
ಚಿತ್ರದುರ್ಗ: ‘ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ ಅನೇಕರಿಗೆ ಸ್ವಂತ ಭೂಮಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಹತ್ತು ದಿನದಲ್ಲಿ ಲಭ್ಯವಿರುವ ಭೂಮಿ ಹಾಗೂ ಕುಟುಂಬದ ಮಾಹಿತಿ ನೀಡಬೇಕು’ ಎಂದು ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎಲ್.ಮೂರ್ತಿ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆ ಶೇ 45ರಿಂದ 50ರಷ್ಟಿದ್ದು, ಅನೇಕರಿಗೆ ಸ್ವಂತ ಭೂಮಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಭೂಮಿ ಮತ್ತು ಎಷ್ಟು ಕುಟುಂಬಗಳಿಗೆ ವಿತರಿಸಬಹುದು ಎಂಬ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ’ ಜಿಲ್ಲಾಧಿಕಾರಿಗೆ ತಿಳಿಸಿದರು.
‘ನಕಲಿ ಜಾತಿ ಪ್ರಮಾಣಪತ್ರ ಬಳಸಿ ಉದ್ಯೋಗ ಪಡೆಯುತ್ತಿರುವವರ ವಿರುದ್ಧ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಲಾಗಿದೆ. ಈಗಾಗಲೇ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಸರ್ಕಾರದ ಗಮನಕ್ಕೆ ತರಲಾಗಿದೆ. ಆಯೋಗಕ್ಕೆ ನ್ಯಾಯಾಂಗ ಅಧಿಕಾರವಿದ್ದು, ಜನರ ಅಹವಾಲುಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಆಯೋಗದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಮೂರೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಕಾನೂನಾತ್ಮಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಆಯೋಗಕ್ಕೆ ನ್ಯಾಯಾಂಗ ಅಧಿಕಾರವಿದ್ದು, ಅದಾಲತ್‌ಗಳ ಮೂಲಕ ಜನರಿಗೆ ಆಗುವ ತೊಂದರೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ದೌರ್ಜನ್ಯ ಮತ್ತು ಪೋಕ್ಸೊ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಬಾರದು. ಯಾವುದೇ ಕಾರಣಕ್ಕೂ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳು ಪಾರಾಗಬಾರದು. ಕಡ್ಡಾಯವಾಗಿ 60 ದಿನಗಳೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ ಈ ಅನುದಾನದಡಿ ನಡೆಯುವ ಪ್ರತಿಯೊಂದು ಕಾಮಗಾರಿಯ ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸುವುದು ಕಡ್ಡಾಯ’ ಎಂದರು.
ರಸ್ತೆ ವಿಸ್ತರಣೆ ಕಾರ್ಯದ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕವಾಡಿಗರಹಟ್ಟಿಯಲ್ಲಿ ಪರಿಶಿಷ್ಟ ಜಾತಿಯ ಸುಮಾರು 56 ಕುಟುಂಬಗಳ ಮನೆ ತೆರವು ಮಾಡಿದ್ದಾರೆ. ಕೂಡಲೇ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂದು ನಿವಾಸಿಗಳು ಮನವಿ ಮಾಡಿದರು.
ಮುಖಂಡರಿಂದ ಜಿಲ್ಲೆಯ ಪ್ರಮುಖ ಕುಂದು ಕೊರತೆಗಳನ್ನು ಆಲಿಸಿ, ಸಂತ್ರಸ್ತರಿಂದ ದೂರು ಸ್ವೀಕರಿಸಿದರು. ಆಯೋಗದ ಸದಸ್ಯರಾದ ಸುನೀಲ್ ಎಂ.ಉಕ್ಕಲಿ, ಎಂ.ಕುಂಬಯ್ಯ, ಕಾರ್ಯದರ್ಶಿ ಎಚ್.ಎನ್.ಶಿವರಾಮು, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಇದ್ದರು.
ಆಯೋಗದ ಮುಂದೆ 3688 ಪ್ರಕರಣಗಳ ವಿಚಾರಣೆ ಬಾಕಿ ಇದ್ದು ಮೂರು ತಿಂಗಳಲ್ಲಿ 208 ಗಂಭೀರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು ತ್ವರಿತ ನ್ಯಾಯದಾನಕ್ಕೆ ಪ್ರಯತ್ನಿಸಲಾಗುತ್ತಿದೆ.ಎಲ್.ಮೂರ್ತಿ ಅಧ್ಯಕ್ಷ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗ