ADVERTISEMENT

‘ಮದಕರಿ ನಾಯಕ’ ದರ್ಶನ್‌ ಬದಲಿಗೆ ಸುದೀಪ್‌ಗೆ: ವಾಲ್ಮೀಕಿ ಶ್ರೀ ಹೇಳಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 11:46 IST
Last Updated 12 ಅಕ್ಟೋಬರ್ 2018, 11:46 IST
   

ಚಿತ್ರದುರ್ಗ: ‘ಮದಕರಿ ನಾಯಕ’ ಸಿನಿಮಾದ ನಾಯಕ ನಟನ ಪಾತ್ರವನ್ನು ಚಿತ್ರನಟ ದರ್ಶನ್‌ ಬದಲಿಗೆ ಸುದೀಪ್‌ಗೆ ನೀಡಬೇಕು ಎಂಬ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿಕೆಗೆ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಅಂಜಿನಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಮಾಜದ ಗುರುಗಳು ಈ ರೀತಿ ಹೇಳಿಕೆ ನೀಡಿದ್ದು ತಪ್ಪು. ಕಲಾವಿದರು ಹಾಗೂ ಕಲೆಗೆ ಜಾತಿ ಬಣ್ಣ ಕಟ್ಟಿ ಸಮಾಜಕ್ಕೆ ಮಸಿ ಬಳಿಯುವ ಪ್ರಯತ್ನ ಸರಿಯಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

‘ಮದಕರಿ ನಾಯಕನ ಪಾತ್ರವನ್ನು ಯಾವ ನಟ ನಿರ್ವಹಿಸಬೇಕು ಎಂಬ ಗೊಂದಲವನ್ನು ವಿನಾ ಕಾರಣ ಹುಟ್ಟುಹಾಕಲಾಗಿದೆ. ಚಿತ್ರನಟ ಸುದೀಪ್ ಹಾಗೂ ದರ್ಶನ್ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಬೇಸರ ಮೂಡಿಸಿವೆ’ ಎಂದರು.

ADVERTISEMENT

‘ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರವನ್ನು ಹಂಸಲೇಖ ಹಾಗೂ ಮದಕರಿ ನಾಯಕ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ಯಾರು ಸೂಕ್ತವಾಗುತ್ತಾರೋ ಅಂಥವರನ್ನು ನಿರ್ದೇಶಕರು, ನಿರ್ಮಾಪಕರು ಆಯ್ಕೆ ಮಾಡುತ್ತಾರೆ. ಪೌರಾಣಿಕ ಕಥೆಗಳಿಗೆ ಜಾತಿ ಬಣ್ಣ ಕಟ್ಟಬಾರದು’ ಎಂದರು.

‘ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರನ್ನು ಟೀಕಿಸುವುದು ನಿಲ್ಲಬೇಕು. ಟೀಕೆಗಳಿಂದ ಕಲಾವಿದರಿಗೆ ನೋವಾಗಿದ್ದರೆ ಸಮಾಜದ ಪರವಾಗಿ ಕ್ಷಮೆಯಾಚಿಸುತ್ತೇನೆ. ಮದಕರಿ ನಾಯಕ ಪಾತ್ರದ ಕುರಿತು ಗೊಂದಲ ಮೂಡಿಸುತ್ತಿರುವವರು ಸಮಾಜ ಒಳಿತಿಗಾಗಿ ಹೋರಾಟ ಮಾಡಲಿ’ ಎಂದು ಸಲಹೆ ನೀಡಿದರು.

ಬಿ.ಟಿ. ಜಗದೀಶ್, ಶಶಿ, ಸಂತೋಷ್, ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.