
ಚಿತ್ರದುರ್ಗ: ‘ಬಲವಂತದ ಭೂ–ಸ್ವಾಧೀನ ಕೈಬಿಡಬೇಕು ಸೇರಿದಂತೆ 15 ಪ್ರಮುಖ ಹಕ್ಕೊತ್ತಾಯಗಳ ಪರಿಹಾರಕ್ಕೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದಿಂದ ನ. 26ರಂದು ಬೃಹತ್ ಬೆಂಗಳೂರು ಚಲೋ ಆಯೋಜಿಸಲಾಗಿದೆ’ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ತಿಳಿಸಿದರು.
‘ಕಾಂಗ್ರೆಸ್ ಮಾತುಕೊಟ್ಟಂತೆ ನಡೆದು ಕೊಳ್ಳುತ್ತಿಲ್ಲ. ಇದರಿಂದ ರಾಜ್ಯದ ಜನರು ಸಮಸ್ಯೆಗಳನ್ನು ನಿರಂತರ ಎದುರಿಸುತ್ತಿದ್ದಾರೆ. ಕಾರ್ಮಿಕರು ಹಾಗೂ ಇತರೆ ಜನವರ್ಗಗಳ ಸಂಕಷ್ಟ ನಿವಾರಣೆಯ ಕ್ರಮಗಳಿಗೆ ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಜನರ ಬೇಡಿಕೆ, ಸಮಸ್ಯೆಗಳಿಗೆ ತಾರ್ಕಿಕ ಅಂತ್ಯಕ್ಕೆ ಸಂವಿಧಾನ ದಿನವಾದ ನ. 26ರಂದು ಖಚಿತ ನಿರ್ಣಯಗಳಾಗುವ ದಿನವಾಗಬೇಕು. ಸಂಬಂಧಪಟ್ಟ ಸಚಿವರು ಸ್ಪಷ್ಟ ತೀರ್ಮಾನಗಳನ್ನು ಘೋಷಿಸಬೇಕು. ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಫ್ರೀಡಂ ಪಾರ್ಕಿನಲ್ಲಿ ತೀವ್ರ ಹೋರಾಟದ ತೀರ್ಮಾನ ಆಗಲಿದೆ’ ಎಂದು ಎಚ್ಚರಿಸಿದರು.
‘ಸರ್ಕಾರದ ಎಲ್ಲ ವಿದ್ಯುತ್ ಅಂಗ ಸಂಸ್ಥೆಗಳು ಜನರಿಗೆ ಯಾಮಾರಿಸುವ ಕೆಲಸ ಮಾಡುತ್ತಿವೆ. ವಿದ್ಯುತ್ ಖಾಸಗೀಕರಣವನ್ನು ಮತ್ತು ಪ್ರೀಪೇಯ್ಡ್ ಮೀಟರ್ ಅಳವಡಿಕೆ ಕೈಬಿಡಬೇಕು. ವಿದ್ಯುತ್ ಸಂಪರ್ಕ ವೆಚ್ಚವನ್ನು ರೈತರ ಮೇಲೆಯೇ ಹೇರುವ ನೀತಿ ರದ್ದಾಗಬೇಕು’ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಆಗ್ರಹಿಸಿದರು.
‘ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿರುವುದು ಅವೈಜ್ಞಾನಿಕವಾಗಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ದರ ಏರಿಕೆ ಮಾಡಿ ರೈತರ ಉತ್ಪನ್ನಗಳನ್ನು ಖರೀದಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಒತ್ತಾಯಿಸಿದರು.
ಭಾರತ್ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು, ಮುಖಂಡರಾದ ಸುರೇಶ್ ಬಾಬು, ರುದ್ರಸ್ವಾಮಿ, ಟಿ.ಶಫಿವುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.