ಹೊಳಲ್ಕೆರೆ: ‘ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಡಿ.ಆರ್.ಪಾಂಡುರಂಗ ಸ್ವಾಮಿ ಆರೋಪಿಸಿರುವಂತೆ ನಾನು ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಅಗೌರವ ತರುವಂತೆ ಮಾತನಾಡಿಲ್ಲ’ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ತಿಳಿಸಿದರು.
‘ಎಸ್.ಕೆ.ಬಸವರಾಜನ್‌ಗೂ ಮಲ್ಲಾಡಿಹಳ್ಳಿಗೂ ಏನು ಸಂಬಂಧ? 2008ರಲ್ಲಿ ಶಿವಮೂರ್ತಿ ಮುರುಘಾ ಶರಣರು ಎಸ್.ಕೆ.ಬಸವರಾಜನ್ ಅವರನ್ನು ಮಲ್ಲಾಡಿಹಳ್ಳಿ ಆಶ್ರಮದ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದರು. ಅವರು ಜೈಲಿಗೆ ಹೋದ ಮೇಲೆ ಬಸವರಾಜನ್ ನಾನೇ ಕಾರ್ಯದರ್ಶಿ ಎಂದು ಮತ್ತೆ ಆಶ್ರಮ ಸೇರಿಕೊಂಡಿದ್ದಾರೆ. ತನ್ನ ಅವ್ಯವಹಾರಗಳನ್ನು ಮುಚ್ಚಿಕೊಳ್ಳಲು ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ನೇಮಕ ಮಾಡಿಕೊಂಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಮಠಕ್ಕೆ ಹೋದಾಗ ಮಾದಾರ ಚೆನ್ನಯ್ಯ ಸ್ವಾಮೀಜಿ ನನ್ನನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಮಲ್ಲಾಡಿಹಳ್ಳಿ ಆಶ್ರಮದ ವಿಷಯದಲ್ಲಿ ಅವರು ಬಲಿಪಶು ಆಗಬಾರದು ಎಂಬ ಉದ್ದೇಶ ನನ್ನದು. ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ಆಶ್ರಮದಲ್ಲಿ ಟ್ರಸ್ಟಿಗಳು ಎಂದು ಹೇಳಿಕೊಳ್ಳುವವರು ತಮ್ಮ ಅವ್ಯವಹಾರಗಳಿಂದ ಪಾರಾಗಲು ಸ್ವಾಮೀಜಿಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.
‘ಪಾಂಡುರಂಗಸ್ವಾಮಿ, ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿದ್ದಾರೆ. ಅವರು ಎಲ್ಲಾ ಜಾತಿ, ಜನಾಂಗಕ್ಕೂ ಸ್ವಾಮೀಜಿಯೇ ಹೊರತು ಕೇವಲ ಮಾದಿಗ ಜನಾಂಗದವರಿಗಲ್ಲ. ತಾಲ್ಲೂಕಿನಲ್ಲಿ ನನಗೆ ಮಾದಿಗ ಸಮುದಾಯದೊಂದಿಗೆ ಆತ್ಮೀಯ ಸಂಬಂಧ ಇದೆ. ನಾನು 2 ಬಾರಿ ಶಾಸಕನಾದಾಗಲೂ ಶೇ 90ರಷ್ಟು ಮಾದಿಗರು ಮತ ನೀಡಿದ್ದಾರೆ. ನಾನೂ ಕೂಡ ಅವರ ಋಣ ತೀರಿಸುವ ಕೆಲಸ ಮಾಡಿದ್ದು, ನಾನು ಶಾಸಕನಾದ ಅವಧಿಯಲ್ಲಿ 14 ಸಾವಿರ ರೈತರಿಗೆ ಸಾಗುವಳಿ ಚೀಟಿ ಕೊಡಿಸಿದ್ದೇನೆ. ಕೆಲವು ಗ್ರಾಮಗಳಲ್ಲಿ ಗಲಾಟೆ ನಡೆದಾಗ ಮಾದಿಗ ಸಮುದಾಯದ ರಕ್ಷಣೆಗೆ ನಿಂತಿದ್ದೇನೆ’ ಎಂದು ವಿವರಣೆ ನೀಡಿದರು.
‘ರಾಘವೇಂದ್ರ ಸ್ವಾಮೀಜಿ ಭಿಕ್ಷೆ ಬೇಡಿ ಮಲ್ಲಾಡಿಹಳ್ಳಿ ಆಶ್ರಮ ಕಟ್ಟಿದ್ದರು. ನಾನು ಶಾಸಕನಾಗಿದ್ದಾಗ ಸ್ವಾಮೀಜಿಯ ಕೋರಿಕೆಯಂತೆ ಆಶ್ರಮಕ್ಕೆ ಬಿ.ಪಿ.ಇಡಿ ಕಾಲೇಜು ಮಂಜೂರು ಮಾಡಿಸಿದ್ದೆ. ಆಶ್ರಮ ಸಮಸ್ತ ತಾಲ್ಲೂಕಿನ ಜನರಿಗೆ ಸೇರಿದ ಆಸ್ತಿ. ಅದು ಹಾಳಾಗಬಾರದು. ಈಗ ಇರುವ ಟ್ರಸ್ಟಿಗಳು ಆಶ್ರಮವನ್ನು ದಿವಾಳಿ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.
‘ಹೊರಗಿನವರನ್ನೇ ಟ್ರಸ್ಟಿ ಮಾಡಿಕೊಂಡಿರುವ ಬಸವರಾಜನ್ ತಾಲ್ಲೂಕಿನ ಕೇವಲ ನಾಲ್ವರನ್ನು ನೇಮಕ ಮಾಡಿಕೊಂಡಿದ್ದಾರೆ. ಅವರಿಗೆ ಆಶ್ರಮದ ದುಡ್ಡು ಬೇಕೇ ಹೊರತು ಮಲ್ಲಾಡಿಹಳ್ಳಿಯ ಜನ ಬೇಕಿಲ್ಲ. ಅವರು ಮಲ್ಲಾಡಿಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರ ಬೃಹತ್ ಸಭೆ ನಡೆಸಿ ಒಪ್ಪಿಗೆ ಪಡೆದು ಬೇಕಾದರೆ ಕಾರ್ಯದರ್ಶಿಯಾದರೆ ನಮ್ಮ ಅಭ್ಯಂತರ ಇಲ್ಲ. ಆಶ್ರಮ ಉಳಿಸುವುದು ನನ್ನ ಉದ್ದೇಶ. ಟ್ರಸ್ಟಿಗಳನ್ನು ಓಡಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.
ರೈತ ಮುಖಂಡ ಸಂತೋಷ್, ಗೋವಿಂದಪ್ಪ, ಪುಟ್ಟಸ್ವಾಮಿ, ತಿಪ್ಪೇಸ್ವಾಮಿ, ಕರಣ್, ನಾಗಾ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.