ADVERTISEMENT

ಮಕ್ಕಳ ಶಿಕ್ಷಣಕ್ಕೆ ತೊಡಕಾದ ‘ಕಂದೆಲಗು’

ಬುಡಕಟ್ಟು ಸಮುದಾಯದ ಮಾತು ತೆಲುಗು, ಕಲಿಕೆ ಕನ್ನಡ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:01 IST
Last Updated 7 ನವೆಂಬರ್ 2019, 10:01 IST
ಚಳ್ಳಕೆರೆ ತಾಲ್ಲೂಕಿನ ಬಂಗಾರದ ದೇವರ ಹಟ್ಟಿ ಸರ್ಕಾರಿ ಶಾಲೆಯ ಮಕ್ಕಳು
ಚಳ್ಳಕೆರೆ ತಾಲ್ಲೂಕಿನ ಬಂಗಾರದ ದೇವರ ಹಟ್ಟಿ ಸರ್ಕಾರಿ ಶಾಲೆಯ ಮಕ್ಕಳು   

ಚಳ್ಳಕೆರೆ: ಇಲ್ಲಿನ ಬುಡಕಟ್ಟು ಸಮುದಾಯದ ಮಕ್ಕಳ ಭಾಷೆ ತೆಲುಗು, ಕಲಿಕೆಯ ಭಾಷೆ ಕನ್ನಡ. ತೆಲಗು ಮತ್ತು ಕನ್ನಡ ಮಿಶ್ರಿತವಾದ ‘ಕಂದೆಲಗು’ ಭಾಷೆಯನ್ನು ರೂಪಿಸಿಕೊಂಡಿದ್ದಾರೆ. ಈ ವಿಶಿಷ್ಟ ಭಾಷಾ ವ್ಯವಸ್ಥೆಯ ತೊಡಕು ಶಾಲೆಗಳಲ್ಲಿ ಕನ್ನಡ ಕಲಿಯುವ ಮಕ್ಕಳಿಗೆ ಹಾಗೂ ಕಲಿಸುವ ಶಿಕ್ಷಕರನ್ನು ಕಾಡುತ್ತಿದೆ. ಇದರಿಂದಾಗಿ ಕನ್ನಡ ಕಲಿಕೆ ಮಕ್ಕಳಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ.

ಮ್ಯಾಸಬೇಡ ಸಮುದಾಯದ ಮನೆ ಮಾತು ತೆಲುಗು. ಇದರಿಂದಾಗಿ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆತ್ತಮರಹಟ್ಟಿ, ಬಂಗಾರದೇವರಹಟ್ಟಿ, ಗಡ್ದಾರಹಟ್ಟಿ, ಕಾವಲರಹಟ್ಟಿ, ವರವಿನೋರಹಟ್ಟಿ, ನಿಂಗ್ಲೊರಹಟ್ಟಿ, ನಕ್ಲೊರಹಟ್ಟಿ, ತೋಡ್ಲರಹಟ್ಟಿ, ಬಂಡೆಹಟ್ಟಿ, ಪೂಜಾರಿ ಪಾಪಯ್ಯನಹಟ್ಟಿ, ಪೂಜಾರಿ ತಮ್ಮಯ್ಯನಹಟ್ಟಿ, ಕುಟ್ಲಾರಹಟ್ಟಿ, ಬೋರಪ್ಪನಹಟ್ಟಿ, ಚಿಕ್ಕಕಾಟ್ಲಹಟ್ಟಿ, ಹಳೆಚೂರು ಪಾಪಯ್ಯನಹಟ್ಟಿ ಮತ್ತು ಆಂಧ್ರ ಗಡಿಯಂಚಿನಲ್ಲಿರುವ ಓಬಳಾಪುರ, ಗೌರಸಮುದ್ರ, ಬೋಗನಹಳ್ಳಿ, ಬಸಾಪುರ, ಕಾಟಂದೇವರ ಕೋಟೆ ಸೇರಿದಂತೆ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಈ ದ್ವಿಭಾಷಾ ಸಮಸ್ಯೆ ಎದುರಿಸುತ್ತಿದ್ದಾರೆ.

ನಗರದ ಕಾನ್ವೆಂಟ್ ಶಾಲೆಗಳ ಆಕರ್ಷಣೆಯ ಪರಿಣಾಮ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ‘ಕನ್ನಡ ಮಾಧ್ಯಮ ಶಾಲೆ’ ಎಂಬ ಹಣೆಪಟ್ಟಿ ಹೊತ್ತಿವೆ. ಉಚಿತ ಬಿಸಿಯೂಟ, ಸಮವಸ್ತ್ರ, ಸೈಕಲ್ ಹಾಗೂ ಪಠ್ಯ ಪುಸ್ತಕ ಬಿಟ್ಟರೆ ಅಲ್ಲಿ ಏನೂ ಕಲಿಸುವುದಿಲ್ಲ ಎಂಬ ತಪ್ಪು ಗ್ರಹಿಕೆ ಪೋಷಕರ ವಲಯದಲ್ಲಿ ನಿರ್ಮಾಣವಾಗಿದೆ. ಕಡು ಬಡವರು ಕೂಡ ಹಣ ಕೊಟ್ಟು ಮಕ್ಕಳನ್ನು ಕಾನ್ವೆಂಟ್‌ ಶಾಲೆಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಕನ್ನಡದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ADVERTISEMENT

‘ಚಿತ್ರದುರ್ಗದಿಂದ ಬಂದಿದ್ದೇನೆ. ಮಕ್ಕಳಷ್ಟೇ ಅಲ್ಲ ಪೋಷಕರು ಸಹ ತೆಲುಗಿನಲ್ಲಿಯೇ ಮಾತನಾಡುತ್ತಿರುವುದನ್ನು ನೋಡಿ ಆಚ್ಚರಿಯಾಗಿದೆ. ತೆಲಗು ಮಾತನಾಡುವ ಮಕ್ಕಳಿಗೆ ಕನ್ನಡ ಕಲಿಸುವುದು ಹೇಗೆ ಎಂದು ಚಿಂತಿಸಿ ಸರಳ ಬೋಧನಾ ವಿಧಾನವನ್ನು ಅಳವಡಿಸಿದ್ದೇನೆ. ಕಲಿಕಾ ಪ್ರಗತಿಯನ್ನು ಪೋಷಕರಿಗೆ ತಿಳಿಸಿಕೊಡಲು ಶಾಲಾ ಮಕ್ಕಳನ್ನೇ ಬಳಸಿಕೊಳ್ಳುತ್ತೇವೆ’ ಎನ್ನುತ್ತಾರೆ ಶಿಕ್ಷಕಿ ಸುಮಾ.

ದ್ವಿಭಾಷ ಶಿಕ್ಷಕರ ನೇಮಕ: ತಾಲ್ಲೂಕಿನಲ್ಲಿ ಅಗತ್ಯವಿರುವ ಶಾಲೆಗಳಿಗೆ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಯನ್ನು ವಿಶೇಷವಾಗಿ ಅಧ್ಯಯನ ಮಾಡಿದ ಪದವೀಧರ ದ್ವಿಭಾಷಾ ಶಿಕ್ಷಕರ ನೇಮಕ ಮಾಡಿ ಆ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಗಡಿಭಾಗದ ಹಳ್ಳಿಗಳಲ್ಲಿ ಕೇಳಿಬರುತ್ತಿದೆ.

ಭಾಷಾ ಕೌಶಲದ ದೃಷ್ಟಿಯಿಂದ ಆಯಾ ಪ್ರದೇಶದ ವಸ್ತು ವಿಷಯಗಳನ್ನು ಆಧರಿಸಿ ಶಿಕ್ಷಕರು ವ್ಯಕ್ತಿಚಿತ್ರ, ಕಿರುಚಿತ್ರ ಹಾಗೂ ನಾಟಕ ಪ್ರದರ್ಶನದಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು. ಜತೆಗೆ ಕನ್ನಡ ಸಾಹಿತ್ಯ ಸಂಸೃತಿಯನ್ನು ಕಟ್ಟಿಕೊಟ್ಟ ಪ್ರಾಚೀನ ಕವಿಗಳಾದ ಶ್ರೀವಿಜಯ, ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸರ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ವ್ಯವಸ್ಥೆ ಎಲ್ಲಾ ಶಾಲೆಗಳಿಗೆ ಜಾರಿಯಾಗಬೇಕು ಎಂದು ಜನರು ಅಪೇಕ್ಷೆ ಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.