ADVERTISEMENT

ಜೀವನ ಶಿಕ್ಷಣವೂ ಅತ್ಯವಶ್ಯಕ :ಸಿರಿಗೆರೆಶ್ರೀ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 4:23 IST
Last Updated 15 ನವೆಂಬರ್ 2022, 4:23 IST
ಸಿರಿಗೆರೆ ಗುರು ಶಾಂತೇಶ್ವರ ಭವನದ ಮುಂಭಾಗದ ವೇದಿಕೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಸಿರಿಗೆರೆ ಗುರು ಶಾಂತೇಶ್ವರ ಭವನದ ಮುಂಭಾಗದ ವೇದಿಕೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.   

ಸಿರಿಗೆರೆ: ‘ಕನ್ನಡ ನಾಡಿನ ಭವಿಷ್ಯವನ್ನು ಸಾರುವ ಹೊಣೆಗಾರಿಕೆ ನಿಮ್ಮ ಮೇಲಿರುವುದರಿಂದ ಕೇವಲ ವಿದ್ಯಾವಂತರಾದರೆ ಸಾಲದು. ತನ್ಮಯತೆ, ವಿವೇಕ, ವಿನಯಶೀಲ ಗುಣಗಳನ್ನು ಬೆಳೆಸಿಕೊಂಡು ನಾಡು ನುಡಿಯ ಸೇವೆ ಸದಾ ಸಿದ್ಧರಾಗಬೇಕಿದೆ’ ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿನ ಗುರುಶಾಂತೇಶ್ವರ ಭವನದ ಮುಂಭಾಗದಲ್ಲಿ ಜರುಗಿದ ಕನ್ನಡ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಕರ್ನಾಟಕ ರಾಜ್ಯೋತ್ಸವದಲ್ಲಿ ನಿಮ್ಮ ಶಿಸ್ತುಬದ್ಧ ಉಡುಗೆ-ತೊಡುಗೆ ಆಕರ್ಷಕವಾಗಿರುವುದಲ್ಲದೆ, ದೇಶಭಕ್ತಿ ಅಭಿವ್ಯಕ್ತಿಗೊಳಿಸುವಂತಿತ್ತು. ಸತ್ಯ, ಅಹಿಂಸೆ ಮತ್ತು ಮೌಲ್ಯಾದರ್ಶಗಳ ಸತ್ವದಿಂದಲೇ ಗಾಂಧೀಜಿ ದಕ್ಷ ಹಾಗೂ ದೇಶಾಭಿಮಾನಿಯಾಗಿದ್ದವರು. ಅಂತಯೇ ನೀವು ಕನ್ನಡಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಶಿಸ್ತು, ಸರಳತೆ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಭಾರತದ ಮೊದಲನೇ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಮಕ್ಕಳ ಬಗ್ಗೆ ಪ್ರೀತಿ, ಒಲವು ಹೆಚ್ಚು ಇದ್ದು ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಶಿಕ್ಷಣದ ಜೊತೆಗೆ ಜೀವನ ಶಿಕ್ಷಣವನ್ನು ಸಹ ಕಲಿಯಬೇಕಾಗಿರುವುದು ಅತ್ಯವಶ್ಯಕ’ ಎಂದರು.

ಬೆಳ್ಳಿ ಲೇಪನದ ಸಾರೋಟಿನಲ್ಲಿ ತಾಯಿ ಭುವನೇಶ್ವರಿಯ ಪ್ರತಿಮೆಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ವಾದ್ಯಗಳೊಂದಿಗೆ ನೆರವೇರಿಸಲಾಯಿತು. 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಉಡುಗೆ-ತೊಡುಗೆಗಳನ್ನು ಧರಿಸಿ ಗಮನ ಸೆಳೆದರು.

ತರಳಬಾಳು ಜಗದ್ಗುರು ಶಾಲಾ-ಕಾಲೇಜುಗಳ 4000 ಮಕ್ಕಳಿಂದ ಕನ್ನಡ ಸಹಸ್ರ ಕಂಠ ಗೀತ ಗಾಯನ ನಡೆಯಿತು.

‘ಜಾನಪದ ಸಿರಿ’ ಸಂಭ್ರಮದ ವಿದ್ಯಾರ್ಥಿಗಳು ನೃತ್ಯ ನಗಾರಿ ಮತ್ತು ಯಕ್ಷಗಾನ, ಮಂಡ್ಯದ ಸುಂದರೇಶ್ ತಂಡದವರು ಪೂಜಾ ಕುಣಿತ ಪ್ರದರ್ಶನ ನೀಡಿದರು. ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಪುಟಾಣಿಗಳು ಕನ್ನಡ ಕವಿ, ಸಾಹಿತಿಗಳ ಪೋಷಾಕು ಧರಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್, ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.