ADVERTISEMENT

ಸಮೀಕ್ಷೆ ನಡೆಸಿ, ದಾಖಲೆ ಒದಗಿಸಿ: ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ

ಭೂ ನಷ್ಟ ಪರಿಹಾರ ಕುರಿತ ಸಭೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 15:10 IST
Last Updated 7 ಜನವರಿ 2020, 15:10 IST
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ   

ಚಿತ್ರದುರ್ಗ: ‘ರೈತರ ಜಮೀನಿನೊಳಗೆ ವಿದ್ಯುತ್ ಕೇಂದ್ರ, ಪರಿವರ್ತಕ ಹಾಗೂ ಕಂಬಗಳ ಅಳವಡಿಕೆ ಕಾರ್ಯ ಕೈಗೊಳ್ಳುವ ಮುನ್ನ ಅಧಿಕಾರಿಗಳು ಮುಂಚಿತವಾಗಿಯೇ ರೈತರಿಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಸೂಚನೆ ನೀಡಿದರು.

ನೇರಲಗುಂಟೆ, ಮಲ್ಲಪ್ಪನಹಳ್ಳಿ, ಗೋಡಬನಹಾಳ್ ಗ್ರಾಮಗಳಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶಕ್ಕಾಗಿ ಇಲ್ಲಿ ಮಂಗಳವಾರ ಕೆಪಿಟಿಸಿಎಲ್‌ನಿಂದ ಆಯೋಜಿಸಿದ್ದ ಪ್ರಸರಣ ಮಾರ್ಗಗಳ ಭೂ ನಷ್ಟ ಪರಿಹಾರ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರೈತರೊಂದಿಗೆ ಸಭೆ ನಡೆಸುವ ಮುನ್ನ ಸೂಕ್ತ ಮಾಹಿತಿ ನೀಡಿ. ತಪ್ಪದೇ ಸಭೆಗೆ ಬರುವಂತೆ ಮನವೊಲಿಸಿ. ಭೂ ನಷ್ಟ ಪರಿಹಾರ ನೀಡುವಾಗ ಅಧಿಕಾರಿಗಳು ನೀಡುವ ದಾಖಲೆಗಳೇ ಆಧಾರ. ಆದ್ದರಿಂದ ಪ್ರತಿಯೊಂದು ದಾಖಲೆಯು ಪಾರದರ್ಶಕವಾಗಿರಲಿ’ ಎಂದರು.

ADVERTISEMENT

ವಿದ್ಯುತ್ ಕೇಂದ್ರ, ಕಂಬ, ಪರಿವರ್ತಕ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ನೀಲನಕ್ಷೆ ಸಿದ್ಧಪಡಿಸಿ ರೈತರಿಗೆ ಪ್ರಸ್ತುತ ಪಡಿಸಬೇಕು. ಭೂ ನಷ್ಟ ಪರಿಹಾರ ನೀಡುವಲ್ಲಿ ಪಾರದರ್ಶಕತೆ ಕಾಪಾಡಬೇಕು. ಪರಿಹಾರ ನೀಡುವಾಗ ಎಲ್ಲರಿಗೂ ಒಂದೇ ರೀತಿಯ ಮಾನದಂಡ ಅನುಸರಿಸಬೇಕು. ತ್ವರಿತವಾಗಿ ಪರಿಹಾರ ರೈತರ ಕೈ ಸೇರಬೇಕು. ಪರಿಹಾರ ಧನಕ್ಕಾಗಿ ರೈತರನ್ನು ಅಲೆದಾಡಿಸಬಾರದು ಎಂದು ಮಲ್ಲಪ್ಪನಹಳ್ಳಿ, ನೇರಲುಗುಂಟೆ ಭಾಗದ ರೈತರು ಒತ್ತಾಯಿಸಿದರು.

ಜಮೀನಿನ ಮಧ್ಯ ಭಾಗದಲ್ಲಿ ವಿದ್ಯುತ್ ಕಂಬ ಅಳವಡಿಸಿರುವ ಕಾರಣ ಕೃಷಿ ಚಟುವಟಿಕೆಗೆ ತೊಂದರೆ ಆಗುತ್ತಿದೆ. ಇರುವ ಸ್ವಲ್ಪ ಭೂಮಿಯಲ್ಲಿ ಹೀಗಾದರೆ ಮುಂದಿನ ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಆದ್ದರಿಂದ ವಿದ್ಯುತ್ ಕಂಬಗಳ ಅಳವಡಿಕೆ ಸರ್ಕಾರಿ ಜಮೀನಿನಲ್ಲಿ ಮಾಡಿದರೇ ರೈತರಿಗೆ ಅನುಕೂಲವಾಗಲಿದೆ ಎಂದು ಕೊಡಗನಹಾಳ್‌ ರೈತರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಭೂ ನಷ್ಟ ಪರಿಹಾರ ನಿಯಮಕ್ಕೆ ಅನುಗುಣವಾಗಿ ನೀಡಲಾಗುತ್ತಿದೆ. ಹೆಚ್ಚಿನ ಪರಿಹಾರ ಬಯಸುವ ರೈತರು ಅಗತ್ಯ ದಾಖಲೆಗಳೊಂದಿಗೆ ಹೈಕೋರ್ಟ್ ಮೊರೆ ಹೋಗಬಹುದು. ಜಿಲ್ಲೆಯಲ್ಲಿ ಬೆಳೆ ನಷ್ಟ ಹಾಗೂ ಭೂ ನಷ್ಟ ಪರಿಹಾರ ಗರಿಷ್ಠ ಮಿತಿಯಲ್ಲಿ ನೀಡಲಾಗುತ್ತಿದೆ’ ಎಂದು ಹೇಳಿದರು.

‘ತೋಟಗಾರಿಕೆ, ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಮೀಕ್ಷೆ ಆಧರಿಸಿ, ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ. ಕೆಪಿಟಿಸಿಎಲ್ ಅಧಿಕಾರಿಗಳು ಆದಷ್ಟು ಸರ್ಕಾರಿ ಜಮೀನು ಬಳಸಿಕೊಳ್ಳಬೇಕು’ ಎಂದರು.

ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಪ್ಪ, ‘ಕಾರಿಡಾರ್‌ಗೆ ಸಂಬಂಧಿಸಿದಂತೆ ರೈತರಿಗೆ 1 ಎಕರೆಗೆ ₹ 2.5 ಲಕ್ಷ ಭೂ ನಷ್ಟ ಪರಿಹಾರ ನೀಡಲಾಗುತ್ತದೆ. ಇದು 2 ಹಂತದ ಪ್ರಕ್ರಿಯೆಯಾಗಿದ್ದು, ಮೊದಲನೆ ಹಂತದಲ್ಲಿ ಭೂ ಅಡಿಪಾಯದ ನಂತರ ಪರಿಹಾರ ಹಾಗೂ 2ನೇ ಹಂತದಲ್ಲಿ ವಿದ್ಯುತ್ ತಂತಿ ಎಳೆಯುವಾಗ ಪರಿಹಾರ ಧನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ವಿ. ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.