
ಚಿಕ್ಕಜಾಜೂರು: ಗುರುವಾರ ನಡೆಯುವ ಮಕರ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಗೆ ಗ್ರಾಮದ ದೇವಾಲಯಗಳಲ್ಲಿ ಭರದ ಸಿದ್ಧತೆ ಕಂಡು ಬಂದಿತು.
ಡಿ. 16ರಿಂದ ಆರಂಭವಾದ ಧನುರ್ಮಾಸ ಪೂಜೆ ಬುಧವಾರ ಬೆಳಿಗ್ಗೆ ನಡೆದ ವಿಶೇಷ ಪೂಜೆಯೊಂದಿಗೆ ಸಮಾಪ್ತಿಯಾಯಿತು. ಬುಧವಾರ ಮುಂಜಾನೆ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಗುರುವಾರ ನಡೆಯುವ ಮಕರ ಸಂಕ್ರಾಂತಿಯ ವಿಶೇಷ ಪೂಜೆಗಾಗಿ ಗ್ರಾಮದ ಆಂಜನೇಯಸ್ವಾಮಿ, ರಾಮಕೃಷ್ಣ, ಬನಶಂಕರಿ ಹಾಗೂ ವೀರಭದ್ರಸ್ವಾಮಿ ದೇವಾಯಗಳಲ್ಲಿ ಅಲಂಕಾರ ಜೋರಾಗಿ ನಡೆಯುತ್ತಿದ್ದದು ಕಂಡು ಬಂದಿತು. ಗ್ರಾಮ ದೇವರು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣವನ್ನು ಸಿಂಗರಿಸಲಾಗಿದೆ.
ಗುರುವಾರ ಬೆಳಿಗ್ಗೆ 6 ಗಂಟೆಯ ನಂತರ, ಮಕರ ಸಂಕ್ರಮಣದ ವಿಶೇಷ ಪೂಜೆಯನ್ನು ನಡೆಸಲಾಗುವುದು. ಅಲ್ಲದೆ, ಸಂಜೆ ಆಂಜನೇಯಸ್ವಾಮಿ ಉತ್ಸವ ಮೂರ್ತಿ ಹಾಗೂ ಭೂತಪ್ಪ ಸ್ವಾಮಿಗಳನ್ನು ಮೊಲದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುವುದು.
ಗ್ರಾಮದ ಹೊರ ವಲಯದಲ್ಲಿ ದೂಪ ಸೇವೆ ನಡೆಸಿ, ಮೊಲಕ್ಕೆ ವಿಶೇಷ ಪೂಜೆ ಸಲ್ಲಿಸಿ, ಅದನ್ನು ಅಡವಿಗೆ ಬಿಡಲಾಗುವುದು. ಇದರೊಂದಿಗೆ ಒಂದು ತಿಂಗಳ ಕಾಲ ನಡೆದ ಧನುರ್ಮಾಸದ ಧಾರ್ಮಿಕ ಪೂಜೆಗಳಿಗೆ ತೆರೆ ಬೀಳುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.