ADVERTISEMENT

ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಿ: ಸಾಣೇಹಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:55 IST
Last Updated 17 ಸೆಪ್ಟೆಂಬರ್ 2025, 5:55 IST
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಭಾಗಿಯಾಗಿದ್ದರು
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಭಾಗಿಯಾಗಿದ್ದರು   

ಹೊಸದುರ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಿ ಹಾಗೂ ಜಾತಿಯ ಕಾಲಂನಲ್ಲಿ ತಮ್ಮ ಉಪಪಂಗಡವನ್ನು ದಾಖಲಿಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯ ಮಠದ ಆವರಣದಲ್ಲಿ ಮಠಾಧೀಶರ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲು ಇನ್ನೂ ಸಮಯ ಬೇಕಿದೆ. ಈ ಹಿಂದೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಿತ್ತು. ಆದರೆ ಕೇಂದ್ರ ಸರ್ಕಾರ ಮತ್ತೆ ರಾಜ್ಯಕ್ಕೆ ವಾಪಸ್ ಕಳಿಸಿದೆ. ಲಿಂಗಾಯತ ಧರ್ಮದ ಬಗ್ಗೆ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಒಕ್ಕೂಟ ಕಾರ್ಯೋನ್ಮುಖವಾಗಿದೆ ಎಂದರು.

ADVERTISEMENT

ಲಿಂಗಾಯತ ಒಕ್ಕೂಟದ ಎಲ್ಲರ ಒಮ್ಮತದ ಅಭಿಪ್ರಾಯ ಇದಾಗಿದೆ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಎಲ್ಲರಿಗೂ ಇದನ್ನೇ ಹೇಳುತ್ತಾ ಬಂದಿದ್ದೇವೆ. ಗುರುಗಳ ಮೇಲೆ ವಿಶ್ವಾಸವಿದ್ದರೆ ಗುರುಗಳು ಹೇಳಿದ್ದನ್ನು ಬರೆಯಿಸಿ ಎಂದು ಹೇಳಿದರು.

‘ಒಕ್ಕೂಟದಲ್ಲಿ ಮಾದಿಗ ಸಮುದಾಯದವರೂ ಇದ್ದಾರೆ. ಮಾದಾರ ಚೆನ್ನಯ್ಯ ಸ್ವಾಮೀಜಿ ಅವರೂ ಲಿಂಗಧಾರಿಗಳೇ ಆಗಿದ್ದಾರೆ. ಲಿಂಗಾಯತ ಎಂದು ಬರೆಯಿಸಬೇಕು ಎಂಬ ಅಭಿಪ್ರಾಯದಲ್ಲಿ ಅವರಿದ್ದಾರೆ. ಅವರು ಒಕ್ಕೂಟದ ಸದಸ್ಯರಾಗಿದ್ದಾರೆ. ನಮ್ಮ ಅಭಿಪ್ರಾಯ ಒಪ್ಪುತ್ತಾರೆ ಎಂಬ ನಂಬಿಕೆ ನಮಗಿದೆ’ ಎಂದು ಪರ್ತಕರ್ತ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಿದರು.

ವೀರಶೈವರು ಕೂಡ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಿ, ಜಾತಿ ಉಪಜಾತಿ ಕಾಲಂನಲ್ಲಿ ವೀರಶೈವ ಎಂದು ಬರೆಸಬಹುದು. ಲಿಂಗಾಯತರಲ್ಲಿ ವೀರಶೈವವೂ ಒಂದು ಉಪ ಜಾತಿಯಾಗಿದ್ದು, ಇದಕ್ಕೆ ಒಕ್ಕೂಟದ ಮಾನ್ಯತೆ ಇದೆ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಗದುಗಿನ ಸಿದ್ದರಾಮ ತೋಂಟದಾರ್ಯ ಸ್ವಾಮೀಜಿ, ನಾಗನೂರು ಶ್ರೀ, ಮಾತೆ ಗಂಗಾಮಾತೆ, ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವಸ್ವಾಮೀಜಿ ಸೇರಿದಂತೆ ಒಕ್ಕೂಟದ ವಿವಿಧ ಸ್ವಾಮೀಜಿಗಳು ಹಾಗೂ ಸಾಧು ಸದ್ದರ್ಮ ಸಮಾಜದ ಸಿದ್ದಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.