ADVERTISEMENT

ಗ್ರಾಮ ಸ್ವರಾಜ್ಯ ಕನಸು ಬಿತ್ತನೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 9:47 IST
Last Updated 28 ನವೆಂಬರ್ 2020, 9:47 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಕನಸು ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಗ್ರಾಮ ಸ್ವರಾಜ್ಯ ಸಮಾವೇಶದ ಅಂಗವಾಗಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಅನುದಾನ ನೇರವಾಗಿ ಗ್ರಾಮ ಪಂಚಾಯಿತಿಗೆ ಬರುತ್ತಿದೆ. ಈ ಅನುದಾನದ ಸದ್ಬಳಕೆಗೆ ಗ್ರಾಮ ಪಂಚಾಯಿತಿ ಅಧಿಕಾರ ಪಕ್ಷದ ಕಾರ್ಯಕರ್ತರ ಕೈಗೆ ಸೇರಬೇಕಿದೆ. ಪಕ್ಷ ಸಂಘಟನೆ ಗಟ್ಟಿಗೊಳಿಸಲು ಇದು ನೆರವಾಗಲಿದೆ’ ಎಂದು ಹೇಳಿದರು.

‘ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯನ್ನು ಗೆಲ್ಲಲು ತಳಪಾಯ ಮುಖ್ಯ. ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಪಕ್ಷದ ತಳಪಾಯ ಗಟ್ಟಿಗೊಳಿಸು ಕೆಲಸ ಮಾಡುತ್ತಿದ್ದೇವೆ. ಸಚಿವರು ಹಾಗೂ ಸಂಸದರನ್ನು ಒಳಗೊಂಡ ಆರು ತಂಡಗಳನ್ನು ರಚಿಸಲಾಗಿದೆ. ಸಂಘಟನಾತ್ಮಕ ದೃಷ್ಟಿಯಿಂದ ಬಿಜೆಪಿಯ 36 ಜಿಲ್ಲೆಯಲ್ಲಿ ಸಂಚರಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ತಳ ಹಂತದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಮಾದರಿ ಗುಜರಾತಿನಲ್ಲಿ ಫಲಕೊಟ್ಟಿದೆ. ಇದೇ ಮಾದರಿಯನ್ನು ದೇಶದ ಎಲ್ಲೆಡೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಪಂಚರತ್ನ ಸಮಿತಿಗಳನ್ನು ರಚಿಸಿ ಸಂಘಟನೆಗೆ ಒತ್ತು ನೀಡಲಾಗುತ್ತದೆ. ಸಮಿತಿಯಲ್ಲಿ ಮಹಿಳೆ ಸೇರಿ ಎಲ್ಲ ವರ್ಗದ ಜನರು ಇರುವಂತೆ ನೋಡಿಕೊಳ್ಳಲಾಗುತ್ತದೆ. ಸಮಿತಿಯು ಪ್ರತಿ ಕುಟುಂಬದ ಪ್ರೀತಿ ಮತ್ತು ವಿಶ್ವಾಸ ಪಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ತಂಡ ಪ್ರವಾಸ ಮಾಡಲಿದೆ. ಪ್ರತಿ ಜಿಲ್ಲೆಯ ಎರಡು ಸ್ಥಳದಲ್ಲಿ ಸಮಾವೇಶ ನಡೆಸಲಾಗುತ್ತದೆ. ಬಳಿಕ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಸಮಾವೇಶ ಆಯೋಜಿಸಲಾಗುವುದು. ಗ್ರಾಮಗಳ ಅಭಿವೃದ್ಧಿಗೆ ಚುನಾವಣೆ ಮುಖ್ಯವಾಗಿದೆ ಎಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ಅರಣ್ಯ ಸಚಿವ ಆನಂದ್‌ ಸಿಂಗ್‌, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸಂಸದರಾದ ಎ.ನಾರಾಯಣಸ್ವಾಮಿ, ಪ್ರತಾಪ ಸಿಂಹ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಎಸ್‌ಟಿ ಮೊರ್ಚಾ ಅಧ್ಯಕ್ಷ ತಿಪ್ಪುರಾಜ ಹವಾಲ್ದಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ರಾಜ್ಯ ಮಿನರಲ್ಸ್‌ ಕಾರ್ಪೊರೇಷನ್‌ ಅಧ್ಯಕ್ಷ ಎಸ್‌.ಲಿಂಗಮೂರ್ತಿ ಇದ್ದರು.

***

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಗೆಲ್ಲುವು ಸಾಧಿಸುವುದು ಬಿಜೆಪಿಯ ಉದ್ದೇಶ. ಇದು ಕಾರ್ಯಕರ್ತರ ಚುನಾವಣೆಯಾಗಿದ್ದು, ಹೆಚ್ಚು ಒತ್ತು ನೀಡಲಾಗುತ್ತಿದೆ.

–ಕೆ.ಎಸ್.ನವೀನ್‌
ಬಿಜೆಪಿ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.