ADVERTISEMENT

ಮದಾಂಜನೇಯ ಸ್ವಾಮಿಯ ‘ಮುಳ್ಳುಪವಾಡ’ ಇಂದು

ಹಳೇಕುಂದೂರು ಗ್ರಾಮದಲ್ಲಿ ದಸರಾ ಉತ್ಸವ

ಶ್ವೇತಾ ಜಿ.
Published 6 ಅಕ್ಟೋಬರ್ 2022, 5:34 IST
Last Updated 6 ಅಕ್ಟೋಬರ್ 2022, 5:34 IST
ಹೊಸದುರ್ಗ ದ ಹಳೇಕುಂದೂರಿನ ಮದಾಂಜನೇಯ ಸ್ವಾಮಿ ಉತ್ಸವ ಮೂರ್ತಿ
ಹೊಸದುರ್ಗ ದ ಹಳೇಕುಂದೂರಿನ ಮದಾಂಜನೇಯ ಸ್ವಾಮಿ ಉತ್ಸವ ಮೂರ್ತಿ   

ಹೊಸದುರ್ಗ: ತಾಲ್ಲೂಕಿನ ಹಳೇಕುಂದೂರು ಗ್ರಾಮದ ಮದಾಂಜನೇಯ ಸ್ವಾಮಿಯ ದಸರಾ ಉತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತದೆ. ಸೆ.6ರಂದು ‘ಮುಳ್ಳುಪವಾಡ’ ನಡೆಯಲಿದೆ.

ದಸರಾ ಮಹೋತ್ಸವದ ಸಮಯದಲ್ಲಿ ಮಹಾಲಯ ಅಮಾವಾಸ್ಯೆಯಿಂದ ವಿಜಯದಶಮಿ
ವರೆಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ಬಾರಿ ಸೆ. 25ರಿಂದ ದಸರಾ ಉತ್ಸವ ಆರಂಭವಾಗಿದ್ದು, ಆ. 5ರವರೆಗೆ ದಸರಾ ಮಹೋತ್ಸವ ನಡೆಯಿತು. ಕಡೆಯದಿನವಾದ ಗುರುವಾರ ನಡೆಯಲಿರುವ ‘ಮುಳ್ಳುಪವಾಡ’ಕ್ಕೆ ಸಾವಿರಾರು ಭಕ್ತರು ಬರುವ ನಿರೀಕ್ಷೆಯಿದೆ.

ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುವ ಕಾರಣ ನೂರಕ್ಕೂ ಅಧಿಕ ಭಕ್ತರು ಬರುತ್ತಾರೆ.

ADVERTISEMENT

ಸೆ. 25ರಂದು 500– 600 ಜನ ಕಾಲ್ನಡಿಗೆಯಲ್ಲಿ ತೆರಳಿ ಕಲ್ಲತ್ತಿಗಿರಿಯಲ್ಲಿ ಗಂಗಾಪೂಜೆ ಸಲ್ಲಿಸಿದರು. ಸಂಜೆ ಸ್ವಾಮಿಗೆ ನವಗ್ರಹ ಪೂಜೆ ನಡೆಸುವುದರ ಮೂಲಕ ನವರಾತ್ರಿ ಉತ್ಸವ ಆರಂಭಿಸಲಾಯಿತು. ಆ. 3ರವರೆಗೂ ದೇವರಿಗೆ ನಿತ್ಯ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾಪೂಜೆ ನೈವೇದ್ಯ, ಮಹಾಮಂಗಳಾರತಿ ಸಲ್ಲಿಸಲಾಗಿದೆ. ಆ. 4ರ ಆಯುಧಪೂಜೆ ದಿನದಂದು ಕುದುರೆಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದವು.

ಆ. 5ರಂದು ದಸರಾ ಅಂಬಿನೋತ್ಸವದ ಅಂಗವಾಗಿ ನವಗ್ರಹ ಪೂಜೆ, ಸಹಸ್ರನಾಮಾರ್ಚನೆ, ಮೂಲ ದೇವರಿಗೆ ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆ ನಡೆಯಿತು. ನಂತರ ರಾತ್ರಿ 9.30ಕ್ಕೆ ಗ್ರಾಮದ ಹೆಣ್ಣು ಮಕ್ಕಳಿಂದ ಆರತಿ ಉತ್ಸವ ನಡೆಯಿತು.

ಅ. 6ರ ನಸುಕಿನಲ್ಲಿ ನೂರಾರು ಭಕ್ತರೊಟ್ಟಿಗೆ ಮದಾಂಜನೇಯ
ಸ್ವಾಮಿ ಹಾಗೂ ಅಂತರಘಟ್ಟಮ್ಮ ಮತ್ತು ಕಾಯಮ್ಮ ದೇವಿ ಸಮ್ಮುಖದಲ್ಲಿ ದಸರಾ ಅಂಬಿನೋತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.