ADVERTISEMENT

ಪೋಕ್ಸೊ ಸಂತ್ರಸ್ತೆಯರಿಗೆ ಬಾಲಮಂದಿರದಲ್ಲೇ ಪಾಠ

ಚಿತ್ರದುರ್ಗ: ಇಬ್ಬರು ಶಿಕ್ಷಕಿಯರನ್ನು ನಿಯೋಜಿಸಿದ ಶಿಕ್ಷಣ ಇಲಾಖೆ

ಜಿ.ಬಿ.ನಾಗರಾಜ್
Published 18 ಅಕ್ಟೋಬರ್ 2022, 5:30 IST
Last Updated 18 ಅಕ್ಟೋಬರ್ 2022, 5:30 IST
   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಹಾಸ್ಟೆಲ್‌ನಿಂದ ಸ್ಥಳಾಂತರಗೊಂಡಿರುವ ಪೋಕ್ಸೊ ಪ್ರಕರಣದ ಸಂತ್ರಸ್ತೆಯರಾದ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಬಾಲಕಿಯರ ಬಾಲಮಂದಿರದಲ್ಲೇ ಬೋಧನೆ ಮಾಡಲಾಗುತ್ತಿದ್ದು, ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕಿರಯನ್ನು ಈ ಕಾರ್ಯಕ್ಕೆ ನಿಯೋಜಿಸಿದೆ.

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ಇಬ್ಬರು ಸಂತ್ರಸ್ತೆಯರು ಹಾಗೂ ಮಠದ ಹಾಸ್ಟೆಲ್‌ನಿಂದ ಬಾಲಕಿಯರ ಬಾಲಮಂದಿರಕ್ಕೆ ಸ್ಥಳಾಂತರಗೊಂಡ ಒಬ್ಬ ಅನಾಥ ಬಾಲಕಿಗೆ ಈ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಈ ವ್ಯವಸ್ಥೆ ಕಲ್ಪಿಸಿದೆ. ನಿತ್ಯ ಬೆಳಿಗ್ಗೆ 10.30ಕ್ಕೆ ಬಾಲಮಂದಿರಕ್ಕೆ ಬರುವ ಇಬ್ಬರು ಶಿಕ್ಷಕಿಯರು ಸಂಜೆ 5 ಗಂಟೆಯವರೆಗೆ ಬೋಧನೆ ಮಾಡಲಿದ್ದಾರೆ. ಶಾಲೆಯ ಮಾದರಿಯಲ್ಲಿ ಗಂಟೆಗೊಂದು ತರಗತಿ ನಡೆಯುತ್ತಿದ್ದು, ಮಧ್ಯೆ ಊಟದ ವಿರಾಮ ನೀಡಲಾಗುತ್ತದೆ.

ADVERTISEMENT

ಪೋಕ್ಸೊ ಪ್ರಕರಣದ ಸಂತ್ರಸ್ತೆಯರಿಗೆ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲು ಕಾಲಮಿತಿ ಇದೆ. ಸಿಆರ್‌ಪಿಸಿ 164 ಹೇಳಿಕೆ, ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಸೇರಿ ಪ್ರಾಥಮಿಕ ತನಿಖೆಯವರೆಗೆ ಬಾಲಮಂದಿರದಲ್ಲಿ ವಾಸ್ತವ್ಯ ಹೂಡಲು ಅವಕಾಶವಿದೆ. ಮುರುಘಾಶ್ರೀ ವಿರುದ್ಧ ಕೇಳಿಬಂದ ಆರೋಪ ಗಂಭೀರ ಪ್ರಕರಣವಾಗಿರುವ ಕಾರಣಕ್ಕೆ ಹಾಗೂ ಸಂತ್ರಸ್ತೆಯರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಆರೋಪ ಕೇಳಿಬಂದಿದ್ದರಿಂದ ಸಂತ್ರಸ್ತೆಯರಿಗೆ ಬಾಲಮಂದಿರದಲ್ಲೇ ಶಿಕ್ಷಣ ಮುಂದುವರಿಸಲು ಮಕ್ಕಳ ಕಲ್ಯಾಣ ಸಮಿತಿ ಅವಕಾಶ ಕಲ್ಪಿಸಿದೆ.

ಪೋಕ್ಸೊ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಠದ ಆವರಣದಲ್ಲಿನ ಹಾಸ್ಟೆಲ್‌ನಲ್ಲಿದ್ದ ಎಲ್ಲ ಮಕ್ಕಳನ್ನು ಪಾಲಕರೊಂದಿಗೆ ಕಳುಹಿಸಲಾಯಿತು. ಅನಾಥ ಬಾಲಕಿಯೊಬ್ಬಳಿಗೆ ಬಾಲಮಂದಿರದಲ್ಲೇ ಆಶ್ರಯ ನೀಡಲಾಗಿದೆ. ಪೋಕ್ಸೊ ಪ್ರಕರಣದ ಸಂತ್ರಸ್ತೆಯರೊಂದಿಗೆ ಈ ವಿದ್ಯಾರ್ಥಿನಿಯೂ ಶಿಕ್ಷಣ ಪಡೆಯುತ್ತಿದ್ದಾರೆ. ಮೂವರ ಪರೀಕ್ಷಾ ಶುಲ್ಕವನ್ನು ಬಾಲಮಂದಿರದವರೇ ಪಾವತಿಸಿದ್ದು, ಅವರ ವ್ಯಾಸಂಗಕ್ಕೆ ಅಗತ್ಯವಿರುವ ಪಠ್ಯ ಪುಸ್ತಕ ಹಾಗೂ ಇತರ ಸಾಮಗ್ರಿಯನ್ನು ಅವರೇ ನೀಡಿದ್ದಾರೆ.

ಈ ಬಾಲಮಂದಿರದಲ್ಲಿ ವಿವಿಧೆಡೆ ಘಟಿಸಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದ ಏಳು ಜನ ಸಂತ್ರಸ್ತೆಯರು ಸೇರಿ 43 ಜನ ಬಾಲಕಿಯರಿದ್ದಾರೆ. ಈ ಪೈಕಿ 34 ಜನ ಬಾಲಕಿಯರು ನಿತ್ಯ ಶಾಲೆಗೆ ತೆರಳುತ್ತಾರೆ. 6 ಜನ ಸಂತ್ರಸ್ತೆಯರು ವಿಚಾರಣೆಯ ಕಾರಣಕ್ಕೆ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ. ಮೂವರು ವಿದ್ಯಾರ್ಥಿನಿಯರು ಮಾತ್ರ ಬಾಲಮಂದಿರದಲ್ಲೇ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಬಾಲಮಂದಿರದ ಎಲ್ಲ ಮಕ್ಕಳಿಗೆ ನಿತ್ಯ ಬೆಳಿಗ್ಗೆ 7ರಿಂದ 8 ಗಂಟೆ ಹಾಗೂ ಸಂಜೆ 5ರಿಂದ 6 ಗಂಟೆಯ ಅವಧಿಯಲ್ಲಿ ವಿಶೇಷ ಟ್ಯೂಷನ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಇದಕ್ಕಾಗಿ ನಾಲ್ವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿತ್ಯ ಯೋಗ, ಧ್ಯಾನ ಹಾಗೂ ಸಂಗೀತ ಕಲಿಸಲಾಗುತ್ತಿದೆ.

***

ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸುವಂತೆ ಬಾಲಕಿಯರ ಬಾಲಮಂದಿರದಿಂದ ಮನವಿ ಬಂದಿತ್ತು. ಪರಿಶೀಲಿಸಿ ಇಬ್ಬರು ಶಿಕ್ಷಕಿಯರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಕೆ.ರವಿಶಂಕರ ರೆಡ್ಡಿ,ಡಿಡಿಪಿಐ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.