ADVERTISEMENT

ಲಿಂಗಾಯತರಿಗೆ ಸ್ವರ್ಗ, ನರಕಗಳಿಲ್ಲ: ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 16:56 IST
Last Updated 28 ಆಗಸ್ಟ್ 2020, 16:56 IST
ಎಸ್.ಎಂ. ಜಾಮದಾರ
ಎಸ್.ಎಂ. ಜಾಮದಾರ   

ಹೊಸದುರ್ಗ:‘ಕ್ರಿಶ್ಚಿಯನ್ನರು, ಮುಸ್ಲಿಮರು, ಸಿಖ್‌ರು ದೇವರು ಸ್ವರ್ಗದಲ್ಲಿದ್ದಾನೆ ಎಂದು ನಂಬುವರು. ಹಿಂದೂಗಳು, ವೀರಶೈವರಂತೆ ಲಿಂಗಾಯತರೂ ಸ್ವರ್ಗ-ನರಕಗಳ ಬಗ್ಗೆ ತಪ್ಪಾದ ತಿಳಿವಳಿಕೆ ಹೊಂದಿದ್ದಾರೆ. ಆದರೆ ಲಿಂಗಾಯತರಿಗೆ ಬೇರೆ ಧರ್ಮಗಳಂತೆ ಸ್ವರ್ಗ-ನರಕಗಳಿಲ್ಲ’ ಎಂದು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಗಾರ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಹೇಳಿದರು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಶುಕ್ರವಾರ ‘ಲಿಂಗಾಯತ ಧರ್ಮ’ ಕುರಿತು ಅವರು ಉಪನ್ಯಾಸ ನೀಡಿದರು.

‘ಲಿಂಗಾಯತರ ದೇವರು ನಿರಾಕಾರವಾದ್ದರಿಂದ ಅಲ್ಲಿ ಮೂರ್ತಿ ಪೂಜೆಗೆ, ಪೂಜಾರಿಗೆ, ದೇವಾಲಯಗಳಿಗೆ ಅವಕಾಶವಿಲ್ಲ. ಲಿಂಗಾತರಾದಂಥವರು ಈ ಆಚರಣೆಯನ್ನು ಅನುಸರಿಸಬಾರದು. ಲಿಂಗಾಯತರಿಗೆ ನರಕವೂ, ಕೈಲಾಸವೂ, ಪುನರ್‌ಜನ್ಮವೂ ಇಲ್ಲ. ಬದಲಾಗಿ ಲಿಂಗಾಯತರಿಗೆ ಶರಣರು ಹೇಳಿದಂತೆ ದೇವರು ಅವರವರ ಹೃದಯದಲ್ಲಿ ಇದ್ದಾನೆ. ಲಿಂಗಾಯತ ಧರ್ಮ ಜೈನ, ಬುದ್ಧ, ಚಾರ್ವಾಕರ ಹಾಗೆ ನಿರೀಶ್ವರ ಧರ್ಮವಲ್ಲ. ಹಿಂದೂಗಳ ಹಾಗೆ ಸಾಕಾರ ಧರ್ಮವೂ ಅಲ್ಲ. ದೇವರಲ್ಲಿ ನಂಬಿಕೆ ಮತ್ತು ಶರಣರ ತತ್ವಗಳನ್ನು ಆಚರಿಸುವವರು ಲಿಂಗಾಯತರು. ಈ ಧರ್ಮದಲ್ಲಿ ಉಪವಾಸಕ್ಕೆ, ದೇಹ ದಂಡನೆಗೆ, ಪುನರ್ಜನ್ಮಕ್ಕೆ, ತೀರ್ಥಯಾತ್ರೆಗೆ, ನದಿಯಲ್ಲಿ ಮುಳುಗುವ, ಜಪ-ತಪ ಮಾಡುವ, ಪಂಚಾಂಗ, ರಾಹುಕಾಲ, ಯಮಗಂಡಕಾಲ ಮುಂತಾದವುಗಳಿಗೆ ಅವಕಾಶ ಇಲ್ಲ’ ಎಂದು ವಿವರಿಸಿದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಧರ್ಮ ಎನ್ನುತ್ತಲೇ ಅದಕ್ಕೊಬ್ಬ ಧರ್ಮಗುರು, ಧರ್ಮಗ್ರಂಥ, ಧರ್ಮಕ್ಷೇತ್ರ ಇರಬೇಕೆನ್ನುವುದು ಅಲಿಖಿತ ನಿಯಮವಾಗಿ ಬಿಟ್ಟಿದೆ. ಆದರೆ ಇದಕ್ಕೆ ಅಪವಾದ ಬಸವಾದಿ ಶಿವಶರಣರಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ. ಲಿಂಗಾಯತ ಒಂದು ಜಾತಿಯಲ್ಲ. ಆಸಕ್ತಿ, ಸಾಧನೆ, ಅನುಭವ, ಅನುಭಾವದಿಂದ ಯಾರು ಬೇಕಾದರೂ ಲಿಂಗಾಯತರಾಗಬಹುದು. ಲಿಂಗಾಯತರಾಗುವುದು ಎಂದರೆ ಜಾತಿಯ ಕರಾಳ ಸುಳಿಯಿಂದ ಹೊರಬಂದು ವಿಶ್ವಮಾನವರಾಗುವುದು. ಲಿಂಗ ಜಾತಿಯ ಸಂಕೇತವಲ್ಲ. ಜ್ಯೋತಿಯ ಪ್ರತೀಕ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT