ಚಿತ್ರದುರ್ಗ: ತಾಲ್ಲೂಕಿನ ವಿವಿಧೆಡೆ ಇರುವ ಹೂವಿನ ತೋಟಗಳಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಹಾಲಿನಂತಹ ಬೆಳಕು ಚೆಲ್ಲುತ್ತಿದೆ. ಸೇವಂತಿಗೆ ಹೂವಿನ ‘ಸೆಂಟ್ ಎಲೊ’ ತಳಿ ಉಳಿಸಿಕೊಳ್ಳಲು ಬೆಳೆಗಾರರು ಎಲ್‌ಇಡಿ ಬಲ್ಪ್ ಅಳವಡಿಸಿದ್ದು, ನೋಡುಗರ ಮನಸೂರೆಗೊಳ್ಳುತ್ತಿದೆ.
ರೈತರು ಈಗ ವರ್ಷಪೂರ್ತಿ ಹೂವು ಬೆಳೆಯುತ್ತಿದ್ದು, ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಆಧುನಿಕ ವಿಧಾನಗಳ ಮೊರೆ ಹೋಗುತ್ತಿದ್ದಾರೆ. ರಾಜ್ಯದಲ್ಲೇ ಅತೀ ಹೆಚ್ಚು ಹೂವು ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ ರೈತರ ಮಾದರಿಯನ್ನು ಕೋಟೆನಾಡಿನ ರೈತರೂ ಅನುಸರಿಸುತ್ತಿದ್ದಾರೆ. ತಾಲ್ಲೂಕಿನ ಕ್ಯಾದಿಗೆರೆ, ಚಿಕ್ಕೇನಹಳ್ಳಿ, ದೊಡ್ಡಸಿದ್ದವ್ವನಹಳ್ಳಿ, ಕಸುವನಹಳ್ಳಿ, ಹುಣಸೇಕಟ್ಟೆ, ಕಲ್ಲಹಳ್ಳಿ, ಚಳ್ಳಕೆರೆ ತಾಲ್ಲೂಕಿನ ನೆಲಗತ್ತನಹಟ್ಟಿ ಮುಂತಾದೆಡೆ ಹೂವಿನ ತೋಟಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸಿ ಬೆಳೆಕು ಹಾಯಿಸುತ್ತಿದ್ದಾರೆ.
ಮೊದಲೆಲ್ಲ ರೈತರು ದಸರಾ, ದೀಪಾವಳಿ ವೇಳೆ ಕಟಾವಿಗೆ ಬರುವಂತಹ ಸೇವಂತಿಗೆ ಹೂವಿನ ತಳಿಯನ್ನು ಮಾತ್ರ ಬೆಳೆಯುತ್ತಿದ್ದರು, 1 ಬೆಳೆಗಷ್ಟೇ ಸೀಮಿತವಾಗಿದ್ದರು. ಆದರೆ, ಈಗ ಕೆಲ ರೈತರು ವರ್ಷದಲ್ಲಿ 3 ಬೆಳೆ ತೆಗೆಯುತ್ತಿದ್ದು, ಹವಾಮಾನ ಆಧರಿತ ತಳಿಗಳ ಮೊರೆ ಹೋಗುತ್ತಿದ್ದಾರೆ. ಚಳಿಗಾಲದಲ್ಲಿ ಹೂವಿಗೆ ಕೃತಕವಾಗಿ ಉಷ್ಣಾಂಶ ಒದಗಿಸಲು ಎಲ್‌ಇಡಿ ಬಲ್ಪ್ ಅಳವಡಿಸಿದ್ದಾರೆ.
ಸೇವಂತಿಗೆ ಹೂವಿನ ‘ಸೆಂಟ್ ಎಲ್ಲೊ’ ತಳಿ ವರ್ಷದ ಎಲ್ಲ ಕಾಲದಲ್ಲೂ ಅರಳುತ್ತಿದ್ದು, ರೈತರಿಗೆ ಹೆಚ್ಚು ಲಾಭ ತಂದುಕೊಡುತ್ತಿದೆ. ನವೆಂಬರ್, ಡಿಸೆಂಬರ್ ಅವಧಿಯ ಚಳಿಯಿಂದ ಗಿಡಗಳನ್ನು ರಕ್ಷಿಸಿಕೊಳ್ಳಲು ಎಲ್‌ಇಡಿ ಬೆಳಕಿನ ಕರೆಂಟ್ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತಿವೆ. ಇದು ಚಳಿಯಲ್ಲಿ ಶಾಖ ಒದಗಿಸುವ ಜೊತೆಗೆ ರೋಗ ತಡೆಗೂ ವರವಾಗಿದೆ.
‘ಮೊದಲು ಸೇವಂತಿಗೆ ಹೂವಿನ ಬೆಳ್ಳಟ್ಟಿ ತಳಿಯನ್ನಷ್ಟೇ ನಾಟಿ ಮಾಡುತ್ತಿದ್ದೆವು. ಆದರೆ ಈಗ ವರ್ಷಪೂರ್ತಿ ಬೆಳೆಯಬಹುದಾದ ಸೆಂಟ್ ಎಲ್ಲೊ ತಳಿ ಹೆಚ್ಚು ಬೆಳೆಯುತ್ತಿದ್ದೇವೆ. ಕೆಲವರು ಚಾಂದನಿ, ರೋಸಿ ತಳಿಯನ್ನೂ ಬೆಳೆಯುತ್ತಿದ್ದಾರೆ. ಚಳಿಗಾಲದಲ್ಲಿ ಕರೆಂಟ್ ಬೆಳಕಿನಿಂದಲೇ ಹೂವಿನ ಗಿಡಗಳು ಬೆಳೆಯುತ್ತವೆ’ ಎಂದು ಕ್ಯಾದಿಗೆರೆ ಗ್ರಾಮದ ರೈತ ರೇಣುಕರಾಜ್ ಹೇಳಿದರು.
ಹೆಚ್ಚು ವಾಟ್ ಸಾಮರ್ಥ್ಯದ ಎಲ್‌ಇಡಿ ಬಲ್ಬ್‌ಗಳನ್ನೇ ರೈತರು ಅಳವಡಿಸುತ್ತಿದ್ದಾರೆ. ಒಂದು ಎಕರೆಗೆ 300 ದೀಪಗಳನ್ನು ಹಾಕಿದ್ದಾರೆ. ಪ್ರತಿ ಸಾಲಿನ ಮುಂದೆಯೂ ಕಬ್ಬಿಣದ ಸರಳು (ಗೂಟ) ನೆಟ್ಟು ವೈರಿಂಗ್ ಮಾಡಲಾಗಿದೆ. ಹೂವಿನ ಸಸಿಗಳನ್ನು ತಮಿಳುನಾಡಿನಿಂದ ತಂದು ನಾಟಿ ಮಾಡುತ್ತಾರೆ. ಸಸಿ ಕೊಂಚ ಬೆಳವಣಿಗೆ ಕಂಡ ನಂತರ ಬಲ್ಬ್‌ಗಳನ್ನು ಅಳವಡಿಸುತ್ತಾರೆ. ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರು ಒದಗಿಸುತ್ತಾರೆ.
ಕರೆಂಟ್ ಶಾಖದಿಂದ ಗಿಡ 3– 4 ಅಡಿ ಎತ್ತರದವರೆಗೆ ಬೆಳೆಯುತ್ತಿದ್ದು, ಉದ್ದಕ್ಕೂ ಮೊಗ್ಗು ಕಟ್ಟಿ ಹೆಚ್ಚು ಹೂವು ದೊರೆಯುತ್ತದೆ. ಹೆಚ್ಚು ಇಳುವರಿಗಾಗಿ ರೈತರು ಕರೆಂಟ್ ಅಳವಡಿಕೆಯ ಮಾದರಿ ಅನುಸರಿಸುತ್ತಿದ್ದಾರೆ. 100 ದಿನಗಳವರೆಗೆ ಕರೆಂಟ್ ಅವಶ್ಯಕತೆ ಇದೆ. ಬೆಸ್ಕಾಂನಿಂದ ಅಧಿಕೃತವಾಗಿ ಅನುಮತಿ ಪಡೆದು, ಮೀಟರ್ ಅಳವಡಿಸಿಕೊಂಡು ಬಲ್ಬ್ ಅಳವಡಿಸಲಾಗಿದೆ.
ಕರೆಂಟ್‌ಗಾಗಿಯೇ ರೈತರು ಎಕರೆಗೆ ₹ 30,000 ವೆಚ್ಚ ಮಾಡುತ್ತಿದ್ದಾರೆ. ಒಟ್ಟಾರೆ ಎಕರೆಗೆ ₹ 80,000 ಖರ್ಚು ಬರುತ್ತಿದೆ. ಹೆಚ್ಚು ಇಳುವರಿ ಬಂದು ಉತ್ತಮ ಬೆಲೆಯೂ ಸಿಕ್ಕರೆ ರೈತರಿಗೆ ₹ 4 ಲಕ್ಷದವರೆಗೆ ಆದಾಯ ದೊರೆಯುತ್ತದೆ.
‘ಬಲ್ಬ್ ಅಳವಡಿಸಿ ಹೂವಿನ ಕೃಷಿ ಮಾಡುವುದು ತೀರಾ ಶ್ರಮದಾಯಕ ಹಾಗೂ ಸವಾಲಿನಿಂದ ಕೂಡಿದೆ. 100 ದಿನಗಳವರೆಗೆ ಹೂವಿನ ಗಿಡವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಹೂವು ಬೆಳೆಗಾರರಿಗೆ ನಷ್ಟವಾದಾಗ ಸರ್ಕಾರಗಳು ಕೈಹಿಡಿಯಬೇಕು’ ಎಂದು ರೈತಸಂಘ, ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಒತ್ತಾಯಿಸಿದರು.
‘ಈ ಬಾರಿ ತೀವ್ರ ಚಳಿ ಕಾಡಿದ ಕಾರಣದಿಂದಾಗಿ ಹೂವಿನ ಗಿಡಗಳಿಗೆ ಸೊರಬು ರೋಗ ಕಾಡುತ್ತಿದೆ. ಎಲ್‌ಇಡಿ ಬಲ್ಬ್ ಅಳವಡಿಸಿ ಶಾಖ ನೀಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೋಗ ಪರಿಹಾರಕ್ಕೆ ಸೂಕ್ತ ಸಲಹೆ ನೀಡಬೇಕು’ ಎಂದು ತಾಲ್ಲೂಕಿನ ಹುಣುಸೇಕಟ್ಟೆ ಗ್ರಾಮದ ಪ್ರಗತಿಪರ ರೈತ ಕಾಂತರಾಜ್ ಒತ್ತಾಯಿಸಿದರು. ‘ಕಳೆದ ವರ್ಷ ಸೊರಬು ರೋಗ ಕಾಣಿಸಿಕೊಂಡಿತ್ತು. ಈ ಬಾರಿ ಅಂತಹ ಸಮಸ್ಯೆ ಕಂಡುಬಂದಿಲ್ಲ. ಆದರೂ ಹೂವು ಬೆಳೆಯುವ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.