ADVERTISEMENT

ಚಿತ್ರದುರ್ಗ: ಇನ್ನೂ ಎರಡು ವಾರ ಲಾಕ್‌ಡೌನ್‌

ಹಲವು ನಿಯಮ ಮಾರ್ಪಾಡು, ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 15:08 IST
Last Updated 20 ಜೂನ್ 2021, 15:08 IST
ಕವಿತಾ ಎಸ್‌.ಮನ್ನಿಕೇರಿ
ಕವಿತಾ ಎಸ್‌.ಮನ್ನಿಕೇರಿ   

ಚಿತ್ರದುರ್ಗ: ಕೊರೊನಾ ಸೋಂಕು ದೃಢಪಡುವ ಪ್ರಮಾಣ ಶೇ 5ಕ್ಕಿಂತ ಹೆಚ್ಚಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಇನ್ನೂ ಎರಡು ವಾರ ಲಾಕ್‌ಡೌನ್‌ ನಿರ್ಬಂಧ ಮುಂದುವರಿಯಲಿದೆ. ಹಲವು ನಿಯಮಗಳನ್ನು ಮಾರ್ಪಾಡು ಮಾಡಲಾಗಿದ್ದು, ರಾತ್ರಿ ಹಾಗೂ ವಾರಾಂತ್ಯದ ಕರ್ಫ್ಯೂ ಇರಲಿದೆ.

ಹಲವು ದಿನಗಳಿಂದ ಸರ್ಕಾರ ವಿಧಿಸಿದ ಲಾಕ್‌ಡೌನ್‌ನ ಹಂತವೊಂದು ಜೂನ್‌ 20ಕ್ಕೆ ಕೊನೆಯಾಗಿದೆ. ಸೋಂಕಿನ ತೀವ್ರತೆ ಕಡಿಮೆ ಇರುವ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಚಿತ್ರದುರ್ಗ ಸೇರಿ ಇತರ ಜಿಲ್ಲೆಯಲ್ಲಿ ಜುಲೈ 5ರವರೆಗೆ ಲಾಕ್‌ಡೌನ್‌ ಯಥಾಸ್ಥಿತಿ ಮುಂದುವರಿಯಲಿದೆ.

ನಿತ್ಯ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬಸ್‌ ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಮದ್ಯದಂಗಡಿ, ಹೋಟೆಲ್‌ಗಳಲ್ಲಿ ಪಾರ್ಸಲ್‌ ಸೇವೆಗೆ ಅನುಮತಿ ನೀಡಲಾಗಿದೆ. ನಿತ್ಯ ಸಂಜೆ 7ರಿಂದ ನಸುಕಿನ 5ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಈ ಅವಧಿಯಲ್ಲಿ ಜನ ಹಾಗೂ ಎಲ್ಲ ವಾಹನ ಸಂಚಾರಕ್ಕೆ ಅವಕಾಶವಿಲ್ಲ.

ADVERTISEMENT

‘ಸರ್ಕಾರ ರೂಪಿಸಿದ ಹೊಸ ಮಾರ್ಗಸೂಚಿ ಅನ್ವಯ ಆದೇಶ ಹೊರಡಿಸಲಾಗಿದೆ. ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ಇರಲಿದೆ. ಈ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಎಚ್ಚರಿಕೆ ನೀಡಿದ್ದಾರೆ.

‘ಜೂನ್ 11ರಂದು ಹೊರಡಿಸಿರುವ ಮಾರ್ಗಸೂಚಿ ಜಿಲ್ಲೆಯಲ್ಲಿ ಮುಂದುವರೆಯಲಿದೆ. ಆಹಾರ, ದಿನಸಿ, ಹಣ್ಣು ತರಕಾರಿ, ಮಾಂಸ, ಮೀನು, ಡೇರಿ ಉತ್ಪನ್ನ, ಬೀದಿ ಬದಿ ವ್ಯಾಪಾರ, ಪಡಿತರ ಅಂಗಡಿಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ಮಾತ್ರ ತೆರೆಯಬಹುದು. ಉದ್ಯಾನಗಳಲ್ಲಿ ಬೆಳಿಗ್ಗೆ 5 ರಿಂದ 10 ರವರೆಗೆ ವಾಯುವಿಹಾರ ಮಾಡಬಹುದು. ಇ–ಕಾಮರ್ಸ್‌ ಸೇವೆಗೆ ಯಾವುದೇ ನಿರ್ಬಂಧ ಇಲ್ಲ’ ಎಂದು ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿದೆ. ಕೃಷಿ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿ, ಲೋಕೋಪಯೋಗಿ ಇಲಾಖೆ, ವಸತಿ, ಸಹಕಾರ, ಕಂದಾಯ, ನಬಾರ್ಡ್ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಕೃಷಿ ಚಟುವಟಿಕೆ, ಗ್ರಾಮೀಣ ಪ್ರದೇಶದಲ್ಲಿ ರೈತರ ಕೆಲಸಗಳಿಗೆ ನಿರ್ಬಂಧವಿಲ್ಲ.

ಬಟ್ಟೆ, ಆಭರಣದಂಗಡಿಗೆ ನಿರ್ಬಂಧ

ಬಟ್ಟೆ ಹಾಗೂ ಚಿನ್ನಾಭರಣ ಮಳಿಗೆಗಳು ತೆರೆಯಲು ಹೊಸ ಮಾರ್ಗಸೂಚಿಯಲ್ಲಿಯೂ ಅವಕಾಶ ಸಿಕ್ಕಿಲ್ಲ. ಜುಲೈ 5ರವರೆಗೆ ಇವು ಸೇವೆ ಒದಗಿಸುವುದಿಲ್ಲ.

‘ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಅವಕಾಶವಿದೆ. ಅರ್ಧದಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಬಹುದಾಗಿದೆ. ಗಾರ್ಮೆಂಟ್ಸ್‌ಗಳಲ್ಲಿ ಶೇ 30ರಷ್ಟು ಕಾರ್ಮಿಕರು ಕಾರ್ಯನಿರ್ವಹಿಸಬಹುದು. ಆದರೆ, ಬಟ್ಟೆ, ಆಭರಣ ಮಳಿಗೆ ಹಾಗೂ ಶೋರೂಂ ಬಾಗಿಲು ತೆರೆಯಲು ಅವಕಾಶ ಇಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.

‘ಮದುವೆ ಸಮಾರಂಭಗಳಿಗೆ 40 ಹಾಗೂ ಅಂತ್ಯಕ್ರಿಯೆಗೆ 5 ಮಂದಿಗೆ ಪಾಲ್ಗೊಳ್ಳಬಹುದು. ಇದಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ. ಸಂಜೆ 7 ಗಂಟೆಯ ಒಳಗೆ ಮನೆ ಸೇರಿಸಿಕೊಳ್ಳಬೇಕು. ಕರ್ಫ್ಯೂ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸಬಾರದು’ ಎಂದು ಎಚ್ಚರಿಕೆ ನೀಡಿದ್ದಾರೆ.

***

ಕೋವಿಡ್‌ ನಿಯಂತ್ರಣಕ್ಕೆ ನಿರ್ಬಂಧ ಅನಿವಾರ್ಯ. ಜುಲೈ 5ರವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಕವಿತಾ ಎಸ್‌.ಮನ್ನಿಕೇರಿ
ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.