ADVERTISEMENT

ಚಿತ್ರದುರ್ಗ: ವೈದ್ಯಕೀಯ ಕಾಲೇಜಿಗೆ ಸ್ಥಳ ಗೊಂದಲ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಮೂಡದ ಒಮ್ಮತ

ಜಿ.ಬಿ.ನಾಗರಾಜ್
Published 3 ಜೂನ್ 2022, 4:26 IST
Last Updated 3 ಜೂನ್ 2022, 4:26 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಪ್ರವೇಶದ್ವಾರಕ್ಕೆ ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಪ್ರವೇಶದ್ವಾರಕ್ಕೆ ಚಿತ್ರದುರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ.   

ಚಿತ್ರದುರ್ಗ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಯಾವ ಸ್ಥಳದಲ್ಲಿ ಸ್ಥಾಪನೆ ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಜನಪ್ರತಿನಿಧಿಗಳುಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಪ್ರಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯ (ಎನ್‌ಎಂಸಿ) ಅನುಮತಿ ಪಡೆಯುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಸರ್ಕಾರಿ ವಿಜ್ಞಾನ ಕಾಲೇಜು ಆವರಣದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವೈದ್ಯಕೀಯ ಕಾಲೇಜು ಪ್ರಾರಂಭವಾಗುವ ಸಾಧ್ಯತೆ ಇದೆ.

ಸರ್ಕಾರಿ ವೈದ್ಯಕೀಯ ಕಾಲೇಜು ಕೋಟೆನಾಡಿನ ಜನರ ಬಹುದಿನದ ಬೇಡಿಕೆ. ದಶಕದಿಂದಲೂ ಇದಕ್ಕೆ ಹೋರಾಟ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಇದೊಂದು ರಾಜಕೀಯ ವಿಚಾರವಾಗಿಯೂ ಮುನ್ನೆಲೆಗೆ ಬಂದಿತ್ತು. 2022–23ನೇ ಬಜೆಟ್‌ನಲ್ಲಿ ಕಾಲೇಜು ಮಂಜೂರು ಮಾಡಿದ ರಾಜ್ಯ ಸರ್ಕಾರ, ಅನುದಾನವನ್ನು ನೀಡಿದೆ. ಆದರೆ, ಯಾವ ಸ್ಥಳದಲ್ಲಿ ಕಾಲೇಜು ನಿರ್ಮಿಸಬೇಕು ಎಂಬ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿದಂತೆ ಕಾಣುತ್ತಿಲ್ಲ.

ADVERTISEMENT

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ನಿಯಮದ ಪ್ರಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 20 ಎಕರೆ ಜಮೀನು ಅಗತ್ಯ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸದ್ಯ 23 ಎಕರೆ ಭೂಮಿ ಲಭ್ಯವಿದೆ. ಆದರೆ, ಈ ಸ್ಥಳದಲ್ಲಿ ಈಗಾಗಲೇ ಹಲವು ಕಟ್ಟಡಗಳು ನಿರ್ಮಾಣವಾಗಿವೆ. ಆಸ್ಪತ್ರೆ ಮತ್ತು ಕಾಲೇಜು ಒಟ್ಟಿಗೆ ಇರಬೇಕೆ ಎಂಬ ವಿಚಾರದಲ್ಲಿ ಚರ್ಚೆ ಆರಂಭವಾಗಿದೆ.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಯೇ ಕಾಲೇಜು ಸ್ಥಾಪಿಸುವುದಾದರೆ 36 ಕಟ್ಟಡಗಳನ್ನು ತೆರವುಗೊಳಿಸಬೇಕಾಗುತ್ತದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ರಕ್ತನಿಧಿ ಕೇಂದ್ರ, ಔಷಧ ಸಂಗ್ರಹ ಉಗ್ರಾಣ, ಎಎನ್‍ಟಿಸಿ, ಸರ್ವೇಕ್ಷಣ ಘಟಕ, ಪ್ರಯೋಗಾಲಯ, ಜಿಲ್ಲಾ ತರಬೇತಿ ಸಂಸ್ಥೆ, ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಕಚೇರಿ, ಕಾರ್ಯಾಗಾರ, ವೈದ್ಯರು, ಶುಶ್ರೂಷಕರ ವಸತಿಗೃಹ, ತುರ್ತು ಚಿಕಿತ್ಸಾ ಘಟಕ, ಟ್ರಾಮಾ ಕೇಂದ್ರ ಸೇರಿ ಇತರ ಕಟ್ಟಡಗಳು ನೆಲಸಮ ಮಾಡಬೇಕಿದೆ. ಮೂರು ಹಂತದಲ್ಲಿ ಕಟ್ಟಡಗಳನ್ನು ತೆರವುಗೊಳಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಸೂಚನೆ ನೀಡಿದ್ದರು.

ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಒಟ್ಟಿಗೆ ಇದ್ದರೆ ಅನುಕೂಲ ಎಂಬ ನಿಲುವು ಕೆಲವರದು. ಹೊಸ ಸ್ಥಳ ಹುಡುಕಾಟದಲ್ಲಿ ವಿಳಂಬವಾದರೆ ಕಾಲೇಜು ಕೈತಪ್ಪಬಹುದು ಎಂಬ ಆತಂಕವೂ ಇದರಲ್ಲಿದೆ. ಕಟ್ಟಡಗಳನ್ನು ತೆರವುಗೊಳಿಸಿದರೂ ಸ್ಥಳ ಕಿಷ್ಕಿಂದೆಯಾಗಲಿದ್ದು, ಸಂಚಾರ ದಟ್ಟಣೆ ಸೃಷ್ಟಿಯಾಗಲಿದೆ ಎಂಬುದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಅಭಿಪ್ರಾಯ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಬದಲು ವಿಶಾಲವಾದ ಸ್ಥಳ ಗುರುತಿಸುವುದು ಸೂಕ್ತ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕ ಸಲಹೆ ನೀಡಿದೆ.

2023ರಿಂದ ಆರಂಭಕ್ಕೆ ಸಿದ್ಧತೆ
2023–24ರ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ವಿಶೇಷ ಅಧಿಕಾರಿ ಡಾ.ಯುವರಾಜ್ ಅವರನ್ನು ನೇಮಕ ಮಾಡಿದ್ದು, ದಾಖಲೆ ಸಂಗ್ರಹ ಹಾಗೂ ಅನುಮತಿ ಪಡೆಯುವ ಪ್ರಕ್ರಿಯೆ ಶುರುವಾಗಿದೆ.

‘ಮುಂದಿನ ಶೈಕ್ಷಣಿಕ ವರ್ಷದಿಂದ 150 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ವಿಜ್ಞಾನ ಕಾಲೇಜು ಆವರಣದಲ್ಲಿ ಎರಡು ಕಟ್ಟಡಗಳನ್ನು ಗುರುತಿಸಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಮಾನ್ಯತೆ ಪಡೆಯುವ ಪ್ರಯತ್ನ ನಡೆಯುತ್ತಿದೆ. ಅಕ್ಟೋಬರ್‌ ಬಳಿಕ ಮಂಡಳಿಯ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ’ ಎಂದು ಡಾ.ಯುವರಾಜ್‌ ತಿಳಿಸಿದ್ದಾರೆ.

ಸರ್ಕಾರ ನಿರ್ಧರಿಸುತ್ತದೆ: ಡಿಸಿ
ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. ಯಾವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

ಸ್ಥಳದ ವಿಚಾರದಲ್ಲಿ ಜನಪ್ರತಿನಿಧಿಗಳ ನಡುವೆ ಇರುವ ಭಿನ್ನ ಅಭಿಪ್ರಾಯಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಕಚೇರಿಗೆ ಅಗತ್ಯವಿರುವ ಕಟ್ಟಡಗಳನ್ನು ಗುರುತಿಸಲಾಗುತ್ತಿದೆ. ಸರಿಯಾದ ಕಟ್ಟಡ ಲಭ್ಯವಾದರೆ ಕಚೇರಿ, ಹಾಸ್ಟೆಲ್‌ ಸ್ಥಳಾಂತರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.