪತ್ರೆಗೆ ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತವೆ.
ಆದರೆ, ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳು ಅರ್ಧ, ಮುಕ್ಕಾಲು ಗಂಟೆಗೆ ಒಂದರಂತೆ ಸಂಚರಿಸುವುದರಿಂದ ರೈಲ್ವೆ ಗೇಟ್‌ನ್ನು ಹಾಕಲಾಗುತ್ತದೆ. ಆಗ, 15ರಿಂದ 20 ನಿಮಿಷಗಳ ಕಾಲ ಗೇಟ್‌ನ ಎರಡೂ ಬದಿಯಲ್ಲಿ ನೂರಾರು ವಾಹನಗಳು ನಿಲ್ಲಬೇಕು. ಎರಡೂ ಬದಿಯಲ್ಲಿ ಹೆಚ್ಚು ವಾಹನಗಳು ನಿಲುಗಡೆ ಆಗುವುದರಿಂದ ಗೇಟ್ ತೆಗೆದಾಗ, ವಾಹನ ದಟ್ಟಣೆ ಹೆಚ್ಚಾಗಿ, ಅಲ್ಲೂ ಸಮಯ ವಿಳಂಬವಾಗುತ್ತಿದೆ ಎಂದು ವಾಹನ ಸವಾರರೊಬ್ಬರು ದೂರಿದರು.
ಇಲ್ಲಿ ಮೇಲು ಸೇತುವೆ ನಿರ್ಮಿಸುವುದಾಗಿ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯವರು ಹೇಳುತ್ತಲೇ ಇದ್ದಾರೆ. ಆದರೆ, ಇದುವರೆಗೂ ಅಳತೆ ಮಾಡುವುದನ್ನು ಬಿಟ್ಟು ಮತ್ತ್ಯಾವ ಕೆಲಸವೂ ಆರಂಭವಾಗಿಲ್ಲ. ಇದರಿಂದ ಸಾರ್ವಜನಿಕರು, ವಾಹನಗಳ ಚಾಲಕರು ನಿತ್ಯ ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮೇಲು ಸೇತುವೆ (ಫ್ಲೈ ಓವರ್) ನಿರ್ಮಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಬಸ್ ಚಾಲಕರಾದ ರಾಕೇಶ್, ರಾಜಶೇಖರ್, ಸತೀಶ್, ಗಿರೀಶ್, ವಿದ್ಯಾರ್ಥಿಗಳಾದ ಸುನಿತಾ, ಅವಿನಾಶ್, ಕೀರ್ತಿ, ಪ್ರಕಾಶ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.