ADVERTISEMENT

ಲೋಕ ಅದಾಲತ್: 3577 ಪ್ರಕರಣ ಇತ್ಯರ್ಥ

ನ್ಯಾಯಾಂಗ ಇಲಾಖೆಯಲ್ಲಿ ಸಂತಸ * ವ್ಯಾಜ್ಯ ಪೂರ್ವ 112 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 14:34 IST
Last Updated 14 ಡಿಸೆಂಬರ್ 2019, 14:34 IST
ಚಿತ್ರದುರ್ಗದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ. ವಟವಟಿ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.
ಚಿತ್ರದುರ್ಗದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ. ವಟವಟಿ ನೇತೃತ್ವದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.   

ಚಿತ್ರದುರ್ಗ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಲೋಕ ಅದಾಲತ್‌’ನಲ್ಲಿ ಒಟ್ಟು 3,577 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಂದೇ ದಿನ ಇಷ್ಟೊಂದು ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥವಾಗಿದ್ದು, ಅದಾಲತ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನ್ಯಾಯಾಂಗ ಇಲಾಖೆಯಲ್ಲಿ ಸಂತಸ ಮೂಡಿಸಿದೆ.

ಜಿಲ್ಲಾ ಕೇಂದ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ. ವಟವಟಿ ನೇತೃತ್ವದಲ್ಲಿ ಅದಾಲತ್ ನಡೆಯಿತು. ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ 28,982 ಪ್ರಕರಣಗಳ ಪೈಕಿ 4,935 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 3,577 ಪ್ರಕರಣ ರಾಜಿ ಮೂಲಕ ಇತ್ಯರ್ಥಗೊಳಿಸಿ, ₹ 8.37 ಕೋಟಿ ಹಣವನ್ನು ಸಂಬಂಧಿಸಿದವರಿಗೆ ಕೊಡಿಸಲಾಯಿತು.

ADVERTISEMENT

865 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 112 ಪ್ರಕರಣಗಳೊಂದಿಗೆ ₹ 1.15 ಕೋಟಿ ಹಣವನ್ನು ಇತ್ಯರ್ಥಗೊಳಿಸಲಾಯಿತು. ಅದಾಲತ್‌ನಲ್ಲಿ ಚೆಕ್‌ ಬೌನ್ಸ್‌, ಬ್ಯಾಂಕ್ ವಸೂಲಾತಿ, ಕಾರ್ಮಿಕರ ವಿವಾದ, ವಿದ್ಯುತ್ ಮತ್ತು ನೀರಿನ ಶುಲ್ಕ ಪ್ರಕರಣ ಸೇರಿ ಇತರೆ ವ್ಯಾಜ್ಯ ಪೂರ್ವ ಪ್ರಕರಣಗಳು ಅದಾಲತ್‌ಗೆ ಆಯ್ಕೆಯಾಗಿದ್ದವು.

ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಮೋಟರು ವಾಹನ ಅಪಘಾತ ಪರಿಹಾರ, ಭೂಸ್ವಾಧೀನ ಪ್ರಕರಣ, ಕಂದಾಯ ಪ್ರಕರಣ, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಸೇರಿ ಹಲವು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅನೇಕ ಪ್ರಕರಣಗಳು ಇತ್ಯರ್ಥಗೊಂಡವು.

ಅದಾಲತ್‌ಗೆ 20 ಪೀಠಗಳನ್ನು ಸ್ಥಾಪಿಸಲಾಗಿತ್ತು. ಚಿತ್ರದುರ್ಗದಲ್ಲಿ 10 ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 10 ಪೀಠಗಳು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಕಾರ್ಯ ನಿರ್ವಹಿಸಿದವು. ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರು ಪಾಲ್ಗೊಂಡು ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದರು.

ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ನೂರಾರು ಜನ ಮುಂದೆ ಬರುತ್ತಿದ್ದಾರೆ. ಇದರಿಂದ ನ್ಯಾಯಾಲಯದ ಖರ್ಚು ಹಾಗೂ ಸಮಯ ಉಳಿತಾಯ ಆಗಲಿದೆ ಎಂದು ನ್ಯಾಯಾಧೀಶರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.