ADVERTISEMENT

‘ಇತಿಹಾಸ ಸೃಷ್ಟಿಸಿದ ಮಹಾ ಗಣಪತಿ ಉತ್ಸವ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:32 IST
Last Updated 14 ಸೆಪ್ಟೆಂಬರ್ 2025, 5:32 IST
ಶೋಭಾಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ ಕೇಸರಿ ಧ್ವಜ ಹಾರಿಸಿದರು
ಶೋಭಾಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಗೋವಿಂದ ಕಾರಜೋಳ ಕೇಸರಿ ಧ್ವಜ ಹಾರಿಸಿದರು   

ಚಿತ್ರದುರ್ಗ: ‘ಐತಿಹಾಸಿಕ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಶೋಭಾಯಾತ್ರೆ ಇತಿಹಾಸ ಸೃಷ್ಟಿ ಮಾಡಿದೆ. ವಿಶ್ವದಾದ್ಯಂತ ಕೋಟ್ಯಂತರ ಕಣ್ಣುಗಳು ಕೋಟೆನಗರಿಯತ್ತ ನೋಡುತ್ತಿವೆ’ ಎಂದು ವಿಶ್ವ ಹಿಂದೂ ಪರಿಷತ್‌ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

ಶೋಭಾಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ತೊಂದರೆ ನೀಡುವ ಕೆಲಸ ಮಾಡುತ್ತಿದೆ. ಗಣೇಶ ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಅಡ್ಡಿಯಾಗುವುದು ಸರಿಯಲ್ಲ. ಗಣೇಶೋತ್ಸವದಲ್ಲಿ ಪಾಲ್ಗೊಳ್ಳದಂತೆ ಪ್ರಮುಖರಿಗೆ ನಿರ್ಬಂಧ ಹೇರುವ ಕೆಲಸ ಮಾಡಿದ್ದಾರೆ. ಜಿಲ್ಲಾಡಳಿತ ನನಗೂ ನಿರ್ಬಂಧ ಹೇರಿತ್ತು. ಆದರೆ ಹೈಕೋರ್ಟ್‌ ನನಗೆ ಅನುಮತಿ ನೀಡಿದ ಕಾರಣ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು’ ಎಂದರು.

‘ನಾನು ಮಹಾ ಗಣೇಶನ ಬಳಿ ಪಾರ್ಥನೆ ಮಾಡಿದ್ದೆ. ಗಣಪತಿ ಆಶೀರ್ವಾದದಿಂದ ನಾನು ಇಲ್ಲಿಗೆ ಬರಲು ಸಾಧ್ಯವಾಗಿದೆ. ಹಿಂದೂ ಗಣಪತಿ ಶಕ್ತಿ ಏನು ಎಂದು ಇವತ್ತು ಗೊತ್ತಾಗಿದೆ. ಕಳೆದ 18ವರ್ಷಗಳಿಂದ ಹಿಂದೂ ಗಣಪತಿ ಕಾರ್ಯಕ್ರಮ ನಡೆಯುತ್ತಿದೆ. ಉತ್ಸವ ಬಹಳ ಶಾಂತಯುತವಾಗಿ ನಡೆಯುತ್ತಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡುವ ಮೂಲಕ ದೇಶಕ್ಕೆ ಸಂದೇಶ ನೀಡಿದ್ದೇವೆ. ಶೋಭಾಯಾತ್ರೆಗೆ ಲಕ್ಷಾಂತರ ಜನರು ಶ್ರದ್ಧೆಯಿಂದ ಸೇರಿದ್ದಾರೆ’ ಎಂದರು.

‘ಸರ್ಕಾರ ಕೂಡ ಮಾಡದ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಮಹಾಗಣಪತಿ ಕಾರ್ಯಕ್ರಮ ಒಟ್ಟು ಸೇರಿಸುವ ಕಾರ್ಯಕ್ರಮ. ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ ಎನ್ನುವ ಸಂದೇಶ ನಮ್ಮದು’ ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಮಾತನಾಡಿ ‘ಮೂರು ದಿನದಿಂದ ಉತ್ಸವಕ್ಕೆ ಏನೆಲ್ಲ ಅಡಚಣೆಯಾಯಿತು ಎಂಬ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಾಗಣಪತಿ ಉತ್ಸವಕ್ಕೆ ಒಂದು ಶಕ್ತಿ ಇದೆ. ಏನೇ ಅಡಚಣೆ ಆದರೂ ಅದೆಲ್ಲವೂ ನಿವಾರಣೆಯಾಗಲಿದೆ. ಈ ಮಾತಿಗೆ ಶೋಭಾಯಾತ್ರೆಗೆ ಸೇರಿದ ಲಕ್ಷಾಂತರ ಜನರೇ ಸಾಕ್ಷಿ. ಈ ಉತ್ಸವ ಮಧ್ಯ ಕರ್ನಾಟಕದ ಪ್ರಸಿದ್ದ ಉತ್ಸವವಾಗಿದ್ದು ಎಲ್ಲರೂ ಸಹಕಾರ ನೀಡಬೇಕು’ಎಂದರು.

ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಭೋವಿಗುರು ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಂಜಾರ ಮಠದ ಸೇವಾಲಾಲ್ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮಾನಂದ ಸ್ವಾಮೀಜಿ, ಮಾಚಿದೇವ ಮಠದ ಬಸವಮಾಚಿದೇವ ಸ್ವಾಮೀಜಿ, ಗಣೇಶೋತ್ಸವ ಸಮಿತಿ ಅದ್ಯಕ್ಷ ಶರಣ್, ವಿಎಚ್‌ಪಿ ಮುಖಂಡ ಪ್ರಭಂಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.