
ಹೊಳಲ್ಕೆರೆ: ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ಐತಿಹಾಸಿಕ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಪ್ರತೀವರ್ಷ 3.30ಕ್ಕೆ ರಥೋತ್ಸವ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಪುಬ್ಬಾ ನಕ್ಷತ್ರದ ಅಭಿಜಿನ್ ಲಗ್ನದಲ್ಲಿ ರಥೋತ್ಸವ ನೆರವೇರಿತು.
ದೇವಾಲಯದ ಮುಂಭಾಗದಲ್ಲಿರುವ ರಥಬೀದಿಯಲ್ಲಿದ್ದ ತೇರನ್ನು ವಿವಿಧ ಬಣ್ಣದ ಬಟ್ಟೆಗಳು, ಬಾವುಟಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು. ಭಾರೀ ಗಾತ್ರದ ಹೂವಿನ ಹಾರಗಳಿಂದ ರಥವನ್ನು ಶೃಂಗರಿಸಲಾಗಿತ್ತು. ಬಂಗಾರದ ಆಭರಣಗಳನ್ನು ತೊಡಿಸಿ, ಹೂಗಳಿಂದ ಅಲಂಕರಿಸಿದ್ದ ಲಕ್ಷ್ಮೀನರಸಿಂಹ ಸ್ವಾಮಿಯನ್ನು ದೇವಾಲಯದ ಒಳಭಾಗದಿಂದ ರಥದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಛತ್ರಿ, ಚಾಮರ, ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ಕರೆತಂದ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನೆರೆದಿದ್ದ ಸಾವಿರಾರು ಭಕ್ತರು ಭಕ್ತಿಯಿಂದ ಕೈಮುಗಿದು ಆಶೀರ್ವಾದ ಪಡೆದರು. ‘ಲಕ್ಷ್ಮೀ ರಂಗನಾಥ ಸ್ವಾಮಿ ಪಾದಕ್ಕೆ ಗೋವಿಂದಾ, ಗೋವಿಂದ’ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಜಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು ರಥದ ಕಳಶಕ್ಕೆ ಬಾಳೆಹಣ್ಣು ತೂರಿ ಭಕ್ತಿ ಭಾವ ಮೆರೆದರು. ಆಗಸದಲ್ಲಿ ಗರುಡ ಪ್ರತ್ಯಕ್ಷವಾದ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನೂರಾರು ಭಕ್ತರು ಪೂರ್ವಾಭಿಮುಖವಾಗಿ ರಥ ಎಳೆದರು.
ಜಿಲ್ಲೆಯ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಹೊರಕೆರೆ ರಂಗಪ್ಪನ ತೇರಿಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಸಾವಿರಾರು ಭಕ್ತರಿಗೆ ರಂಗಪ್ಪ ಮನೆದೇವರಾಗಿದ್ದು, ದೇವರ ಒಕ್ಕಲಿನ ಎಲ್ಲರೂ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಕೆಲವರು ರಥೋತ್ಸವ ಮುಗಿದ ನಂತರವೂ ಒಂದೆರಡು ದಿನ ಇಲ್ಲೇ ತಂಗಿದ್ದು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಕಲ್ಯಾಣಿಯ ಪಕ್ಕದಲ್ಲಿ ಇರುವ ಮೈದಾನದಲ್ಲಿ ಅಡುಗೆ ಸಿದ್ಧಪಡಿಸಿ ಹರಕೆ ತೀರಿಸುತ್ತಾರೆ. ದೇವಾಲಯ ಜೀರ್ಣೋದ್ಧಾರ ಸಮಿತಿ ಮತ್ತು ಎಸ್‌ಎಲ್‌ಎನ್‌ಎಸ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಘು ಉಪಾಹಾರ, ವಸತಿ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿತ್ತು. ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಜಾತ್ರೆಯಲ್ಲಿ ಪಾಲ್ಗೊಂಡರು.
ಮದ್ದೇರು ಗ್ರಾಮದ ಅಶೋಕ್ ಎಂಬುವರು ₹1 ಲಕ್ಷಕ್ಕೆ ಹರಾಜಿನಲ್ಲಿ ಮುಕ್ತಿ ಬಾವುಟ ಪಡೆದರು. ತಹಶೀಲ್ದಾರ್ ಕೊರಲಗುಂದಿ ವಿಜಯ ಕುಮಾರ್ ನೇತೃತ್ವದಲ್ಲಿ ತಾಲ್ಲೂಕು ಆಡಳಿತದಿಂದ ಜಾತ್ರೆಗೆ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಿತ್ರಹಳ್ಳಿ ಪೊಲೀಸ್ ಠಾಣೆಯಿಂದ ಬಂದೋಬಸ್ತ್ ಮಾಡಲಾಗಿತ್ತು. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮಾರ್ಗಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳು ಸಂಚರಿಸಿದವು. ಚಿತ್ರಹಳ್ಳಿ ಗೇಟ್‌ನಿಂದ ಆಟೋರಿಕ್ಷಾ, ಟೆಂಪೋ, ಲಗೇಜ್ ಆಟೋಗಳಲ್ಲಿ ಭಕ್ತರು ಜಾತ್ರೆಗೆ ಆಗಮಿಸಿದ್ದರು.
ಈ ವರ್ಷ ಮಧ್ಯಾಹ್ನವೇ ರಥೋತ್ಸವ ನಡೆದರೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾತ್ರೆ ಸುಗಮವಾಗಿ ನಡೆಯಲು ಸಹಕರಿಸಿದ ಭಕ್ತರು ಹಾಗೂ ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳುಎಚ್.ಡಿ.ರಂಗಯ್ಯ ಎಸ್‌ಎಲ್‌ಎನ್‌ಎಸ್‌ಟ್ರಸ್ಟ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.