ADVERTISEMENT

ಸಂಕ್ರಾಂತಿ: ಕಬ್ಬಿನ ವ್ಯಾಪಾರದ್ದೆ ಕಾರುಬಾರು

ಜಿಲ್ಲೆಯ ಹಲವೆಡೆ ಹಬ್ಬಕ್ಕಾಗಿ ಸಿದ್ಧತೆಯಲ್ಲಿ ತೊಡಗಿರುವ ಜನತೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:29 IST
Last Updated 13 ಜನವರಿ 2021, 13:29 IST
ಸಂಕ್ರಾಂತಿ ಹಬ್ಬದ ಅಂಗವಾಗಿ ಚಿತ್ರದುರ್ಗದ ಸಂತೆಹೊಂಡ ರಸ್ತೆಯಲ್ಲಿ ಬುಧವಾರ ಕಬ್ಬು ಖರೀದಿಸುತ್ತಿರುವ ಗ್ರಾಹಕರು 
ಸಂಕ್ರಾಂತಿ ಹಬ್ಬದ ಅಂಗವಾಗಿ ಚಿತ್ರದುರ್ಗದ ಸಂತೆಹೊಂಡ ರಸ್ತೆಯಲ್ಲಿ ಬುಧವಾರ ಕಬ್ಬು ಖರೀದಿಸುತ್ತಿರುವ ಗ್ರಾಹಕರು    

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಗುರುವಾರ ಆಚರಿಸಲಿರುವ ಮಕರ ಸಂಕ್ರಾಂತಿ ಹಬ್ಬಕ್ಕೆ ಬೆಲೆ ಏರಿಕೆ ಲೆಕ್ಕಿಸದೇ ಕಬ್ಬು, ಎಳ್ಳು-ಬೆಲ್ಲ, ರೊಟ್ಟಿ ಖರೀದಿಸಲು ಜನರು ಮುಂದಾದರು.

ಹಬ್ಬಕ್ಕೆ ಕಬ್ಬನ್ನು ಖರೀದಿಸುವ ಸಂಪ್ರದಾಯ ಇರುವ ಕಾರಣ ನಗರದ ಮಾರುಕಟ್ಟೆಗೆ ಮೂರು ದಿನ ಮುಂಚಿತವಾಗಿಯೇ ಕಬ್ಬು ಲಗ್ಗೆ ಇಟ್ಟಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಬ್ಬನ್ನು ತಂದು ಮಾರಾಟ ಮಾಡಲು ಅನೇಕರು ಮುಂದಾಗಿದ್ದರು. ವ್ಯಾಪಾರಸ್ಥರು ರಿಪ್ಪನ್‌ಪೇಟೆ, ಮಂಡ್ಯದಿಂದ ಹೆಚ್ಚಾಗಿ ಕಬ್ಬು ತರಿಸಿದ್ದರು.

ಸಂತೆ ಹೊಂಡ, ಗಾಂಧಿ ವೃತ್ತ, ಚಳ್ಳಕೆರೆ ಟೋಲ್‌ಗೇಟ್, ಚೈತನ್ಯ ವೃತ್ತ ಮುಂಭಾಗ ಸೇರಿ ವಿವಿಧೆಡೆ ಬುಧವಾರ ಬೆಳಿಗ್ಗೆಯಿಂದಲೇ ಮಾರಾಟ ಜೋರಾಗಿ ನಡೆಯಿತು. ಜೋಡಿ ಕಬ್ಬು ₹ 100, ₹ 80, ₹ 60ರಂತೆ ಮಾರಾಟವಾದವು. ವ್ಯಾಪಾರಸ್ಥರ ಬಳಿ ಗ್ರಾಹಕರು ಚೌಕಾಸಿಗೂ ಇಳಿದರು.

ADVERTISEMENT

ಎಳ್ಳು ಕೆ.ಜಿ ₹ 240, ಸಕ್ಕರೆ ಅಚ್ಚು ಕೆ.ಜಿ ₹ 200, ಶೇಂಗಾ ಕೆ.ಜಿ. ₹ 110 ಕಡಲೆ, ಬೆಲ್ಲ, ಜಿರಿಗೆ ಬೆಲೆ ಹೆಚ್ಚಾಗಿದ್ದರೂ ಸಂಪ್ರದಾಯದಂತೆ ಹಬ್ಬ ಆಚರಿಸಲೇಬೇಕು ಎಂಬ ಮನಸ್ಸುಳ್ಳ ಗ್ರಾಹಕರು ಅಂಗಡಿಗಳಲ್ಲಿ ಎಳ್ಳು-ಬೆಲ್ಲಕ್ಕೆ ಬೇಕಾಗುವ ಅಗತ್ಯ ಪದಾರ್ಥಗಳನ್ನು ಖರೀದಿಸಿದರು.

ಹಬ್ಬದ ಅಂಗವಾಗಿ ಬೆಳಿಗ್ಗೆ ಮನೆಯಲ್ಲಿ ಪೂಜೆ ಸಲ್ಲಿಸಿ, ದೇಗುಲಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸುತ್ತಾರೆ. ನಂತರ ಸಂಬಂಧಿಕರಿಗೆ, ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಎಳ್ಳು ಬೀರುವ ಪದ್ಧತಿ ಇದೆ. ಅದಕ್ಕಾಗಿ ಎಳ್ಳು ಪೊಟ್ಟಣಗಳ ಸಿದ್ಧತೆಯಲ್ಲೂ ಮಹಿಳೆಯರು ಉತ್ಸುಕತೆ ತೋರಿದರು.

ಅಂಗಡಿಗಳ ಬಳಿ ಎಳ್ಳು, ಬೆಲ್ಲ, ಸಕ್ಕರೆ ಸಿದ್ಧ ಪೊಟ್ಟಣಗಳ ಖರೀದಿಗೂ ಮಹಿಳೆಯರು ಮುಂದಾದರು. ಇದೇ ಸಂದರ್ಭದಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.

ದೇಗುಲಗಳಲ್ಲೂ ಸಕಲ ಸಿದ್ಧತೆ ನಡೆಯುತ್ತಿದೆ. ಕೆಲ ದೇಗುಲಗಳೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಜ.14ರಂದು ಬೆಳಿಗ್ಗೆ 5ಕ್ಕೆ ಅನೇಕ ಕಡೆಗಳಲ್ಲಿ ಪೂಜೆ, ಮಹಾಮಂಗಳಾರತಿ ನೆರವೇರಲಿದೆ. ಹೀಗಾಗಿ, ಬುಧವಾರ ರಾತ್ರಿಯಿಂದಲೇ ಪುಷ್ಪಾಲಂಕಾರ ಸೇರಿ ದೇವರ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲು ಅರ್ಚಕರು ತಯಾರಿ ನಡೆಸಿದರು.

ಸುಗ್ಗಿ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಲು ಹಳ್ಳಿಗಳಲ್ಲೂ ಸಿದ್ಧತೆಗಳು ಕಂಡು ಬಂದವು.ಒಂದು ದಿನ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದಾಡಿದವು. ಸಂಬಂಧಿಕರಿಗೆ, ಸ್ನೇಹಿತರಿಗೆ, ಆತ್ಮೀಯರಿಗೆ, ಹಿತೈಷಿಗಳಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

‘ಎಳ್ಳು ಬೆಲ್ಲ ಸವಿಯುತ್ತಾ, ಕಬ್ಬಿನ ಸಿಹಿಯ ಹೀರುತ್ತಾ, ದ್ವೇಷ, ಅಸೂಹೆ ಮರೆಯುತ್ತಾ, ಸವಿ ಮಾತುಗಳನ್ನು ನುಡಿಯೋಣ..’ ಹೀಗೆ ಇನ್ನೂ ಅನೇಕ ರೀತಿಯ ಮಕರ ಸಂಕ್ರಾಂತಿಯ ಸಂದೇಶಗಳು ವಾಟ್ಸ್‌ಆ್ಯಪ್, ಸ್ಟೇಟಸ್, ಫೇಸ್‌ಬುಕ್‌ಗಳಲ್ಲಿ ಹರಿದಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.