
ಚಳ್ಳಕೆರೆ: ಫೆ. 27 ಮತ್ತು 28ರಂದು ಜಿತ್ರದುರ್ಗ ನಗರದಲ್ಲಿ ನಡೆಯಲಿರುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಚಳ್ಳಕೆರೆ ನಗರದ ತಮ್ಮ ನಿವಾಸದಲ್ಲಿ ಭಾನುವಾರ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ‘ಇದೊಂದು ಸಾಹಿತ್ಯ ಮತ್ತು ಸಂಸ್ಕೃತಿಯ ಉತ್ತಮ ಕಾರ್ಯಕ್ರಮವಾಗಿದ್ದು, ಸಾಹಿತ್ಯ ಪ್ರೇಮಿಗಳಿಗೆ ಸಮ್ಮೇಳನ ಮನೆ ಮನೆಯ ಹಬ್ಬವಾಗಿ ಹೊರ ಹೊಮ್ಮಲಿದೆ. ಹೀಗಾಗಿ ಜಿಲ್ಲೆಯ ಇತಿಹಾಸ, ಕಲೆ, ಸಾಹಿತ್ಯ ಮತ್ತು ಪರಂಪರೆಯ ಪ್ರಸಾರದ ಕಾರ್ಯಕ್ಕೆ ಪ್ರತಿಯೊಬ್ಬರೂ ತಪ್ಪದೆ ಸಹಕಾರ ನೀಡಬೇಕು’ ಎಂದು ಹೇಳಿದರು.
‘ಸಮ್ಮೇಳನದ ಲಾಂಛನದಲ್ಲಿ ಕುದುರೆಯ ಮೇಲೆ ಕುಳಿತ ಮದಕರಿನಾಯಕನ ಭಾವಚಿತ್ರ ಎಡಬದಿಯಲ್ಲಿದೆ. ಬಲಬದಿಯಲ್ಲಿ ಏಳು ಸುತ್ತಿನ ಕೋಟೆಯನ್ನು ಶತ್ರುಗಳಿಂದ ರಕ್ಷಿಸಿದ ಒನಕೆ ಓಬವ್ವನ ಭಾವಚಿತ್ರವಿದೆ. ಜೊತೆಗೆ ತಾಯಿ ಭುವನೇಶ್ವರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಹೊಂದಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಲ್.ಪ್ರಶಾಂತ್, ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ, ಕೋಶಾಧ್ಯಕ್ಷ ಸಿ.ಲೋಕೇಶ, ನಾಯಕನಹಟ್ಟಿ ವಿ.ಧನಂಜಯ, ಬಂಡಾಯ ಸಾಹಿತಿ ಪ್ರೊ.ಸಿ.ಶಿವಲಿಂಗಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಶಿವಲಿಂಗಪ್ಪ, ನಿವೃತ್ತ ಉಪನ್ಯಾಸಕ ಸಿ.ವಿ.ವೀರಣ್ಣ, ರೈತ ಮುಖಂಡ ಕೆ.ಪಿ.ಭೂತಯ್ಯ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ ಇದ್ದರು.
ಪುಸ್ತಕ ಮಳಿಗೆಗಳಿಗೆ ಅವಕಾಶ: ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೆ ಅವಕಾಶ ಒದಗಿಸಲಾಗುವುದು. ಜೊತೆಗೆ ಸಮ್ಮೇಳನ ನಡೆಯುವ ಚಳ್ಳಕೆರೆ ಗೇಟ್‌ನಲ್ಲಿರುವ ಎಸ್.ಕೆ. ಸಮುದಾಯ ಭವನದಲ್ಲಿ ಪುಸ್ತಕ ಮಾರಾಟ ಮಳಿಗೆ, ಕೃಷಿ, ಸ್ವಸಹಾಯ ಸಂಘಗಳು ಸೇರಿ ವಿವಿಧ ರೀತಿಯ ಮಾರಾಟ ಮಳಿಗೆಗಳಿಗೆ ಅವಕಾಶವಿದೆ.
ಆಸಕ್ತರು ಮೊ. 99721 55177, 94497 59219 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.