ಚಿತ್ರದುರ್ಗ: ‘ಗೊಲ್ಲ ಸಮುದಾಯ ನೆಲಮೂಲದ ಸಂಸ್ಕೃತಿಯಾಗಿದೆ. ಗೊಲ್ಲರು ವಾಸಿಸುವ ಗೊಲ್ಲರಹಟ್ಟಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡಿ ಅಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಅಖಿಲ ಭಾರತ ಯಾದವ ಮಹಾಸಂಸ್ಥಾನ ಸುಕ್ಷೇತ್ರ ಗೊಲ್ಲಗಿರಿಯಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಈಗಾಗಲೇ 296 ಗ್ರಾಮಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಲಾಗಿದೆ. ಇವುಗಳಲ್ಲಿ ವಾಸವಿದ್ದ 6,384 ಕುಟುಂಬಗಳಿಗೆ ಹಕ್ಕುಪತ್ರ ಸಹ ನೀಡಲಾಗಿದೆ. ಜನರು ಖಾಸಗಿ ಅಥವಾ ಸರ್ಕಾರಿ ಜಾಗದಲ್ಲಿ ಬಹುದಿನಗಳಿಂದ ವಾಸವಿದ್ದರೆ ಅಂತಹ ಸ್ಥಳಗಳನ್ನು ಗುರುತಿಸಿ ತಹಶೀಲ್ದಾರ್ ಹೆಸರಿಗೆ ಮೊದಲು ನೋಂದಣಿ ಮಾಡಲಾಗುವುದು. ನಂತರ ತಹಶೀಲ್ದಾರರು ಸಂಬಂಧಪಟ್ಟವರಿಗೆ ಅವರ ಸ್ವತ್ತುಗಳನ್ನು ನೋಂದಣಿ ಮಾಡಿಕೊಡುತ್ತಾರೆ’ ಎಂದು ತಿಳಿಸಿದರು.
‘ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಇ-ಸ್ವತ್ತು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. 190 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಗುರುತಿಸಲಾಗಿದೆ. 2026ರಲ್ಲಿ ದೇಶಾದ್ಯಂತ ಜನಗಣತಿ ನಡೆಯಲಿದ್ದು, ಅದಕ್ಕೂ ಮುನ್ನವೇ ಇ–ಸ್ವತ್ತು ವಿತರಿಸಲಾಗುವುದು’ ಎಂದರು.
‘ಗೊಲ್ಲ ಸಮುದಾಯದವರು ಮಕ್ಕಳ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ವಿದ್ಯಾರ್ಥಿನಿಲಯ, ವಸತಿ ಶಾಲೆಗಳನ್ನು ತೆರೆದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಮೂಢನಂಬಿಕೆಗಳನ್ನು ಕೈ ಬಿಡಬೇಕು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಪ್ರತಿಯೊಬ್ಬರೂ ಭಗವದ್ಗೀತೆ ಓದುವ ಮೂಲಕ ಶ್ರೀ ಕೃಷ್ಣನ ಬೋಧನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಯಾದವ ಮಹಾಸಂಸ್ಥಾನ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ ‘ಕೃಷ್ಣ ಪರಮಾತ್ಮ ಎಲ್ಲರಿಗೂ ಗುರು. ಅವರು ಕೇವಲ ಯಾದವ ಜನಾಂಗಕ್ಕೆ ಸೀಮಿತವಲ್ಲ. ಕೃಷ್ಣನಿಗೆ ಜಾತಿ ಬಂಧನದ ಸಂಕೋಲೆಯನ್ನು ತೊಡಿಸುವುದು ತರವಲ್ಲ. ನ್ಯಾಯಾಲಯಗಳಲ್ಲಿ ಇಂದಿಗೂ ಭಗವದ್ಗೀತೆ ಮೇಲೆ ಕೈ ಇರಿಸಿ ಪ್ರಮಾಣ ಮಾಡಿಸುತ್ತಾರೆ. ಕೃಷ್ಣ ಹಾಗೂ ಬಸವಣ್ಣವರ ತತ್ವಗಳಲ್ಲಿ ಸಾಮ್ಯತೆ ಇದೆ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ‘ಶ್ರೀ ಕೃಷ್ಣನ ಹಾಗೆ ಮೊಹಮ್ಮದ್ ಪೈಗಂಬರ್ ಸಹ ಪಶುಪಾಲನೆಗೆ ಒತ್ತು ನೀಡಿದ್ದರು. ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀಕೃಷ್ಣ ವೃತ್ತದ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯೋಜನೆ ರೂಪಿಸಲಾಗಿದೆ. ಯೋಜನೆ ಕಾರ್ಯಗತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಬೇಕಿದೆ. ಈ ಬಗ್ಗೆ ಶಿವಮೊಗ್ಗದ ಕಚೇರಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು.
ಮಾಜಿ ಶಾಸಕರಾದ ಎಸ್.ಕೆ.ಬಸವರಾಜ್, ಜಯಮ್ಮ ಬಾಲರಾಜ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ , ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ ತಿಪ್ಪೆಸ್ವಾಮಿ, ಲಕ್ಷ್ಮೀಕಾಂತ, ಲಿಂಗಾರೆಡ್ಡಿ, ಕವರಪ್ಪ ಸೇರಿದಂತೆ ಹಲವರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಇದ್ದರು.
ಬಡವರ ಪರವಾಗಿ ನಿಲ್ಲುತ್ತಿದ್ದ ಶ್ರೀಕೃಷ್ಣ’
ಸಾಹಿತಿ ಎಚ್.ಆನಂದ್ ಕುಮಾರ್ ಉಪನ್ಯಾಸ ನೀಡಿ ‘ಶ್ರೀಕೃಷ್ಣ ಮೂಲತಃ ಜಾತ್ಯತೀತ ಚಿಂತಕನಾಗಿದ್ದ. ಬಡವರ ಪರ ಒಲವು ಹೊಂದಿದ್ದ. ಸದಾ ಮಹಿಳಾ ಪರ ಇದ್ದ. ಭೂಮಿ ಇಲ್ಲದವರ ಪರ ಏನೂ ಇಲ್ಲದವರ ಪರ ಶ್ರೀಕೃಷ್ಣ ಇದ್ದ ಎನ್ನುವುದಕ್ಕೆ ಆತ ಪಾಂಡವರ ಪರ ಇದ್ದದ್ದೇ ಸಾಕ್ಷಿಯಾಗಿದೆ. ಕುಚೇಲ ಸುಧಾಮನನ್ನು ಕರೆದು ಸತ್ಕರಿಸಿದ್ದು ಅವರಿಗೆ ಸಿರಿಸಂಪದವನ್ನು ನೀಡಿದ್ದು ಕೃಷ್ಣ ಬಡವರ ಪರ ಇದ್ದ ಎನ್ನಲು ಸಾಕ್ಷಿಯಾಗಿದೆ’ ಎಂದು ವಿವರಿಸಿದರು. ‘ಜಾಂಬುವಂತನ ಮಗಳನ್ನು ಮದುವೆಯಾಗಿದ್ದೇ ಶ್ರೀಕೃಷ್ಣ ಜಾತಿ ಸಂಕೋಲೆಯಿಂದ ಹೊರಗಿದ್ದ ಎನ್ನಲು ಸಾಕ್ಷಿಯಾಗಿದೆ. ಕೃಷ್ಣ ಎಂದಿಗೂ ಜಾತಿ ಮಾಡಲಿಲ್ಲ. ಕೃಷ್ಣ ಚಾತುರ್ವರ್ಣ ಬೋಧಿಸಿದ ಎನ್ನುವುದು ಮಹಾ ಸುಳ್ಳು. ಇದು ಮೂಲಭೂತವಾದಿಗಳು ಸೃಷ್ಟಿಸಿದ ಕಟ್ಟು ಕತೆಯಾಗಿದೆ. ಶ್ರೀಕೃಷ್ಣ ಹುಟ್ಟಿದಾಗಲೇ ಜಾತಿ ಇತ್ತು. ಹೀಗಾಗಿ ಕೃಷ್ಣ ಚಾತುರ್ವರ್ಣ ಸೃಷ್ಟಿಸಿದ ಎನ್ನುವುದು ತಪ್ಪು. ಕೃಷ್ಣನಲ್ಲಿ ಸದಾ ಪ್ರಕೃತಿ ಪ್ರೀತಿ ಜಿನುಗುತ್ತಿತ್ತು. ಆತ ಪರ್ವತ ದನ ಕರು ಪಕ್ಷಿಗಳೊಂದಿಗೆ ಕಾಣುತ್ತಾನೆ. ಆತನ ನಿರ್ಮಲ ಪ್ರೇಮಕ್ಕೆ ರಾಧೆಯೇ ಸಾಕ್ಷಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.